ಕಾಲ್ತುಳಿತಕ್ಕೆ ಆರ್‌ಸಿಬಿ ಹೊಣೆ

ಬೆಂಗಳೂರು,ನ.೧೯-ಐಪಿಎಲ್ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಆರ್‌ಸಿಬಿಯೇ ನೇರ ಹೊಣೆ ಎನ್ನುವುದನ್ನು ಉಲ್ಲೇಖಿಸಿ ಆರೋಪಪಟ್ಟಿ (ಚಾರ್ಜ್ ಶೀಟ್) ಸಲ್ಲಿಕೆಗೆ ಸಿಐಡಿ ಸಿದ್ಧತೆ ಕೈಗೊಂಡಿದೆ.


ಕಾಲ್ತುಳಿತ ದುರಂತದಲ್ಲಿ ೧೧ ಮಂದಿ ಪ್ರಾಣ ಕಳೆದುಕೊಂಡ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯ ವಿರುದ್ಧವೂ ಹಲವು ಗಂಭೀರ ಪ್ರಶ್ನೆಗಳು ಕೇಳಿಬಂದಿತ್ತು.


ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಸಿಐಡಿ ಅಧಿಕಾರಿಗಳು ತನಿಖೆಯನ್ನು ಬಹುತೇಕ ಪೂರ್ಣಗೊಳಿಸಿ ೨,೨೦೦ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ನ್ನು ಸಿದ್ಧಪಡಿಸಿದ್ದಾರೆ.


ತನಿಖೆ ವೇಳೆ ಆರ್‌ಸಿಬಿ, ಡಿಎನ್‌ಎ, ಕೆಎಸ್‌ಸಿಎ ವಿರುದ್ಧ ಹಲವು ಸಾಕ್ಷ್ಯಗಳನ್ನು ಉಲ್ಲೇಖಿಸಿ ನ್ಯಾಯಾಲಯಕ್ಕೆ ೨,೨೦೦ ಕ್ಕೂ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.


ಆರ್‌ಸಿಬಿ ಜೊತೆ ಕೆಎಸ್‌ಸಿಎ,ಡಿಎನ್‌ಎ ಕಾಲ್ತುಳಿತಕ್ಕೆ ನೇರ ಹೊಣೆಯಾಗಿದ್ದು, ಚಾರ್ಜ್‌ಶೀಟ್‌ನಲ್ಲಿ ಮೂರು ಸಂಸ್ಥೆಗಳನ್ನು ಸಿಐಡಿ ನೇರ ಹೊಣೆ ಮಾಡಿ ಸರಿಯಾದ ಪ್ಲಾನ್ ಇಲ್ಲದೆಯೇ ಕಾರ್ಯಕ್ರಮ ಆಯೋಜಿಸಲಾಗಿತ್ತು. ಠರಾವೋ ಸರಿಯಾಗಿ ಮಾಡಿಲ್ಲ ಎನ್ನುವುದು ತನಿಖೆ ವೇಳೆ ಪತ್ತೆಯಾಗಿದೆ.


ಠರಾವೋ ಎಂದರೆ ಕಾರ್ಯಕ್ರಮ ಆಯೋಜನೆಗೂ ಮುನ್ನ ನಡೆದ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಆದರೆ, ಸಭೆ ನಡೆಸಿ ಸರಿಯಾದ ಯೋಜನೆ ಇಲ್ಲದೆ ನಿರ್ಧಾರ ತೆಗೆದುಕೊಂಡಿರೋದು ಮತ್ತು ಟಿಕೆಟ್ ಬಗ್ಗೆ ಗೊಂದಲ, ಟ್ವೀಟ್, ಸುಳ್ಳು ವದಂತಿಯಿಂದ ಜನ ಸೇರಿ ಘಟನೆ ಸಂಭವಿಸಿದೆ.


ಆರ್‌ಸಿಬಿ ಟಿಕೆಟ್ ಬಗ್ಗೆ ಗೊಂದಲ ಹುಟ್ಟಿಸಿತ್ತು. ಇದು ಘಟನೆಗೆ ಮೊದಲ ಕಾರಣ ಎಂಬ ಅಂಶ ಬಯಲಾಗಿದೆ. ಅಲ್ಲದೇ ಡಿಎನ್‌ಎ ಕಡೆಯಿಂದ ಯಾವುದೇ ಭದ್ರತೆಯ ಯೋಜನೆಯು ಇರಲಿಲ್ಲ. ಖಾಸಗಿ ಸೆಕ್ಯುರಿಟಿ ಏಜೆನ್ಸಿ ಬಳಕೆಯಲ್ಲಿ ವಿಫಲವಾಗಿದೆ. ಪೊಲೀಸರ ಜೊತೆ ಕೂಡ ಸರಿಯಾದ ಮಾತುಕತೆ ನಡೆಸದೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂಬ ಅಂಶವನ್ನು ಜಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.


ಚಿನ್ನಸ್ವಾಮಿ ಕ್ರೀಡಾಂಗಣದ ಎಲ್ಲಾ ಗೇಟ್ ಬಳಿಯ ಸಿಸಿಟಿವಿ ಪರಿಶೀಲನೆ, ವಿಡಿಯೋದಲ್ಲಿದ್ದವರ ಹೇಳಿಕೆ ದಾಖಲಿಸಲಾಗಿದೆ. ಪ್ರತಿ ಗೇಟ್‌ನ ಭದ್ರತೆಗೆ ಹಾಜರಾಗಿದ್ದ ಪೊಲೀಸರ ಹೇಳಿಕೆಯನ್ನು ಸಹ ತನಿಖಾ ತಂಡ ದಾಖಲಿಸಿದೆ.


ಗಾಯಾಳು ಹೇಳಿಕೆ, ಗಾಯಾಳುಗಳನ್ನು ಸಾಗಿಸಿದವರ ಹೇಳಿಕೆ ಸೇರಿ ನೂರಾರು ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ತನಿಖೆ ವೇಳೆ ಪತ್ತೆಯಾಗಿರುವ ಅಂಶಗಳನ್ನು ಪರಿಗಣಿಸಿ ಮೂರು ಸಂಸ್ಥೆಗಳನ್ನು ಸಿಐಡಿ ನೇರ ಹೊಣೆ ಮಾಡಿದೆ.

ಸಿಐಡಿ ಚಾರ್ಜ್‌ಶೀಟ್‌ನಲ್ಲಿ ಏನಿದೆ

  • ಕಾರ್ಯಕ್ರಮ ಆಯೋಜನೆಗೆ ಸರಿಯಾದ ಪ್ಲಾನ್ ಹಾಗೂ ನಿರ್ವಹಣಾ ವ್ಯವಸ್ಥೆ ಇರಲಿಲ್ಲ
  • ಕಾರ್ಯಕ್ರಮ ಆಯೋಜನೆಗೂ ಮುನ್ನ ನಡೆಯಬೇಕಾದ ಠರಾವೋ ಸಭೆ ಸರಿಯಾಗಿ ಮಾಡಿಲ್ಲ ಎನ್ನುವುದು ಪತ್ತೆ
  • ತೆಗೆದುಕೊಂಡ ತೀರ್ಮಾನಗಳ ಕುರಿತು ಪೊಲೀಸ್ ಇಲಾಖೆಗೂ ಸರಿಯಾದ ಮಾಹಿತಿ ನೀಡದಿರುವುದು
  • ಟಿಕೆಟ್ ಮಾರಾಟ, ಆನ್‌ಲೈನ್ ಮಾಹಿತಿ ಹಾಗೂ ಟ್ವೀಟ್‌ಗಳ ಬಗ್ಗೆ ಉಂಟಾದ ಗೊಂದಲ, ಸುಳ್ಳು ವದಂತಿಗಳು, ಜನರ ಅತೀ ಹೆಚ್ಚು ಜಮಾವಣೆ ಕಾರಣ
  • ಆರ್ ಸಿಬಿ ಕಡೆಯಿಂದ ಉಂಟಾದ ಟಿಕೆಟ್ ಗೊಂದಲ ಈ ಘಟನೆಗೆ ಪ್ರಮುಖ ಕಾರಣವೆಂದು ತನಿಖೆ ಬಹಿರಂಗಪಡಿಸಿದೆ
  • ಕಾರ್ಯಕ್ರಮದ ಭದ್ರತೆಗಾಗಿ ಜವಾಬ್ದಾರಿಯಾಗಿದ್ದ ಡಿಎನ್ ಎ ಸಂಸ್ಥೆ ಯಾವುದೇ ಸೂಕ್ತ ಸೆಕ್ಯುರಿಟಿ ಪ್ಲಾನ್ ಹೊಂದಿರಲಿಲ್ಲ
  • ಖಾಸಗಿ ಭದ್ರತಾ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ವಿಫಲ
  • ಪೊಲೀಸರು ನಡೆಸಬೇಕಾದ ಸಂವಹನ, ಸಹಕಾರ, ಸಂಚಲನ ವ್ಯವಸ್ಥೆಗಳು ಸಮರ್ಪಕವಾಗಿರಲಿಲ್ಲ.

ಮೂರು ಸಂಸ್ಥೆಗಳೇ ಹೊಣೆ


ತನಿಖೆಯ ಎಲ್ಲಾ ಅಂಶಗಳನ್ನು ಪರಿಗಣಿಸಿರುವ ಸಿಐಡಿ, ತನ್ನ ಚಾರ್ಜ್ ಶೀಟ್‌ನಲ್ಲಿ, ಅರ್ ಸಿಬಿ,ಕೆಎಸ್ ಸಿಎ,ಡಿಎನ್ ಎ ಒಟ್ಟಾಗಿ ಕಾರ್ಯಕ್ರಮವನ್ನು ಜವಾಬ್ದಾರಿಯಿಲ್ಲದೇ ಆಯೋಜಿಸಿದ್ದರಿಂದ ೧೧ಮಂದಿ ಪ್ರಾಣ ಕಳೆದುಕೊಳ್ಳುವ ಘಟನೆ ನಡೆದಿದೆ.

ಮುಂದೇನು?


ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸುವ ಕೆಲಸ ಅಂತಿಮ ಹಂತದಲ್ಲಿದ್ದು, ಇದಾದ ಬಳಿಕ ಪ್ರಕರಣವು ನ್ಯಾಯಾಂಗ ಪ್ರಕ್ರಿಯೆ ವೇಗ ಪಡೆಯಲಿದೆ. ದುರಂತಕ್ಕೆ ಕಾರಣವಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಈ ಚಾರ್ಜ್ ಶೀಟ್ ಪ್ರಮುಖ ದಾಖಲೆ ಆಗಲಿದೆ.
ಈ ದುರಂತದ ಬಳಿಕ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಹಲವು ಉನ್ನರ ಅಧಿಕಾರಿಗಳನ್ನು ವಜಾ ಮಾಡಿತ್ತು. ಸರ್ಕಾರದ ನಡೆ ವಿವಾದಕ್ಕೆ ಕಾರಣವಾಗಿತ್ತು.