
ನವದೆಹಲಿ, ಡಿ.೪- ಅಮೆರಿಕದ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದ್ದು, ಜಗತ್ತಿನಲ್ಲಿ ಭಾರತ ರೂಪಾಯಿಗೆ ಯಾವುದೇ ಮೌಲ್ಯ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೇಂದ್ರದ ಆರ್ಥಿಕ ನೀತಿಗಳ ಪರಿಣಾಮ ರೂಪಾಯಿ ಮೌಲಗಯ ದಾಖಲೆ ಕುಸಿತ ಕಂಡಿದೆ. ಸರ್ಕಾರದ ನೀತಿಗಳು ರೂಪಾಯಿಯನ್ನು ದುರ್ಬಲಗೊಳಿಸಿವೆ. ಭಾರತದ ರೂಪಾಯಿಗಳು ಜಗತ್ತಿನಲ್ಲಿ ಯಾವುದೇ ಮೌಲ್ಯ ಹೊಂದಿಲ್ಲ ಎಂದು ಆರೋಪಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಕೇಂದ್ರ ನೀತಿಗಳಿಂದಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಅವರ ನೀತಿಗಳು ಉತ್ತಮವಾಗಿದ್ದರೆ, ರೂಪಾಯಿ ಮೌಲ್ಯ ಹೆಚ್ಚಾಗಬೇಕಿತ್ತು. ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂಬುದನ್ನು ತೋರಿಸಿದೆ.ಏನು ಬೇಕಾದರೂ ಹೇಳಬಹುದು. ನಮ್ಮನ್ನು ಹೊಗಳಿಕೊಳ್ಳಬಹುದು, ಆದರೆ ಇದು ನಮ್ಮ ರೂಪಾಯಿ ಜಗತ್ತಿನಲ್ಲಿ ಯಾವುದೇ ಮೌಲ್ಯವಿಲ್ಲ ಎಂದು ತೋರಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
೨೦೨೫ರಲ್ಲಿ ಏಷ್ಯಾದ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಕರೆನ್ಸಿಯಲ್ಲಿ ಭಾರತದ ರೂಪಾಯಿ ಒಂದಾಗಿದೆ. ರೂಪಾಯಿ ಮೌಲ್ಯ ಡಾಲರ್ ಎದುರು ೪ ರಿಂದ ೫ರಷ್ಟು ಕುಸಿದಿದ್ದು, ಇಂದು ರೂಪಾಯಿ ಮೌಲ್ಯ ಡಾಲರ್ ಎದುರು ೯೦.೨೦ರ ಅಸುಪಾಸಿನಲ್ಲಿದೆ ಎಂದಿದ್ದಾರೆ.
ವ್ಯಂಗ್ಯವಾಡಿದ ಮನೀಶ್ ತಿವಾರಿ
೨೦೧೩ರ ಹೇಳಿಕೆ ಉಲ್ಲೇಖಿಸಿ ತಿರುಗೇಟು: ಈ ಹಿಂದೆ ಯುಪಿಎ ಸರ್ಕಾರದ ಆಡಳಿತದಲ್ಲಿ ರೂಪಾಯಿ ಮೌಲ್ಯ ಕುಸಿದಾಗ ಬಿಜೆಪಿ ಟೀಕಿಸಿದ್ದನ್ನು ಉಲ್ಲೇಖಿಸಿ ಮಾತನಾಡಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ, ಸದ್ಯ ರೂಪಾಯಿ ಮೌಲ್ಯದ ಕುಸಿತವು ಪ್ರಧಾನಿ ನರೇಂದ್ರ ಮೋದಿಯವರ ವಯಸ್ಸನ್ನೂ ಮೀರಿದೆ ಎಂದು ವ್ಯಂಗ್ಯವಾಡಿದ್ದಾರೆ.
೨೦೧೩ರಲ್ಲಿ ರೂಪಾಯಿ ಮೌಲ್ಯ ಕುಸಿತಗೊಂಡ ಕಾರಣ ಯುಪಿಎ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್, ಯುಪಿಎ ಅಧಿಕಾರಕ್ಕೆ ಬಂದಾಗ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯ ರಾಹುಲ್ ಗಾಂಧಿಯವರ ವಯಸ್ಸಿಗೆ ಸಮನಾಗಿತ್ತು. ಇಂದು ಅದು ಸೋನಿಯಾ ಗಾಂಧಿಯವರ ವಯಸ್ಸಿಗೆ ಸಮನಾಗಿದೆ. ಶೀಘ್ರದಲ್ಲೇ ಅದು ಮನಮೋಹನ್ ಸಿಂಗ್ ಅವರ ವಯಸ್ಸನ್ನು ಮುಟ್ಟುತ್ತದೆ ಎಂದು ಕುಟುಕಿದ್ದರು.
ಪ್ರಿಯಾಂಕ ಪ್ರಶ್ನೆ
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಅವಧಿಯಲ್ಲಿ ವಯಸ್ಸಿಗೆ ಹೋಲಿಸಿ ಮಾತನಾಡಿದ್ದ ಬಿಜೆಪಿ ನಾಯಕರು ಈಗ ಏನು ಹೇಳ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಸಂಸದೆ ಪ್ರಿಯಾಂಕ ಗಾಂದಿ ಪ್ರಶ್ನಿಸಿದ್ದಾರೆ.
ರೂಪಾಯಿ ಮೌಲ್ಯ ಕುಸಿತದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ರೂಪಾಯಿ ಮೌಲ್ಯ ಕುಸಿತಗೊಂಡಾಗ ಅವರು ಏನು ಹೇಳಿದ್ದರು ಎಂದು ಪ್ರಶ್ನಿಸಿದ್ದಾರೆ.


































