
ಸೇಡಂ,ಫೆ ೦೧: ಶ್ರೀ ಕೊತ್ತಲ ಬಸವೇಶ್ವರ ದೇವಾಲಯವು ಕೇವಲ ಪೂಜಾ-ಪುನಸ್ಕಾರಗಳ ಧಾರ್ಮಿಕ ಕೇಂದ್ರವಾಗಿರದೆ, ಅದು ಅನ್ನ, ಅರಿವು ಮತ್ತು ಆಶ್ರಯ ದಾಸೋಹ ತಾಣವಾಗಿ ಸಮಾಜದ ಹೃದಯದಲ್ಲಿ ಮಾನವೀಯತೆಯ ಬೆಳಕನ್ನು ಹರಡುತ್ತಿರುವ ಪಾವನ ಕ್ಷೇತ್ರ.ಇಲ್ಲಿ ಧರ್ಮದ ಆಚರಣೆಯಷ್ಟೇ ಅಲ್ಲ, ಅದು ಬದುಕಿನ ಉಸಿರಾಗಿ, ಸೇವೆಯ ರೂಪವಾಗಿ ಪ್ರತಿಫಲಿಸುತ್ತದೆ. ಈ ಮಹತ್ವದ ಪರಿವರ್ತನೆಗೆ ಜೀವ ತುಂಬಿ, ದೇವಾಲಯವನ್ನು ಆಧ್ಯಾತ್ಮಿಕ ಹಾಗೂ ಸಾಮಾಜಿಕ ಮಹಾ ಕ್ಷೇತ್ರವನ್ನಾಗಿ ರೂಪಿಸಿದ ಮಹಾನ್ ಚೇತನವೇ ಪೂಜ್ಯ ಶ್ರೀ ಡಾ. ಸದಾಶಿವ ಸ್ವಾಮಿಗಳು.ಪೂಜ್ಯರ ಪೂಜಾ ನಿಷ್ಠೆಯು ದೈವಭಕ್ತಿಯಲ್ಲಿಯೇ ತಲ್ಲೀನವಾಗಿ, ಸೇವೆ-ಶ್ರದ್ಧೆ-ಶಿಸ್ತುಗಳ ಸಂಗಮವಾಗಿ ಹೊಳೆಯುತ್ತಿದೆ.ಪೂಜ್ಯ ಶ್ರೀಗಳ ದೂರದೃಷ್ಟಿ, ಶಿಸ್ತುಬದ್ಧ ಸೇವಾಭಾವ ಮತ್ತು ಸಮಾಜಮುಖಿ ಚಿಂತನೆಯ ಫಲವಾಗಿ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯವು ಇಂದು ಭಕ್ತರ ಪೂಜಾ ತಾಣವನ್ನಷ್ಟೇಕ್ಕೆ ಸೀಮಿತವಾಗದೆ, ನಾಡಿನ ಜನತೆಗೆ ಭರವಸೆಯ ಆಶ್ರಯವಾಗಿ ಪರಿಣಮಿಸಿದೆ.ಇಲ್ಲಿ ನಡೆಯುವ ಅನ್ನದಾನವು ಕೇವಲ ಧಾರ್ಮಿಕ ಪದ್ಧತಿಯಲ್ಲ.ಅದೊಂದು ಮಾನವೀಯತೆಯ ಮಹೋತ್ಸವವಾಗಿದೆ.ಹಸಿದವರಿಗೆ ಅನ್ನ,ದೀನರಿಗೆ ಧೈರ್ಯ,ದಾರಿ ತಪ್ಪಿದವರಿಗೆ ದಿಕ್ಕು,ಅನಾಥರಿಗೆ ಆಶ್ರಯ, ಜ್ಞಾನ ಹುಡುಕುವವರಿಗೆ ಅರಿವು ಇವೆಲ್ಲವೂ ಈ ದೇವಾಲಯದ ಸೇವಾ ಸಂಸ್ಕೃತಿಯ ಜೀವಾಳಗಳಾಗಿವೆ.ಪೂಜ್ಯ ಶ್ರೀಗಳ ಜೀರ್ಣೋದ್ಧಾರ ಕಾರ್ಯವು ಕಲ್ಲು-ಮರಗಳ ಪುನರ್ ನಿರ್ಮಾಣಕ್ಕೆ ಮಾತ್ರ ಸೀಮಿತವಾಗದೆ, ಆತ್ಮಗಳ ಪುನರುತ್ಥಾನಕ್ಕೂ ದಾರಿತೋರುತ್ತಿದೆ.ಬಸವತತ್ತ್ವದ ಪ್ರಚಾರ, ಶರಣರ ವಚನ ಚಿಂತನೆ, ಪ್ರವಚನಗಳು, ಧರ್ಮಬೋಧನೆಗಳೆಲ್ಲವೂ ಇಲ್ಲಿ *ಜೀವಂತವಾಗಿ ಹರಿದುಬರುತ್ತಿವೆ.ಈ ದೇವಾಲಯವು ಇಂದು ಒಂದು ಜ್ಞಾನಪೀಠದಂತೆ, ಮೌನದಲ್ಲಿಯೇ ಮಾತನಾಡುವ ಗುರುಕುಲದಂತೆ,ಶ್ರದ್ಧೆ ಮತ್ತು ಚಿಂತನೆಯ ಸಂಗಮವಾಗಿ ಕಾಣಿಸುತ್ತದೆ.
ಭರತ ಹುಣ್ಣಿಮೆಯ ಪವಿತ್ರ ದಿನದಂದು ಷ ಬ್ರ ಪೂಜ್ಯ ಶ್ರೀ ಗಂಗಾಧರ ಶಿವಾಚಾರ್ಯರು ಭಂಗಿಮಠ,ಮಳಖೇಡ,ಷ ಬ್ರ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯ ಮಹಾ ಸ್ವಾಮಿಗಳು, ಶ್ರೀ ಶಿವಶಂಕರೇಶ್ವರ ಮಠ ಸೇಡಮ್,ಮ ನಿ ಪ್ರ ಪೂಜ್ಯ ಶ್ರೀ ಪಂಚಾಕ್ಷರಯ್ಯ ಸ್ವಾಮಿಗಳು, ಶ್ರೀ ಹಾಲಪಯ್ಯ ಮಠ,ಸೇಡಮ್ ಹಾಗೂ ಸೇಡಮ್ ನಗರ ಮತ್ತು ತಾಲೂಕಿನ ನಾಗರೀಕ ಗಣ್ಯರು, ದೇವಾಲಯದ ಭಕ್ತರ ಮತ್ತು ದೇವಾಲಯ ಪಂಚ ಮಂಡಳಿಯ ಸರ್ವ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ, ಷ ಬ್ರ ಪೂಜ್ಯ ಶ್ರೀ ಶಿವಶಂಕರ ಶಿವಾಚಾರ್ಯರಿಂದ ದಿ ೦೧.೧೦.೨೦೧೮ ರಂದು ಚಿನ್ಮಯ ಅನುಗ್ರಹ ದೀಕ್ಷೆ ಪಡೆದ ಪೂಜ್ಯ ಶ್ರೀ ಡಾ. ಸದಾಶಿವ ಸ್ವಾಮಿಗಳ ಪೀಠಾರೋಹಣದ ಐತಿಹಾಸಿಕ ಸಂಭ್ರಮಕ್ಕೆ ಇಂದು ೨೧ನೇ ವರ್ಷ.ಪೀಠಾರೋಹಣ ಕೇವಲ ಒಂದು ಕಾಲಘಟ್ಟದ ಮೈಲಿಗಲ್ಲಲ್ಲ.ಅದು ಪೂಜ್ಯ ಡಾ ಸದಾಶಿವ ಶ್ರೀಗಳ ಸೇವೆಯ ಸಾಧನೆಗೆ, ತ್ಯಾಗದ ಪಾವಿತ್ರ‍್ಯಕ್ಕೆ ಮತ್ತು ಧರ್ಮದ ನಿರಂತರತೆಯ ಪ್ರಬಲ ಸಂಕೇತ. ಇಪ್ಪತ್ತೊಂದು ವರ್ಷಗಳ ಪೀಠಾರೋಹಣದ ಪಯಣವು ಪೂಜ್ಯರನ್ನು ಒಬ್ಬ ಧಾರ್ಮಿಕ ಗುರುವರ್ಯರಷ್ಟೇ ಅಲ್ಲ, ಸಮಾಜದ ನೈತಿಕ ದಾರಿದೀಪವಾಗಿ ಸ್ಥಾಪಿಸಿದೆ.ಅವರ ಜೀವನವೇ ಒಂದು ಮೌನ ಪ್ರವಚನ; ಅವರ ಸರಳ ನಡೆ, ಶುದ್ಧ ನುಡಿ ಸಮಾಜಕ್ಕೆ ಮಾರ್ಗದರ್ಶನ.ಇಂದಿನ ತಂತ್ರಜ್ಞಾನಮಯ, ಆತುರದ ಬದುಕಿನಲ್ಲಿ ಮಾನವೀಯ ಮೌಲ್ಯಗಳು ಮಂಕಾಗುತ್ತಿರುವ ಸಂದರ್ಭದಲ್ಲಿ, ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಮತ್ತು ಪೂಜ್ಯ ಶ್ರೀಗಳ ಸೇವಾ ಚಿಂತನೆಯು ಸಮಾಜಕ್ಕೆ ದಿಕ್ಕು ತೋರಿಸುವ ಅಚಲ ದೀಪವಾಗಿದೆ.ಅವರ ಪೀಠಾರೋಹಣದ ಈ ೨೧ ನೇ ಸಂಭ್ರಮದ ವರ್ಷವು ನಾಡಿನ ಜನತೆಗೆ ಹೊಸ ಆಶೆ, ಹೊಸ ಅರಿವು ಮತ್ತು ಹೊಸ ಶಕ್ತಿಯನ್ನು ನೀಡಲಿ ಎಂಬುದು ಎಲ್ಲರ ಹೃದಯಪೂರ್ವಕ ಸದಾಶಯ.




























