Home ಮುಖಪುಟ ಸುದ್ದಿ ಶಾಸಕ ಮುನಿರತ್ನ ವಿರುದ್ಧ ಮರುತನಿಖೆಗೆ ಆದೇಶ

ಶಾಸಕ ಮುನಿರತ್ನ ವಿರುದ್ಧ ಮರುತನಿಖೆಗೆ ಆದೇಶ

ಹನಿಟ್ರ್ಯಾಪ್ ಪ್ರಕರಣ

ಬೆಂಗಳೂರು, ಮಾ.೦೩: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಹನಿಟ್ರ್ಯಾಪ್ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿಐಡಿ ಎಸ್‌ಐಟಿ ಸಲ್ಲಿಸಿದ್ದ ‘ಬಿ’ ರಿಪೋರ್ಟ್ ಅನ್ನು ತಿರಸ್ಕರಿಸಿ, ಮರು ತನಿಖೆ ನಡೆಸುವಂತೆ ಆದೇಶಿಸಿದೆ.

ಜೆಡಿಎಸ್ ಮುಖಂಡ ಲಗ್ಗೆರೆ ನಾರಾಯಣಸ್ವಾಮಿ ಸಲ್ಲಿಸಿದ್ದ ದೂರಿನ ತನಿಖೆ ಪೂರ್ಣಗೊಳಿಸಿದ ಎಸ್‌ಐಟಿ ಅಧಿಕಾರಿಗಳು ಸಾಕ್ಷ್ಯಾಭಾವ ಉಲ್ಲೇಖಿಸಿ ‘ಬಿ’ ರಿಪೋರ್ಟ್ ಸಲ್ಲಿಸಿದ್ದರು. ಆದರೆ ದೂರುದಾರರು ಇದನ್ನು ಪ್ರಶ್ನಿಸಿ ಮರು ಅರ್ಜಿ ಸಲ್ಲಿಸಿದ್ದರು. ಅವರ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ವಾದ ಮಂಡಿಸಿ, ಧ್ವನಿಮುದ್ರಣ ಸೇರಿದಂತೆ ಪ್ರಾಥಮಿಕ ಸಾಕ್ಷ್ಯಾಧಾರಗಳಿದ್ದರೂ ಸಮರ್ಪಕ ತನಿಖೆ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಶಾಸಕರು, ಸಂಸದರ ವಿರುದ್ಧದ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ವಾದಗಳನ್ನು ಆಲಿಸಿ, ‘ಬಿ’ ರಿಪೋರ್ಟ್ ಅನ್ನು ರದ್ದುಗೊಳಿಸಿ, ಪ್ರಕರಣದ ಮುಂದಿನ ತನಿಖೆ ನಡೆಸುವಂತೆ ಸಿಐಡಿ ಎಸ್‌ಐಟಿಗೆ ನಿರ್ದೇಶನ ನೀಡಿದರು. ವಿಚಾರಣೆಯನ್ನು ಮಾರ್ಚ್ ೩೦ಕ್ಕೆ ಮುಂದೂಡಲಾಗಿದೆ.
ಬೆಂಗಳೂರಿನ ೨೦೨೪ರ ಡಿಸೆಂಬರ್‌ನಲ್ಲಿ ನಂದಿನಿ ಲೇಔಟ್ ಠಾಣೆಗೆ ನೀಡಿದ ದೂರಿನಲ್ಲಿ, ತಮ್ಮ ಹಾಗೂ ಪತ್ನಿಯ ವಿರುದ್ಧ ಹನಿಟ್ರ್ಯಾಪ್ ಸಂಚು ರೂಪಿಸಿ ತೇಜೋವಧೆ ಮಾಡಲು ಯತ್ನಿಸಲಾಗಿದೆ ಎಂಬ ಗಂಭೀರ ಆರೋಪಗಳನ್ನು ನಾರಾಯಣಸ್ವಾಮಿ ಮಾಡಿದ್ದರು. ಬಳಿಕ ಪ್ರಕರಣವನ್ನು ಸಿಐಡಿ ಎಸ್‌ಐಟಿಗೆ ವರ್ಗಾವಣೆ ಮಾಡಲಾಗಿತ್ತು.