
ಪರಂ ಭರವಸೆ
ಬೆಂಗಳೂರು, ಮಾ. ೧೭- ವಿಧಾನಸಭೆಯಲ್ಲಿ ನಿನ್ನೆ ಲಿಖಿತ ಮೂಲಕ ಉತ್ತರಿಸುವ ಪ್ರಶ್ನೆಗೆ ಉತ್ತರ ಬರುತ್ತಿಲ್ಲ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಪೀಠದಿಂದ ಹೊರ ನಡೆದ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸದನದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಉತ್ತರ ನೀಡುವ ಪ್ರಕ್ರಿಯೆಯನ್ನು ಸುಧಾರಿಸಲಾಗುವುದು. ನಾಳೆಯಿಂದ ಎಲ್ಲವೂ ಸರಿ ಹೋಗಲಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ ಬೆನ್ನಲ್ಲೆ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಯಾವ ಇಲಾಖೆಯಿಂದ ಸದನದಲ್ಲಿ ಉತ್ತರಿಸುವ ಪ್ರಶ್ನೆಗಳ ಪೈಕಿ ಎಷ್ಟು ಉತ್ತರ ಬಂದಿವೆ, ಎಷ್ಟು ಉತ್ತರ ಬಂದಿಲ್ಲ ಎಂಬ ಪಟ್ಟಿಯನ್ನು ಓದಿದರು.
ಪ್ರಶ್ನೋತ್ತರ ಅವಧಿಯ ಸಂದರ್ಭದಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸದನದಲ್ಲಿ ಉತ್ತರಿಸಬೇಕಾದ ೧೩೧ ಪ್ರಶ್ನೆಗಳ ಪೈಕಿ ೫೪ ಪ್ರಶ್ನೆಗಳಿಗೆ ಉತ್ತರ ಒದಗಿಸಲಾಗಿದೆ ಎಂದಾಗ ವಿಪಕ್ಷಗಳು ಇಂದೂ ಸಹ ಹೆಚ್ಚು ಉತ್ತರಗಳು ಬಂದಿಲ್ಲ ಎಂದಾಗ ಗೃಹ ಸಚಿವರು, ಸಭಾಧ್ಯಕ್ಷರು ನಿನ್ನೆ ನಮಗೆ ಸೂಚನೆ ಕೊಟ್ಟಿದ್ದಾರೆ. ಅದರಂತೆ ಮುಖ್ಯಮಂತ್ರಿಗಳು ಸಹ ಎಲ್ಲ ಸಚಿವರುಗಳಿಗೆ ಸೂಚನೆ ಕೊಟ್ಟಿದ್ದಾರೆ. ನಾಳೆಯಿಂದ ಎಲ್ಲ ಸರಿ ಹೋಗುತ್ತದೆ ಸದಸ್ಯರ ಎಲ್ಲರ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದರು.
ಈ ಹಂತದಲ್ಲಿ ಮಧ್ಯ ಪ್ರವೇಶಿಸಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ರೋಗಿಗಳಿಗೆ ಮದ್ದು ನೀಡಿದ ನಂತರ ಆರೋಗ್ಯ ಸುಧಾರಿಸಲು ೨-೩ ದಿನಗಳು ಬೇಕಾಗುತ್ತದೆ. ಆದೇ ರೀತಿ ನಾವು ನಿನ್ನೆ ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದೇನೆ. ಎಲ್ಲವೂ ಸರಿ ಹೋಗಬಹುದು. ಎಂದರು.
ಆಗ ಗೃಹ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ ಎಂದರು
ಗೃಹ ಸಚಿವ ಡಾ.ಜಿ. ಪರಮೇಶ್ವರ್ ನಾಳೆಯಿಂದ ಸದನದಲ್ಲಿ ಉತ್ತರಿಸುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರಗಳು ಇರಲಿವೆ ಎಂದು ಹೇಳಿದ ನಂತರ ಸಭಾಧ್ಯಕ್ಷರು, ಯಾವ ಇಲಾಖೆಗೆ ಎಷ್ಟು ಪ್ರಶ್ನೆ ಕೇಳಲಾಗಿತ್ತು, ಎಷ್ಟು ಉತ್ತರ ಬಂದಿದೆ ಎಂಬ ಪಟ್ಟಿಯನ್ನು ಓದಿದರು.
ಡಿಪಿಎಆರ್‌ಗೆ ೨೩ ಪ್ರಶ್ನೆ ಕೇಳಲಾಗಿತ್ತು. ೬ಕ್ಕೆ ಉತ್ತರ ಬಂದಿದೆ. ಆರ್ಥಿಕ ಇಲಾಖೆಗೆ ೩೩ ಪ್ರಶ್ನೆಗಳನ್ನು ಕೇಳಲಾಗಿತ್ತು. ೬ಕ್ಕೆ ಉತ್ತರ ಬಂದಿದೆ. ಪರಿಶಿಷ್ಟ ಜಾತಿ ಪಂಗಡದ ಕಲ್ಯಾಣ ಇಲಾಖೆಗೆ ೯ ಪ್ರಶ್ನೆ ಕೇಳಾಗಿತ್ತು ೧ಕ್ಕೂ ಉತ್ತರ ಬಂದಿಲ್ಲ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ೧೦ ಪ್ರಶ್ನೆಗಳನ್ನು ಕೇಳಲಾಗಿತ್ತು ಒಂದಕ್ಕೂ ಉತ್ತರ ಬಂದಿಲ್ಲ. ಸಹಕಾರ ಇಲಾಖೆಗೆ ೧೨ ಪ್ರಶ್ನೆಗಳನ್ನು ಕಳುಹಿಸಲಾಗಿತ್ತು. ಒಂದಕ್ಕೂ ಉತ್ತರ ಬಂದಿಲ್ಲ.ವಾರ್ತಾ ಇಲಾಖೆಗೆ ಒಂದು ಪ್ರಶ್ನೆ ಕೇಳಲಾಗಿತ್ತು ಒಂದಕ್ಕೆ ಉತ್ತರ ಬಂದಿದೆ. ಜಲ ಸಂಪನ್ಮೂಲ ಇಲಾಖೆಗೆ ೩೩ ಪ್ರಶ್ನೆಗಳನ್ನು ಕೇಳಲಾಗಿತ್ತು ನಾಲ್ಕಕ್ಕೆ ಮಾತ್ರ ಉತ್ತರ ಬಂದಿದೆ. ನಗರಾಭಿವೃದ್ಧಿ ಇಲಾಖೆಗೆ ೨೧ ಪ್ರಶ್ನೆಗಳನ್ನು ಕೇಳಲಾಗಿತ್ತು. ೮ ಕ್ಕೆ ಮಾತ್ರ ಉತ್ತರ ಬಂದಿದೆ.
ಗೃಹ ಮತ್ತು ಒಳಾಂಗಣ ಇಲಾಖೆಗೆ ೩೫ ಪ್ರಶ್ನೆ ಕೇಳಲಾಗಿತ್ತು. ೨೬ ಕ್ಕೆ ಉತ್ತರ ಬಂದಿದೆ. ಕಾನೂನು ಇಲಾಖೆಗೆ ೫ ಪ್ರಶ್ನೆ ಕೇಳಲಾಗಿತ್ತು. ೩ ಕ್ಕೆ ಉತ್ತರ ಬಂದಿದೆ. ಪ್ರವಾಸೋದ್ಯಮ ಇಲಾಖೆಗೆ ೨೫ ಪ್ರಶ್ನೆ ಕೇಳಲಾಗಿತ್ತು. ಒಂದಕ್ಕೆ ಮಾತ್ರ ಉತ್ತರ ಬಂದಿದೆ. ಸಣ್ಣ ನೀರಾವರಿ ಇಲಾಖೆಗೆ ೧೯ ಪ್ರಶ್ನೆ ಕೇಳಲಾಗಿತ್ತು ೧೩ ಪ್ರಶ್ನೆಗಳಿಗೆ ಉತ್ತರ ಬಂದಿದೆ. ಐಟಿಬಿಟಿ ಇಲಾಖೆಗೆ ೨ ಪ್ರಶ್ನೆ ಕೇಳಾಗಿತ್ತು ೨ಕ್ಕೂ ಉತ್ತರ ಬಂದಿದೆ ಎಂದು ಹೇಳಿದರು.






























