ಲೋಕಾಯುಕ್ತ ಬಲೆಗೆ ಪಿಎಸ್‌ಐ

ತುಮಕೂರು, ಜ. ೩೧- ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡುವ ಸಂಬಂದ ಲಂಚ ಸ್ವೀಕರಿಸುತ್ತಿದ್ದ ಗ್ರಾಮಾಂತರ ಪಿಎಸ್‌ಐ ಚೇತನ್ ಲೋಕಾಯುಕ್ತ ಪೊಲೀಸರು ಬೀಸಿದ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.


ವಶಪಡಿಸಿಕೊಂಡಿದ್ದ ಕಾರನ್ನು ಬಿಡುಗಡೆ ಮಾಡಲು ಪಿಎಸ್‌ಐ ಚೇತನ್ ಕಾರು ಮಾಲೀಕ ನಾಗೇಶ್ ಎಂಬುವರಿಗೆ ೧ ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಒಂದು ವೇಳೆ ಹಣ ನೀಡದಿದ್ದರೆ ಗಾಂಜಾ ಸಾಗಾಣಿಕೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿಯೂ ಬೆದರಿಸಿದ್ದರು ಎನ್ನಲಾಗಿದೆ.


ಕೆಸರುಮಡು ಗ್ರಾಮದ ಬಳಿ ೩ ದಿನಗಳ ಹಿಂದೆ ನಾಗೇಶ್ ಕಾರು ಬಿಟ್ಟು ಹೋಗಿದ್ದರು. ನಂತರ ಕಾರನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರಿಂದ ಹಿಂಪಡೆಯಲು ಪೊಲೀಸ್ ಠಾಣೆಗೆ ಬಂದಿದ್ದರು.


ವಾಹನ ಬಿಡುಗಡೆಗೆ ಒಟ್ಟು ೧ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಎಸ್‌ಐ ಚೇತನ್, ಮೊದಲ ಹಂತವಾಗಿ ೪೦ ಸಾವಿರ ಹಣವನ್ನು ಪಡೆಯಲು ಸೂಚಿಸಿದ್ದರು ಎಂದು ಹೇಳಲಾಗಿದೆ. ಈ ಹಣವನ್ನು ನೇರವಾಗಿ ತಮ್ಮ ಕೈಗೆ ನೀಡುವ ಬದಲು, ಕ್ಯಾತ್ಸಂದ್ರ ಸಮೀಪದ ಹೋಟೆಲ್‌ನ ಸಿಬ್ಬಂದಿಯೊಬ್ಬರಿಗೆ ನೀಡುವಂತೆ ವಾಹನ ಮಾಲೀಕರಿಗೆ ಸೂಚಿಸಿದ್ದರು ಎನ್ನಲಾಗಿದೆ.


ಪೊಲೀಸರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ನಾಗೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.


ನಿನ್ನೆ ರಾತ್ರಿ ಕ್ಯಾತ್ಸಂದ್ರದ ಹೋಟೆಲ್‌ನಲ್ಲಿ ಹೋಟೆಲ್ ಸಿಬ್ಬಂದಿ ಲಂಚದ ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಸಿಬ್ಬಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ನಡೆಸಿದ ವಿಚಾರಣೆಯಲ್ಲಿ ಹಣ ಪಿಎಸ್‌ಐ ಚೇತನ್ ಸೂಚನೆಯ ಮೇರೆಗೆ ಪಡೆಯಲಾಗುತ್ತಿತ್ತು ಎಂಬುದು ಬೆಳಕಿಗೆ ಬಂದಿದೆ.


ಈ ಮಾಹಿತಿಯ ಆಧಾರದ ಮೇಲೆ ಇಂದು ಬೆಳಗಿನ ಜಾವ ಲೋಕಾಯುಕ್ತ ಪೊಲೀಸರು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಚೇತನ್ ಅವರನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ಮುಂದಿನ ವಿಚಾರಣೆಗಾಗಿ ಅವರನ್ನು ಲೋಕಾಯುಕ್ತ ಕಚೇರಿಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.