
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೨೫: ಮಹಾತ್ಮ ಗಾಂಧಿ ನಗರದ ಸಿಸ್ಟರ್ ನಿವೇದಿತಾ ಪಬ್ಲಿಕ್ ಪೂರ್ವ ಶಾಲೆಯಲ್ಲಿ ಮಂಗಳವಾರ ಸರಸ್ವತಿ ಪೂಜೆ ಹಾಗೂ ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ಜರುಗಿತು.
ಮುಂಬೈನ ಸೇಠ್ ತಾಪಿದಾಸ್ ಮತ್ತು ತುಳಸಿದಾಸ್ ವ್ರಜದಾಸ್ ಚಾರಿಟೇಬಲ್ ಟ್ರಸ್ಟ್ ಕರ್ನಾಟಕದ ರಾಜ್ಯ ಸಂಯೋಜಕÀ ನಿವೃತ್ತ ಅಭಿಯಂತರ ವಿಶ್ವನಾಥ ಸಿಂದಗಿ ಅವರು ಶ್ರೀ ಸರಸ್ವತಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್‌ಗಳನ್ನು ವಿತರಿಸಿ ಮಾತನಾಡಿ, ಮಕ್ಕಳ ಸೇವೆಯೇ ದೇವರ ಸೇವೆ. ಅವರ ನಿಷ್ಕಲ್ಮಷ ಮನಸ್ಸು ಬಿಳಿ ಹಾಳೆ ಇದ್ದ ಹಾಗೆ. ನಾವು ಏನು ಬರೆಯುತ್ತೇವೆಯೂ ಅದು ಮನಸಿನಲ್ಲಿ ಮೂಡುತ್ತದೆ. ಕಾರಣ ಮಕ್ಕಳಲ್ಲಿ ಒಳ್ಳೆಯ ವಿದ್ಯೆ, ವಿನಯ, ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ತುಂಬಬೇಕು. ಅಂಥಹ ಒಳ್ಳೆಯ ಕಾರ್ಯವನ್ನು ನಗರದ ಹೊರವಲಯ ಗಾಂಧಿ ನಗರದಂತ ಹಿಂದುಳಿದ ಪ್ರದೇಶದಲ್ಲಿ ಸಿಸ್ಟರ್ ನಿವೇದಿತಾ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆದು ಕಳೆದ ಹತ್ತು ವರ್ಷಗಳಿಂದ ಯಾವುದೇ ಫಲಾಪೇಕ್ಷ ಇಲ್ಲದೇ ಬಡ ಮಕ್ಕಳ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ದಾನೇಶ ಅವಟಿ ಹಾಗೂ ನಿರ್ಮಲಾ ಅವಟಿ ದಂಪತಿಗಳ ಸಾಮಾಜಿಕ ಕಾರ್ಯ ಅನನ್ಯವಾದುದು. ಇಂಥಹ ಶಾಲೆಯನ್ನು ಆಯ್ಕೆ ಮಾಡಿ ನಮ್ಮ ಸಂಸ್ಥೆ ಸಹಾಯ ಸಹಕಾರ ನೀಡುತ್ತಿದ್ದು ನಮ್ಮ ಟ್ರಸ್ಟ್ ಕಳೆದ ನೂರಾ ಐವತ್ತು ವರ್ಷಗಳಿಂದ ಅನೇಕ ರಾಜ್ಯಗಳಲ್ಲಿ ಇಂತಹ ವಿಧಾಯಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು. ಈ ಬಾರಿ ವಿಜಯಪುರ ಬುರಾಣಪುರ ರಸ್ತೆಯ ಗಾಂಧಿ ನಗರದಲ್ಲಿ ಎಲೆ ಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಿರುವ. ಮಹಾತ್ಮ ಗಾಂಧಿ ನಗರದ ಸಿಸ್ಟರ್ ನಿವೇದಿತಾ ಪಬ್ಲಿಕ್ ಪೂರ್ವ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಮಕ್ಕಳಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಿದ್ದು ಸಂತಸವೆನಿಸುತ್ತಿದೆ. ಹಂತ ಹಂತವಾಗಿ ಇನ್ನೂ ಅನೇಕ ಶೈಕ್ಷಣಿಕವಾಗಿ ಸಹಾಯ ಸಹಕಾರ ಈ ಶಾಲೆಗೆ ನಮ್ಮ ಟ್ರಸ್ಟ್ ನೀಡಲಿದೆ. ಈ ಶಾಲೆಯ ಮಕ್ಕಳು ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಯುವ ಧುರೀಣ ಸಂಗಮೇಶ ಜಾಧವ ಮಾತನಾಡಿ, ಯಾರು ಕಸಿದುಕೊಳ್ಳಲು ಸಾಧ್ಯವಾಗದ ವಸ್ತು ಎಂದರೆ ವಿದ್ಯೆ. ವಿದ್ಯೆಯೇ ಬಾಳಿನ ಬೆಳಕು. ವಿದ್ಯೆ ಮನುಷ್ಯನನ್ನು ಉನ್ನತಿಯತ್ತ ಕೊಂಡೊಯ್ಯುತ್ತದೆ. ಕಾರಣ ಅಂಥಹ ವಿದ್ಯೆಯನ್ನು ಗಾಂಧಿ ನಗರದ ಪ್ರದೇಶದಲ್ಲಿ ಯಾವುದೇ ಸರಿಯಾದ ಮೂಲಭೂತ ಸೌಕರ್ಯ ಹೊಂದಿರದ ಬಡವರು, ಕೂಲಿ ಕಾರ್ಮಿಕರು, ವಲಸಿಗರ ಮಕ್ಕಳ ಭವಿಷ್ಯ ರೂಪಿಸಲು ಅವಟಿ ಕುಟುಂಬದವರು ಅನೇಕ ತೊಂದರೆ ತಾಪತ್ರಯ ನಡುವೆ ಬಾಡಗಿ ಕಟ್ಟಡದಲ್ಲಿ ನಡೆಸಿ ಮಕ್ಕಳ ಶೈಕ್ಷಣಿಕ ಉನ್ನತಿಗೆ ಶ್ರಮಿಸುತ್ತಿರುವದು ಶ್ಲಾಘನೀಯ. ಮುಂಬರುವ ದಿನಗಳಲ್ಲಿ ಶಾಲೆಯ ಅಭಿವೃದ್ಧಿಗೆ ಕೈ ಜೋಡಿಸುವದಾಗಿ ಭರವಸೆ ನೀಡಿದರು.
ಇನ್ನೋರ್ವ ಅತಿಥಿಗಳಾದ ಸಾಮಾಜಿಕ ಮುಖಂಡರಾದ ಚಂದ್ರಶೇಖರ ರೋಡಗಿ (ತೆಲಸಂಗ) ಮಾತನಾಡಿ, ದಾನೇಶ ಅವಟಿ ನ್ಯಾಯವಾದಿ ಮಿತ್ರರ ಸಾಮಾಜಿಕ ಕಾಳಜಿ. ಹೋರಾಟದ ಬಗ್ಗೆ ಪರಿಚಯವಿತ್ತು. ಅವರು ನಮ್ಮೂರಿನ ನಮ್ಮ ಮುಂದೆಯೇ ಬೆಳೆಯುತ್ತಿರುವದು ನಮಗೆಲ್ಲ ಹೆಮ್ಮೆ. ಅವರಿಗೆ ಶಾಲೆಯನ್ನು ನಡೆಸಲು ಸ್ಥಳಾವಕಾಶದ ಕೊರತೆ ಇದ್ದು, ಸರ್ಕಾರ ಜನ ಪ್ರತಿನಿಧಿಗಳು, ಸಚಿವರು, ಶಾಸಕರು, ದಾನಿಗಳು ಇಂಥಹ ಶಾಲೆಗಳು ಬೆಳೆಯಲು ಸಹಾಯ ಸಹಕಾರ ನೀಡಬೇಕು. ತಾವೂ ಕೂಡಾ ಶಾಲೆಯ ಅಭಿವೃದ್ಧಿಗೆ ಸಹಾಯ ಸಹಕಾರ ನೀಡುವುದಾಗಿ ತಿಳಿಸಿ. ದೇವರು ಅವರಿಗೆ ಅವರ ಕುಟುಂಬಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು.
ಇನ್ನೋರ್ವ ಯುವ ಮುಖಂಡ ಸಂತೋಷ ಪವಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನ್ಯಾಯವಾದಿ ದಾನೇಶ ಅವಟಿ ಅವರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯಿನಿ ನಿರ್ಮಲಾ ಅವಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಕ್ಕಳಿಂದ ಪ್ರಾರ್ಥನಾ ಗೀತೆ ಜರುಗಿತು. ಶಿಕ್ಷಕಿ ಯಾಸ್ಮಿನ್ ಪಠಾಣ್ ನಿರೂಪಿಸಿದರು. ವಿದ್ಯಾ ಅವರಾದಿ ವಂದಿಸಿದರು. ಶಾಲಾ ಮಕ್ಕಳು. ಪಾಲಕರು ಭಾಗವಹಿಸಿದ್ದರು. ಸಿಹಿ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಕೊನೆಗೊಂಡಿತು.