Home ಜಿಲ್ಲೆ ಬೆಂಗಳೂರು ರೈತರ,ಮಹಿಳೆಯರ ಜೀವನಾಡಿ ಡಿಸಿಸಿ ಬ್ಯಾಂಕ್ ಉಳಿಸಿ-ದಯಾನಂದ್

ರೈತರ,ಮಹಿಳೆಯರ ಜೀವನಾಡಿ ಡಿಸಿಸಿ ಬ್ಯಾಂಕ್ ಉಳಿಸಿ-ದಯಾನಂದ್

ಕೋಲಾರ.ಫೆ,೧೩- ರೈತರು, ಮಹಿಳೆಯರ ಆರ್ಥಿಕ ಜೀವನಾಡಿಯಾಗಿರುವ ಡಿಸಿಸಿ ಬ್ಯಾಂಕ್ ಉಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀಟರ್ ಬಡ್ಡಿ ದಂಧೆ ಬಲಗೊಳ್ಳಲು ಕಾರಣವಾಗುತ್ತದೆ ಎಂದು ತಾಲೂಕಿನ ಕಡಗಟ್ಟೂರು ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಂಘದ ಅಧ್ಯಕ್ಷ ಕೆ.ವಿ.ದಯಾನಂದ ಎಚ್ಚರಿಸಿದರು.


ತಾಲ್ಲೂಕಿನ ಕಡಗಟ್ಟೂರು ಸೊಸೈಟಿ ಸಭಾಂಗಣದಲ್ಲಿ ಬುಧವಾರ ಮನೆ ನಿರ್ಮಾಣ, ಕುರಿಶೆಡ್ ನಿರ್ಮಾಣಕ್ಕೆ, ಹುಳುಸಾಕಾಣಿಕೆ ಮನೆ, ಬೆಳೆಸಾಲ ಸುಮಾರು ೩೦ ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡಿ ಡಿಸಿಸಿ ಬ್ಯಾಂಕ್ ಈಗಾಗಲೇ ಗ್ರಾಹಕರಿಂದ ದೂರವಾಗಿದೆ. ನೀಡಲಾಗಿರುವ ಸಾಲ ವಸೂಲಿಯಲ್ಲಿ ಹಿಂದೆ ಉಳಿದು ಆರ್ಥಿಕ ಶಕ್ತಿ ಕಳೆದುಕೊಂಡಿದೆ ಎಂದು ದೂರಿದರು.


ಒಂದು ಕಾಲದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ, ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬುವ ಪರಿಸ್ಥಿತಿಯಲ್ಲಿತ್ತು. ಈಗ ಶಕ್ತಿಯನ್ನು ಕಳೆದುಕೊಂಡಿದೆ. ಈ ಬಗ್ಗೆ ಮೊದಲಿನಿಂದಲೂ ಎಚ್ಚರಿಸುತ್ತಾ ಬಂದಿದ್ದರೂ ಯಾರು ಎಚ್ಚೆತ್ತುಕೊಳ್ಳಲಿಲ್ಲ ಎಂದು ಕಿಡಿಕಾರಿದರು.


ಯಾರ ಖಾತೆಯಲ್ಲಿ ಹಣ ಇದೆ ಎಂಬುದನ್ನು ಪರಿಶೀಲಿಸಿ ಗ್ರಾಹಕರ ಗಮನಕ್ಕೆ ಇಲ್ಲದೆ ಅಧಿಕಾರಿಗಳೇ ಸ್ವಯಂ ಡ್ರಾ ಮಾಡಿಕೊಳ್ಳುತ್ತಿದ್ದಾರೆ. ಆ ಮೂಲಕ ಠೇವಣಿದಾರರ ಖಾತೆಗೆ ಕನ್ನ ಹಾಕಿ, ಅನ್ನದಾತರ ಹೊಟ್ಟೆಗೆ ಬರೆ ಎಳೆಯುವ ಕೆಲಸ ಮಾಡುತ್ತಿದ್ದಾರೆ. ಹಗರಣದಲ್ಲಿ ಭಾಗಿಯಾಗಿರುವ ಅಧಿಕಾರಿಗೆ ಪೊಲೀಸ್ ಬೆತ್ತದ ರುಚಿ ತೋರಿಸಿ ದುರುಪಯೋಗ ಪಡಿಸಿಕೊಂಡಿರುವ ಹಣ ಮರು ಪಾವತಿ ಮಾಡಿಸಬೇಕೆಂದು ಒತ್ತಾಯಿಸಿದರು.


ಈ ಹಗರಣಗಳು ನಡೆಯುತ್ತಿರುವ ಬಗ್ಗೆ ಜನಪ್ರತಿನಿಧಿಗಳು, ಆಡಳಿತಾಧಿಕಾರಿಗಳ ಗಮನಕ್ಕೆ ಇದ್ದರು ಸಹ ಇಚ್ಚಾಶಕ್ತಿ ಕೊರತೆಯಿಂದ ಬ್ಯಾಂಕ್‌ನತ್ತ ಗಮನ ಹರಿಸುತ್ತಿಲ್ಲ. ಇನ್ನಾದರು ಎಚ್ಚೆತ್ತುಕೊಂಡು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.


ಸಂಘದ ಸ್ವಂತ ಬಂಡವಾಳದಿಂದಲೇ ಸಾಲ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಮಹಿಳಾ ಸಂಘಗಳಿಗೆ, ವೇತನ, ನಿವೇಶ, ಮನೆ ನಿರ್ಮಾಣ, ಹಸು ಸಾಲ, ಬೆಳೆ ಸಾಲ, ಮಾಧ್ಯಮಾವಧಿ ಸೇರಿದಂತೆ ಒಟ್ಟು ೨.೮೫ ಕೋಟಿ ರೂ. ಮೊತ್ತದ ಸಾಲ ಇದುವರೆಗೂ ವಿತರಣೆ ಮಾಡಲಾಗಿದ್ದು, ಪ್ರಾಮಾಣಿಕವಾಗಿ ಮರುಪಾವತಿ ಮಾಡುವ ಮೂಲಕ ಸಂಘಕ್ಕೆ ಶಕ್ತಿ ತುಂಬಿದ್ದಾರೆ. ಮಹಿಳಾ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳಿಗೆ, ಕುರಿ ಶೇಡ್, ನಿವೇಶನ, ಸಾಗಾಣಿಕೆ, ಮನೆ ನಿರ್ಮಾಣಕ್ಕೆ ಬೆಳೆ ಸಾಲ ಒಟ್ಟು ೬೦ ಲಕ್ಷ ರೂ ವಿತರಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.


ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಮಂಜುನಾಥ್, ಸೋಮಶೇಖರ್, ರಮೇಶ್, ಎಂ.ಬೈಯ್ಯಣ್ಣ, ಬಿ.ಎಂ.ರಾಮೇಗೌಡ, ಕುಮಾರಚಾರಿ, ಮುನಿಕೃಷ್ಣಪ್ಪ, ಸುರೇಶ್, ಸಿ.ಡಿ.ರಾಮ ಚಂದ್ರೇಗೌಡ, ಗೋಪಾಲಕೃಷ್ಣ, ರಾಜಣ್ಣ, ಸಿಇಒ ಮುನೀಶ್ವರಪ್ಪ ಉಪಸ್ಥಿತರಿದ್ದರು.