ಭಾಲ್ಕಿ ಪಟ್ಟಣದಲ್ಲಿ ಶತಾಬ್ದಿ ನಿಮಿತ್ತ ಆರ್‍ಎಸ್‍ಎಸ್‍ನಿಂದ ಭವ್ಯ ಪಥಸಂಚಲನ

ಭಾಲ್ಕಿ : ಅ.19:ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‍ಎಸ್‍ಎಸ್) ಶತಾಬ್ದಿ ಮತ್ತು ವಿಜಯದಶಮಿ ನಿಮಿತ್ತ ಭವ್ಯ ಪಥಸಂಚಲನ ಸಾಗಿತು. ಭಾಲ್ಕೇಶ್ವರ ಮಂದಿರ ಆವರಣದಲ್ಲಿ ಶನಿವಾರ ಸಾವಿರಾರು ಗಣ ವೇಷಧಾರಿಗಳು ಜಮಾಗೊಂಡು ತಾಯಿ ಭಾರತಾಂಬೆ, ಕೇಶವ ಬಲಿರಾಮ ಹೆಡಗೇವಾರ್ ಹಾಗೂ ಮಾಧವ ಸದಾಶಿವ ಗೋಳ್ವಾಲ್ಕರ್ ಭಾವಚಿತ್ರಗಳೊಂದಿಗೆ ಪಥಸಂಚಲನ ಆರಂಭಿಸಿದರು.
ಮಾರ್ಗದುದ್ದಕ್ಕೂ ಜನರು ರಂಗೋಲಿ ಹಾಕಿ ಹೂವಿನ ಮಳೆಗೈದರು. ಖಾಕಿ ಬಣ್ಣದ ಪ್ಯಾಂಟ್, ಶುಭ್ರ ಬಿಳಿ ವರ್ಣದ ಅಂಗಿ, ತಲೆಗೆ ಕರಿ ಟೋಪಿ ಧರಿಸಿ ಕೈಯಲ್ಲಿ ದಂಡವನ್ನು ಹಿಡಿದಿದ್ದ ಸ್ವಯಂಸೇವಕರು ಗಮನ ಸೆಳೆದರು. ಭಾರತ ಮಾತಾಕಿ ಜೈ , ಜೈ ಶ್ರೀರಾಮ್ ಎನ್ನುವ ಜಯಘೋಷ ಮೊಳಗಿದವು.
ಹಳೇ ಪಟ್ಟಣ, ಚವಡಿ, ತಿನ್ ದುಕಾನ್, ಗಡಿ ಏರಿಯಾ, ಬೋಮಗೊಂಡೇಶ್ವರ ವೃತ್ತ, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತ, ಸಂಗಮೇಶ್ವರ ಚಿತ್ರ ಮಂದಿರ, ಮಹಾತ್ಮ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮೂಲಕ ಚನ್ನಬಸವಾಶ್ರಮದಲ್ಲಿ ಸಮಾಪ್ತಿಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಪ್ರಕಾಶ ಖಂಡ್ರೆ, ಯುವ ಮುಖಂಡ ಡಿ.ಕೆ.ಸಿದ್ರಾಮ, ಪ್ರಮುಖರಾದ ಶಿವು ಲೋಖಂಡೆ, ವೀರಣ್ಣ ಕಾರಬಾರಿ, ಚನ್ನಬಸವಣ್ಣ ಬಳತೆ, ಪ್ರಸನ್ನ ಖಂಡ್ರೆ, ಸುಧೀರ ನಾಯ್ಕ್, ಸೂರಜ ಸಿಂಗ ರಾಜಪೂತ, ಪ್ರಭು ಧೂಪೆ, ನಾಮದೇವರಾವ ಪವಾರ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಗಣವೇಶಧಾರಿಗಳು ಭಾಗವಹಿಸಿದ್ದರು.