
ಹುಮನಾಬಾದ್ : ಜೂ.23:ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಗುಣಮಟ್ಟದ ಶಿಕ್ಷಣ ಅಗತ್ಯ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್ ಹೇಳಿದರು.
ತಾಲೂಕಿನ ಬೋತಗಿ ಗ್ರಾಮದ ನೆಹರು ನಗರದಲ್ಲಿ ಭಾನುವಾರ ನಡೆದ ವಿಶ್ವ ಜ್ಞಾನಿ, ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಮೂರ್ತಿ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ತಾರತಮ್ಯ, ಜಾತಿ ವ್ಯವಸ್ಥೆ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಲೇ ಬಾಬಾ ಸಾಹೇಬರು ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಮತ್ತು ಅವಕಾಶಗಳು ಸಿಗಬೇಕೆಂದು ಅಚಲ ಸಂಕಲ್ಪ ಹೊಂದಿದ್ದರು ಎಂದು ತಿಳಿಸಿದರು.
ಶಿಕ್ಷಣ ಮತ್ತು ಸಬಲೀಕರಣದಿಂದ ಸಮಾನತೆ ಎಂಬುದು ಸಂಪೂರ್ಣವಾಗಿ ಹೋಗಲಾಡಿಸಬೇಕು. ಇದರ ಜೊತೆಯಲ್ಲಿ ಶೋಷಿತ, ದಲಿತ, ಹಿಂದುಳಿದ ಸಮುದಾಯಗಳ ಅಭಿವೃದ್ಧಿಯಾಗಬೇಕು ಎಂಬುವುದು ಅಂಬೇಡ್ಕರ್ ಅವರ ಆಶಯವಾಗಿತ್ತು.
ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ ಅದನ್ನು ಕುಡಿದವರು ಘರ್ಜಿಸಲೇಬೇಕು ಎಂದು ಹೇಳುವುದರ ಮೂಲಕ ದೇಶದಲ್ಲಿನ ಅಸಮಾನತೆ ನಿವಾರಣೆಗೆ ಶಿಕ್ಷಣವೇ ಮೂಲ ಮದ್ದು ಎನ್ನುವುದು ಅಂಬೇಡ್ಕರ್ ವಿಚಾರವಾಗಿತ್ತು ಎಂದರು.
ಶಿಕ್ಷಣದ ಮೂಲಕ ಸಬಲೀಕರಣ, ಸಾಮಾಜಿಕ ಕಟ್ಟುಪಾಡುಗಳಿಗೆ ಸವಾಲು ಹಾಕುವ ಮತ್ತು ಭಯ ಹುಟ್ಟಿಸುವ ಸಾಧನವಾಗಿ ಶಿಕ್ಷಣಕ್ಕೆ ಅಂಬೇಡ್ಕರ್ ಅವರು ಬಹಳ ಒತ್ತು ನೀಡಿದ್ದರು ಎಂದು ಕೊಂಡಾಡಿದರು.
ತಳ ಸಮುದಾಯದಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವ ಮತ್ತು ಹೊಸ ನಾಯಕರನ್ನು ಸೃಷ್ಟಿಸುವ ಸಾಧನವಾಗಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅಂಬೇಡ್ಕರ್ ಅವರು ಬಲವಾಗಿ ನಂಬಿದ ಮಹಾನ್ ಚೇತನ ಎಂದರು.
ಭಾರತ ದೇಶಕ್ಕೆ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಪ್ರತಿಫಲವಾಗಿ ಇಂದು ದೇಶದಲ್ಲಿ ಕೆಳ ವರ್ಗದ ಬಹುತೇಕ ನಾಯಕರು ಗುಣಮಟ್ಟದ ಶಿಕ್ಷಣ ಪಡೆದು, ರಾಜಕೀಯ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ, ಮುಖ್ಯಮಂತ್ರಿಯಾಗಿ, ಸಚಿವರಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಒಟ್ಟಾರೆಯಾಗಿ ಇಂದಿನ ಯುವ ಪೀಳಿಗೆಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಅರಿತುಕೊಳ್ಳುವ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ಮೈಗೂಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಅಲ್ಲದೆ ಗುರು ಹಿರಿಯರನ್ನು ಗೌರವದಿಂದ ಕಾಣಬೇಕು. ಜೊತೆಗೆ ಅಂಬೇಡ್ಕರ್ ಅವರ ಕನಸು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಅವರ ವಿಚಾರಧಾರೆಗಳು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸರಿ ದಾರಿಯಲ್ಲಿ ನಡೆದಾಗ ಮಾತ್ರ ಅಂಬೇಡ್ಕರ್ ಅವರ ಜಯಂತಿ ಹಾಗೂ ಅವರ ಮೂರ್ತಿ ಅನಾವರಣ ಕಾರ್ಯಕ್ರಮಗಳಿಗೆ ವಿಶೇಷವಾದ ಅರ್ಥವನ್ನು ಬರುತ್ತದೆ ಎಂದರು.
ಎಸ್.ಜಿ.ಹುಗ್ಗಿ ಪಾಟೀಲ್ ವಿಶೇಷ ಉಪನ್ಯಾಸ ನೀಡಿ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ವಿಶ್ವಜ್ಞಾನಿಯಾಗಿದ್ದಾರೆ.ವಿಶ್ವದ ಹಲವಾರು ವಿಶ್ವ ವಿದ್ಯಾಲಯಗಳಿಂದ 32 ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಹಾಗೂ ವಿದೇಶದ ಪ್ರಖ್ಯಾತ ವಿಶ್ವ ವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಕೂಡ ಪಡೆದಿದ್ದಾರೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್, ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಜಿಪಂ. ಮಾಜಿ ಸದಸ್ಯ ವೀರಣ್ಣ ಪಾಟೀಲ್, ಅಬ್ದುಲ್ ಮನ್ನಾನ್ ಸೇಠ್, ಪಂಡಿತರಾವ ಚಿದ್ರಿ, ರಮೇಶ ಡಾಕುಳಗಿ, ಮಲ್ಲಿಕಾರ್ಜುನ್ ಮಹೇಂದ್ರಕರ್, ಮಲ್ಲಿಕಾರ್ಜುನ್ ಪ್ರಭಾ, ಸಮಿತಿ ಚಂದ್ರಕಾಂತ ಮೇಲ್ದೊಡ್ಡಿ, ಹುಲೆಪ್ಪ ಠಾಕೂರ, ಬಾಬುರಾವ ಮೇಲ್ದೊಡ್ಡಿ, ಬಸವರಾಜ ಮೇಲ್ದೊಡ್ಡಿ, ಕುಪೇಂದ್ರ ಮೇಲ್ದೊಡ್ಡಿ, ಶೇಖರ ಮೇಲ್ದೊಡ್ಡಿ, ಅಭಿಷೇಕ ಭೋಲಾ, ಸಂದೀಪ ನಡುವಿನಕೇರಿ, ಸಾಗರ ಮೇಲ್ದೊಡ್ಡಿ, ಮಹಾಂತೇಶ ಬೆಳಕೇರಿ, ಸೋಮನಾಥ ಮೇಲ್ದೊಡ್ಡಿ ಇದ್ದರು.