
ಕಲಬುರಗಿ,ಫೆ.6-ಯಾದಗಿರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಕೆರೆ ತುಂಬಿಸುವುದು ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಕಳೆದ ಐದು ವರ್ಷದಲ್ಲಿ 343.71 ಕೋಟಿ ರೂ.ಒದಗಿಸಲಾಗಿದೆ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜ್ ಹೇಳಿದರು.
ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿ, ಈ ಅನುದಾನದಲ್ಲಿ ಮೂರು ಕೆರೆ ತುಂಬಿಸುವ ಯೋಜನೆ (ಮುಂದುವರಿದ ಕಾಮಗಾರಿ ಸೇರಿ) ಮಂಜೂರಾಗಿವೆ. ಈ ಯೋಜನೆಗಳಿಂದ 18 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದೆ. ಅವುಗಳಲ್ಲಿ ಸಣ್ಣ ನೀರಾವರಿ ಇಲಾಖೆಯ 12, ಇತರೆ ಇಲಾಖೆಯಡಿ 6 ಕೆರೆ ಸೇರಿವೆ. ಈ ಯೋಜನೆಗೆ ಈವರೆಗೆ 134.45 ಕೋಟಿ ರೂ. ಖರ್ಚು ಮಾಡಲಾಗಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಕಲಬುರಗಿಯಲ್ಲಿ 169, ಯಾದಗಿರಿಯಲ್ಲಿ 71 ಕೆರೆಗಳಿವೆ ಎಂದು ವಿವರಿಸಿದರು.























