ನವೆಂಬರ 6 ರೊಳಗಾಗಿ ಹೆಸರು ನೋಂದಾಯಿಸಲು ಮನವಿ

ಧಾರವಾಡ, ಅ.17: ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಧಾರವಾಡ ಜಿಲ್ಲೆಯಲ್ಲಿ 1 ನೇ ನವೆಂಬರ 2025 ಕ್ಕೆ ಮುಂಚೆ ಕನಿಷ್ಟ 3 ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದಾದರೊಂದು ವಿಶ್ವವಿದ್ಯಾಲಯದ ಪದವೀಧರನಾಗಿರುವ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ನವೆಂಬರ್ 06, 2025 ರೊಳಗಾಗಿ ತಮ್ಮ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.


ಈ ಕುರಿತು ಪ್ರಕಟಣೆ ನೀಡಿರುವ ಅವರು, ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಗೆ ಅರ್ಹರ ಹೆಸರು ಸೇರ್ಪಡೆಗೆ ಅನುಕೂಲವಾಗುವಂತೆ ಧಾರವಾಡ ಜಿಲ್ಲೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ತಾಲೂಕುಗಳಲ್ಲಿ 18 ಜನ ಅಧಿಕಾರಿಗಳನ್ನು ಸಹಾಯಕ ಮತದಾರ ನೋಂದಣಾಧಿಕಾರಿಗಳನ್ನಾಗಿ ಮತ್ತು 10 ಜನ ಅಧಿಕಾರಿಗಳನ್ನು ನಿಯೋಜಿತ ಅಧಿಕಾರಿಗಳನ್ನಾಗಿ ಈಗಾಗಲೇ ನೇಮಿಸಿ, ಕರ್ನಾಟಕ ಪಶ್ಚಿಮ ಪದವೀಧರರ ಕ್ಷೇತ್ರದ ಮತದಾರರ ನೋಂದಣಾಧಿಕಾರಿಗಳು ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ನಿಯೋಜಿತ ಎಲ್ಲ ಅಧಿಕಾರಿಗಳು ಮತದಾರರ ಪಟ್ಟಿಗೆ ಸೇರಲು ಅರ್ಹ ಮತದಾರರು ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ, ಸ್ವೀಕರಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.


ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರದ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಹರು ನಮೂನೆ-18 ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ, ಅರ್ಜಿಯೊಂದಿಗೆ ಪದವಿ ಪ್ರಮಾಣಪತ್ರವನ್ನು ಪತ್ರಾಂಕಿತ ಅಧಿಕಾರಿಯ ಮೇಲು ರುಜು ಮಾಡಿಸಿ, ವಿಳಾಸದ ದಾಖಲೆಗಾಗಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ ಕಾರ್ಡ ಅಥವಾ ರೇಷನ್ ಕಾರ್ಡ ಅಥವಾ ಇಂಡಿಯನ್ ಪಾಸ್‍ಪೆÇೀರ್ಟ ಅಥವಾ ಡ್ರೈವಿಂಗ್ ಲೈಸನ್ಸ್ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳಲ್ಲಿ ಅಥವಾ ಗೊತ್ತುಪಡಿಸಿದ ನಿಯೋಜಿತ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.


ಆದ್ದರಿಂದ ಜಿಲ್ಲೆಯ ಅರ್ಹ ಪದವಿಧರ ಮತದಾರರು ಕರ್ನಾಟಕ ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವದರ ಮೂಲಕ, ಈ ಪ್ರಕ್ರಿಯೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.