Home ಕ್ರೈಂ ಸುದ್ದಿಗಳು ಯಾದಗಿರಿಯಲ್ಲಿ ಹೋಟೆಲ್‍ಗಳ ಮೇಲೆ ದಾಳಿ : ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಕ್ರಮ ಬಳಕೆ ಪತ್ತೆ, 46...

ಯಾದಗಿರಿಯಲ್ಲಿ ಹೋಟೆಲ್‍ಗಳ ಮೇಲೆ ದಾಳಿ : ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಅಕ್ರಮ ಬಳಕೆ ಪತ್ತೆ, 46 ಸಿಲಿಂಡರ್ ವಶ

ಯಾದಗಿರಿ:ಮಾ.13:ತಾಲೂಕಿನ ಹಲವು ಹೋಟೆಲ್‍ಗಳಲ್ಲಿ ಗೃಹಬಳಕೆಗೆ ಮೀಸಲಾದ ಎಲ್‍ಪಿಜಿ ಸಿಲಿಂಡರ್‍ಗಳನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸುತ್ತಿರುವ ಕುರಿತು ಬಂದ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಗುರುವಾರ ಅಚ್ಚರಿ ದಾಳಿ ನಡೆಸಿದರು. ಈ ವೇಳೆ ನಿಯಮ ಉಲ್ಲಂಘಿಸಿ ಬಳಸಲಾಗುತ್ತಿದ್ದ 46 ಗೃಹಬಳಕೆಯ ಎಲ್‍ಪಿಜಿ ಸಿಲಿಂಡರ್‍ಗಳನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಸಹಾಯಕ ಆಯುಕ್ತ ಶ್ರೀಧರ್ ಗೊಟ್ಟೂರು ಅವರ ನೇತೃತ್ವದಲ್ಲಿ, ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ನಿರ್ದೇಶನದ ಮೇರೆಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳ ತಂಡವು ವಿವಿಧ ಹೋಟೆಲ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

ಪರಿಶೀಲನೆಯ ವೇಳೆ ಕೆಲವು ಹೋಟೆಲ್‍ಗಳಲ್ಲಿ ವಾಣಿಜ್ಯ ಬಳಕೆಗೆ ಗೃಹಬಳಕೆಯ ಸಿಲಿಂಡರ್‍ಗಳನ್ನು ಅಕ್ರಮವಾಗಿ ಬಳಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಅಧಿಕಾರಿಗಳು ಸಿಲಿಂಡರ್‍ಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಆರಂಭಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಹೋಟೆಲ್‍ಗಳು ಮತ್ತು ಇತರ ವಾಣಿಜ್ಯ ಸಂಸ್ಥೆಗಳು ಕಡ್ಡಾಯವಾಗಿ ವಾಣಿಜ್ಯ ಎಲ್‍ಪಿಜಿ ಸಿಲಿಂಡರ್‍ಗಳನ್ನು ಮಾತ್ರ ಬಳಸಬೇಕು. ಗೃಹಬಳಕೆಯ ಸಿಲಿಂಡರ್‍ಗಳನ್ನು ವ್ಯಾಪಾರ ಉದ್ದೇಶಗಳಿಗೆ ಬಳಸುವುದು ಕಾನೂನುಬಾಹಿರವಾಗಿದ್ದು, ಇದರಿಂದ ಸರ್ಕಾರಕ್ಕೆ ನಷ್ಟವಾಗುವುದರ ಜೊತೆಗೆ ಸಾರ್ವಜನಿಕರಿಗೆ ಸಿಗಬೇಕಾದ ಸಿಲಿಂಡರ್‍ಗಳ ಸರಬರಾಜಿಗೂ ತೊಂದರೆ ಉಂಟಾಗುತ್ತದೆ.

ಇದಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ಎಲ್‍ಪಿಜಿ ಸಿಲಿಂಡರ್‍ಗಳ ಕೊರತೆ ಇಲ್ಲವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಗೃಹಬಳಕೆಯ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್‍ಗಳ ಸಾಕಷ್ಟು ಲಭ್ಯತೆ ಇದ್ದು, ಈ ಕುರಿತು ಹರಡುತ್ತಿರುವ ವದಂತಿಗಳಿಗೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದ್ದಾರೆ.

ದಾಳಿಯಲ್ಲಿ ವಶಪಡಿಸಿಕೊಂಡ ಸಿಲಿಂಡರ್‍ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಒಪ್ಪಿಸಲಾಗಿದ್ದು, ಸಂಬಂಧಪಟ್ಟ ಹೋಟೆಲ್ ಮಾಲೀಕರ ವಿರುದ್ಧ ಕಾನೂನು ಪ್ರಕಾರ ದಂಡ ಹಾಗೂ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.