
ಮುಂಬೈ,ಪೆ.೬- ಆರ್ ಬಿಐ ನ ಹಣಕಾಸು ನೀತಿ ಸಮಿತಿ ರೆಪೊ ದರವನ್ನು ಶೇಕಡಾ ೫.೨೫ ರಷ್ಟು ಯಥಾಸ್ಥಿತಿಯಲ್ಲಿಡಲು ಮತ್ತು ತಟಸ್ಥ ನಿಲುವನ್ನು ಕಾಯ್ದುಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ.
ದೇಶದ ಜಿಡಿಪಿ ಮುನ್ಸೂಚನೆಯನ್ನು ಶೇಕಡಾ ೭.೪ಕ್ಕೆ ಪರಿಷ್ಕರಿಸಲಾಗಿದೆ. ಪರಿಷ್ಕೃತ ಸರಣಿಯ ಆಧಾರದ ಮೇಲೆ ಹೊಸ ಹಣದುಬ್ಬರ ದತ್ತಾಂಶದಿಂದ ಹಣಕಾಸು ನೀತಿ ರೂಪಿಸಲಾಗುವುದು ಎಂದು ಆರ್ ಬಿಐ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಸಂಜಯ್ ಮಲೊತ್ರಾ ಪ್ರತಿಕ್ರಿಯೆ ನೀಡಿ “ಹಣಕಾಸು ನೀತಿ ಸಮಿತಿ ಫೆಬ್ರವರಿ ೪, ೫ ಮತ್ತು ಇಂದು ಸಭೆ ಸೇರಿ ನೀತಿ ರೆಪೊ ದರವನ್ನು ಯಥಾಸ್ಥಿತಿ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಕಸನಗೊಳ್ಳುತ್ತಿರುವ ಸ್ಥೂಲ-ಆರ್ಥಿಕ ಸ್ಥಿತಿ ಮತ್ತು ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ ಹಣಕಾಸು ನೀತಿ ಸಮಿತಿ ರೆಪೊ ದರವನ್ನು ಶೇಕಡಾ ೫.೨೫ ರಷ್ಟು ಬದಲಾಗದೆ ಇರಿಸಲು ಸರ್ವಾನುಮತದಿಂದ ಮತ ಚಲಾಯಿಸಿತು” ಹೇಳಿದ್ದಾರೆ.
ಡಿಸೆಂಬರ್ ೨೦೨೫ ರಲ್ಲಿ ಕೇಂದ್ರ ಬ್ಯಾಂಕ್ ರೆಪೊ ದರವನ್ನು ೨೫ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದ ನಂತರ ಈ ನಿರ್ದಾರ ಕೈಗೊಳ್ಳಲಾಗಿದೆ. ಕಳೆದ ವರ್ಷ ಫೆಬ್ರವರಿಯಿಂದ ಮಾನದಂಡ ದರವನ್ನು ೧೨೫ ಬೇಸಿಸ್ ಪಾಯಿಂಟ್‌ಗಳಷ್ಟು ಕಡಿಮೆ ಮಾಡಿದೆ.
“ಹೆಚ್ಚಿದ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಹೆಚ್ಚಿದ ಅನಿಶ್ಚಿತತೆಯ ನಡುವೆಯೂ, ಭಾರತೀಯ ಆರ್ಥಿಕತೆಯು ಬಲವಾದ ಬೆಳವಣಿಗೆ ಮತ್ತು ಕಡಿಮೆ ಹಣದುಬ್ಬರದೊಂದಿಗೆ ಉತ್ತಮ ಸ್ಥಾನದಲ್ಲಿದೆ.
ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಯುಎಸ್ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ, ಬೆಳವಣಿಗೆಯ ಆವೇಗ ದೀರ್ಘಕಾಲದವರೆಗೆ ಉಳಿಯುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
ಪಾಲಿಸಿ ರೆಪೊ ದರವನ್ನು ಶೇಕಡಾ ೫.೨೫ ರಲ್ಲಿ ಯಥಾಸ್ಥಿತಿಯಲ್ಲಿ ಇರಿಸಿರುವ ಆರ್‌ಬಿಐ, ಸ್ಟ್ಯಾಂಡಿಂಗ್ ಠೇವಣಿ ಸೌಲಭ್ಯ ದರ ಅಥವಾ ಬ್ಯಾಂಕುಗಳು ಈಗ ಆರ್‌ಬಿಐನಲ್ಲಿ ಹೆಚ್ಚುವರಿ ಹಣವನ್ನು ಠೇವಣಿ ಮಾಡಬಹುದಾದ ದರವು ಶೇಕಡಾ ೫ ರಲ್ಲಿಯೇ ಉಳಿದಿದೆ ಎಂದು ಹೇಳಿದೆ.
ತುರ್ತು ಪರಿಸ್ಥಿತಿಯಲ್ಲಿ ಬ್ಯಾಂಕುಗಳು ಆರ್‌ಬಿಐನಿಂದ ಹಣವನ್ನು ಎರವಲು ಪಡೆಯಬಹುದಾದ ದರ ಶೇಕಡಾ ೫.೫೦ ರಲ್ಲೇ ಮುಂದುವರಿಯುತ್ತದೆ ಎಂದು ತಿಳಿಸಿದೆ.


























