ಕ್ರಾಂತಿ-ಸಿಎಂ ಬದಲಾವಣೆ ಯಾವೂದು ಇಲ್ಲ: ಮುನಿಯಪ್ಪ

ಕೋಲಾರ,ಅ,೨೧- ರಾಜ್ಯ ಸರ್ಕಾರದಲ್ಲಿ ಅಥವಾ ಕಾಂಗ್ರೆಸ್ ಪಕ್ಷದಲ್ಲಿ ನವೆಂಬರ್ ತಿಂಗಳ ಕ್ರಾಂತಿ ಅಥವಾ ಮುಖ್ಯಮಂತ್ರಿ ಬದಲಾವಣೆ ಇಲ್ಲ, ಸಿದ್ದರಾಮಯ್ಯ ಅವರೇ ಮುಂದುವರೆಯುತ್ತಾರೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಸ್ವಷ್ಟ ಪಡೆಸಿದರು.


ಮುಳಬಾಗಿಲು ತಾಲೂಕು ಶಿನಿಗೇನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸಚಿವ ಸಂಪುಟ ಪುನರ್ ರಚನೆ ಅಥವಾ ತಾವು ಸೇರಿದಂತೆ ಸಚಿವರ ರಾಜೀನಾಮೆ ವಿಚಾರದಲ್ಲಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು.


ರಾಜ್ಯದಲ್ಲಿ ಆರ್.ಎಸ್.ಎಸ್ ಸಂಘಟನೆಗೆ ಯಾವುದೇ ನಿಷೇಧ ವಿಧಿಸಿಲ್ಲ. ಸರ್ಕಾರಿ ಸ್ಥಳಗಳನ್ನು ಬಳಸಿಕೊಳ್ಳಬೇಕಾದರೆ ಅಥವಾ ಯಾವುದೇ ಸಾರ್ವಜನಿಕ ಕಾರ್ಯಕ್ರಮ ಮಾಡಬೇಕಾದರೆ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾದ್ದು ಅನಿವಾರ್ಯ, ಅದನ್ನಷ್ಟೇ ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ಮುನಿಯಪ್ಪ ವಿವರಿಸಿದರು.


ಸರ್ಕಾರದ ಆದೇಶ ಯಾವುದೇ ನಿರ್ದಿಷ್ಟ ಸಂಘಟನೆ ಅಥವಾ ಪಕ್ಷದ ವಿರುದ್ಧ ಅಲ್ಲ, ಇದು ಬಿಜೆಪಿಗೂ ಅನ್ವಯಿಸುತ್ತದೆ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಅನ್ವಯಿಸುತ್ತದೆ, ಆದರೆ ವಿನಾಕಾರಣ ಸರ್ಕಾರದ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.


ಅನ್ನಭಾಗ್ಯ ಯೋಜನೆಯಡಿ ನೀಡುತ್ತಿದ್ದ ೧೦ ಕೆಜಿ ಅಕ್ಕಿ ಹೆಚ್ಚಾಗುತ್ತದೆ. ಸಮರ್ಪಕವಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ೫ ಕೆಜಿ ಅಕ್ಕಿಯ ಜೊತೆಗೆ ಉಳಿದ ಐದು ಕೆಜಿ ಪೌಷ್ಟಿಕ ಆಹಾರ ಪದಾರ್ಥಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಸ್ವಷ್ಟಪಡಿಸಿದರು.