ಕ್ರಾಂತಿ, ಬ್ರಾಂತಿ ಎಲ್ಲಾ ಊಹಾಪೋಹಾ

ಮೈಸೂರಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸರಿಂದ ವಂದನೆ ಸ್ವೀಕರಿಸಿದರು. ಸಚಿವರಾದ ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್, ಡಾ. ಶರಣ್ ಪ್ರಕಾಶ್ ಪಾಟೀಲ್ ಇದ್ದಾರೆ.

ಬೆಂಗಳೂರು, ಅ. ೧೭- ರಾಜ್ಯದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯೂ ಆಗಲ್ಲ, ಬ್ರಾಂತಿಯೂ ಆಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸುವ ಮೂಲಕ ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗುತ್ತವೆ ಎಂಬ ವರದಿಗಳನ್ನು ತಳ್ಳಿ ಹಾಕಿದ್ದಾರೆ.


ಕ್ರಾಂತಿ ಎಂದರೆ ರೆವೂಲ್ಯೂಷನ್ ಬದಲಾವಣೆ ಯಾವತ್ತೂ ಕ್ರಾಂತಿ ಅಲ್ಲ, ವಾಟ್ ಯೂ ಮೀನ್ ಬೈ ಕ್ರಾಂತಿ ಎಂದು ಪ್ರಶ್ನೆ ಕೇಳಿದ ಮಾಧ್ಯಮದವರನ್ನೇ ಪ್ರಶ್ನಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂದರ್ಭದಲ್ಲಿ ನವೆಂಬರ್‌ನಲ್ಲಿ ಕ್ರಾಂತಿಯಾಗುತ್ತದೆ ಎಂಬ ಮಾತುಗಳನ್ನು ಅಲ್ಲಗಳೆದ ಅವರು, ಕ್ರಾಂತಿಯೂ ಆಗಲ್ಲ, ಬ್ರಾಂತಿಯೂ ಆಗಲ್ಲ ಎಂದರು.


ಕ್ರಾಂತಿ ಕ್ರಾಂತಿ ಎಂದು ಹೇಳುವವರಿಗೆ ಮಾಡಲು ಬೇರೆ ಕೆಲಸ ಇಲ್ಲ. ಸುಮ್ಮನೆ ಏನೇನೋ ಹೇಳುತ್ತಾರೆ. ಮಾಧ್ಯಮದವರು ಆ ಹೇಳಿಕೆಗಳಿಗೆ ಪ್ರಚಾರ ಕೊಡುವುದನ್ನು ನಿಲ್ಲಿಸಿ, ನಿರ್ಲಕ್ಷ್ಯ ಮಾಡಿದರೆ ಆಗ ಕ್ರಾಂತಿ ಕ್ರಾಂತಿ ಎಂದು ಹೇಳುತ್ತಿರುವವರು ಸುಮ್ಮನಾಗುತ್ತಾರೆ ಎಂದರು.


ನವೆಂಬರ್ ಕ್ರಾಂತಿ ಬಗ್ಗೆ ಆಡಳಿತ ಪಕ್ಷ, ವಿಪಕ್ಷ ಎಲ್ಲರೂ ಚರ್ಚೆ ಮಾಡುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಏನೇ ಹೇಳಲಿ, ಅದನ್ನು ನೀವು ನಿರ್ಲಕ್ಷ್ಯ ಮಾಡಿ, ಅವುಗಳಿಗೆ ಪ್ರಚಾರ ಕೊಡಬೇಡಿ, ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ ಎಂದು ದೃಢ ಮಾತುಗಳಲ್ಲಿ ಪುನರುಚ್ಚರಿಸಿದರು.


ಕ್ರಾಂತಿ ಎಂದರೆ ಬದಲಾವಣೆಯಲ್ಲ, ಅದೊಂದು ರೆವೂಲ್ಯೂಷನ್. ಕ್ರಾಂತಿ ಕ್ರಾಂತಿ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಅದಕ್ಕೆ ಗಮನ ಕೊಡಬೇಡಿ, ಕ್ರಾಂತಿಯೂ ಇಲ್ಲ, ಬ್ರಾಂತಿಯೂ ಇಲ್ಲ ಎಂದು ಮತ್ತೆ ಮತ್ತೆ ಹೇಳಿದರು.


ಮುಖ್ಯಮಂತ್ರಿಗಳ ಈ ಮಾತು ಹೇಳಿಕೆಗಳು ನವೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬದಲಾವಣೆಗಳಾಗುತ್ತದೆ ಎಂಬ ವರದಿಗಳಿಗೆ ಸ್ಪಷ್ಟನೆ ಕೊಡುವ ರೀತಿಯಲ್ಲಿದ್ದು, ಯಾವ ಬದಲಾವಣೆಗಳಿಲ್ಲ ಎಂಬುದನ್ನು ಅವರು ಈ ಮಾತುಗಳ ಮೂಲಕ ದೃಢಪಡಿಸಿದಂತಿತ್ತು.


ಬಿಹಾರ ವಿಧಾನಸಭಾ ಚುನಾವಣೆ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗುತ್ತವೆ ಎಂಬ ವರದಿಗಳನ್ನು ಒಪ್ಪದ ಅವರು, ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ರಾಜ್ಯದ ಯಾವ ಪರಿಣಾಮ ಬೀರುವುದಿಲ್ಲ ಎಂದರು.


ಬಿಹಾರದಲ್ಲಿ ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮೈತ್ರಿ ಒಕ್ಕೂಟ ಗೆಲುವು ಪಡೆಯುವ ಸಾಧ್ಯತೆ ಇದೆ. ಬಿಹಾರದಲ್ಲಿ ನನ್ನ ಪ್ರಚಾರದ ಅಗತ್ಯ, ಅವಶ್ಯಕತೆ ಇದ್ದರೆ ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.


ಮುಂದಿನ ೫ ವರ್ಷ ನಮ್ಮ ತಂದೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಸದ ಅವರು, ಅವನನ್ನೆ ಈ ಬಗ್ಗೆ ಕೇಳಿಕೊಳ್ಳಿ ಎಂದು ಚುಟುಕು ಉತ್ತರ ನೀಡಿದರು.
ಈ ಸಂದರ್ಭದಲ್ಲಿ ಸಚಿವರುಗಳಾದ ಡಾ. ಶರಣ ಪ್ರಕಾಶ್ ಪಾಟೀಲ್, ಡಾ. ಹೆಚ್.ಸಿ. ಮಹದೇವಪ್ಪ, ಕೆ. ವೆಂಕಟೇಶ್ ಸೇರಿದಂತೆ ಹಲವು ಶಾಸಕರು ಉಪಸ್ಥಿತರಿದ್ದರು.