
ಔರಾದ್ :ಅ.20: ಅತಿವೃಷ್ಟಿಯಿಂದ ಬೆಳೆ ಹಾನಿ ಸಂಭವಿಸಿ ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ವಿತರಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಎಪಿಎಂಸಿ ವೃತ್ತದ ಬಳಿ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಬಂದು ಕೊನೆಗೊಂಡಿತು. ಶಾಸಕರು, ಪಕ್ಷದ ಮುಖಂಡರು ಹಾಗೂ ರೈತರು ಮುಖ್ಯಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರರಿಗೆ ಸಲ್ಲಿಸಿದರು. ಎತ್ತಿನ ಬಂಡಿಗಳು, ತಮಟೆ, ಬ್ಯಾಂಡ್ ತಂಡಗಳ ಸದ್ದಿಗೆ ಹೆಜ್ಜೆಯಿಡುತ್ತಾ ಕಾರ್ಯಕರ್ತರು, ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಶಾಸಕ ಪ್ರಭು ಬಿ.ಚವ್ಹಾಣ ಅವರು ಎತ್ತಿನ ಗಾಡಿಯನ್ನು ಹತ್ತಿ, ಕೊಳೆತ ಸೋಯಾ, ತೊಗರಿ ಬೆಳೆಯನ್ನು ತಲೆಯ ಮೇಲೆ ಹೊತ್ತು ಗಮನ ಸೆಳೆದರು. ಪ್ರತಿಭಟನೆಯಲ್ಲಿ ಭಾಗವಹಿಸಿದ ಎಲ್ಲರೂ ಕೈಗೆ ಕಪ್ಪು ಪಟ್ಟಿಯನ್ನು ಧರಿಸಿ ಸರ್ಕಾರದ ರೈತ ವಿರೊಧಿ ನಡೆಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಪ್ರಭು ಚವ್ಹಾಣ ಅವರು ಮಾತನಾಡಿ, ರೈತರ ನಾಯಕ, ಬಡವರ ನಾಯಕರೆಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳೇ ಎಲ್ಲಿದ್ದೀರಿ ? ಬೀದರ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಮೂಲಕ ಸರ್ವೇ ಮಾಡಿದ್ದೀರಿ. ಹಾಳಾದ ಸೋಯಾ, ಉದ್ದು, ಹೆಸರು ಮೇಲಿಂದ ಹೇಗೆ ಕಾಣಲು ಸಾಧ್ಯ ಎಂದು ಪ್ರಶ್ನಿಸಿದರು. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಆದರೂ ರೈತರ ಜಮೀನುಗಳಿಗೆ ಯಾರೂ ಬಂದು ನೋಡಿಲ್ಲ. ರೈತರ ಗೋಳು ಕೇಳಿಸಿಕೊಂಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ದೀಪಾವಳಿ ಹಬ್ಬದೊಳಗಾಗಿ ರೈತರ ಖಾತೆಗೆ ಪರಿಹಾರ ಮೊತ್ತ ಪಾವತಿಸುವುದಾಗಿ ತಿಳಿಸಿದ್ದರು. ಆದರೆ ಇಲ್ಲಿವರೆಗೆ ದುಡ್ಡು ಹೋಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರದ ಬಗ್ಗೆ ಮಾತನಾಡುವ ತಾವು ರೈತರ ಖಾತೆಗಳಿಗೆ ದುಡ್ಡು ಹಾಕಿಸಬೇಕು. ಇಲ್ಲವೇ ಇಲ್ಲವೇ ಕುರ್ಚಿ ಖಾಲಿ ಮಾಡಬೇಕೆಂದು ಆಗ್ರಹಿಸಿದರು.
ದಸರಾ ಹಬ್ಬವು ಸಂಕಷ್ಟದಲ್ಲೇ ಕಳೆಯಿತು. ಉದ್ದು, ಹೆಸರು ಎಲ್ಲ ಬೆಳೆಗಳು ನಾಶವಾಗಿವೆ. ರೈತರು ಊಟಕ್ಕೂ ಸಮಸ್ಯೆ ಎದುರಿಸುತ್ತಿದ್ದಾರೆ. ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರಧನ ಪಾವತಿಸಬೇಕು. ರೈತರು ದೀಪಾವಳಿ ಹಬ್ಬವನ್ನಾದರೂ ಸಂತೋಷದಿಂದ ಮಾಡಲಿ ಹಾಗಾಗಿ 10 ದಿನದೊಳಗಾಗಿ ರೈತರ ಖಾತೆಗಳಿಗೆ ಹಣ ಜಮೆಯಾಗಬೇಕು. ಇಲ್ಲವಾದಲ್ಲಿ ತಮ್ಮ ಮನೆ ಮುಂದೆಯೇ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತರಿಗೆ ಸರ್ಕಾರ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಾ ಬಂದಿದೆ. ಮಳೆಯಿಂದಾಗಿ ರಸ್ತೆ, ಸೇತುವೆ, ಮನೆಗಳು ಮುಳುಗಡೆಯಾದರೂ ಹಣ ಬಂದಿಲ್ಲ. ನಾನು ಮುಖ್ಯಮಂತ್ರಿಗಳು, ಕೃಷಿ ಸಚಿವರನ್ನು ಭೇಟಿ ಮಾಡಿ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ವಿಧಾನಸಭಾ ಅಧಿವೇಶನದಲ್ಲಿಯೂ ಗಮನ ಸೆಳೆದಿದ್ದೇನೆ. ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ. ಕೃಷಿ ಸಚಿವರು, ಕಂದಾಯ ಸಚಿವರು ಜಿಲ್ಲೆಗೆ ಭೇಟಿ ನೀಡಿಲ್ಲ. ಇನ್ನಾದರೂ ಸರ್ಕಾರ ರೈತರ ಬಗ್ಗೆ ಕಾಳಜಿ ವಹಿಸಬೇಕು. ಇಲ್ಲವಾದರೆ ಉಗ್ರ ಸ್ವರೂಪದ ಹೋರಾಟ ಮಾಡುತ್ತೇವೆ. ಭಾಲ್ಕಿ ತುಂಬಾ ಘೇರಾವ್ ಹಾಕಲಾಗುತ್ತದೆ ಎಂದು ಹೇಳಿದರು.
ಗ್ಯಾರಂಟಿ ಆಮೀಷ ತೋರಿಸಿ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಎರಡುವರೆ ವರ್ಷವಾಯಿತು. ಅಭಿವೃದ್ದಿಗಿಂತ ಒಳಜಗಳ ಹೆಚ್ಚಾಗಿವೆ. ಇದಕ್ಕೆ ನಮ್ಮದೇನು ತಕರಾರಿಲ್ಲ. ಆದರೆ ರಾಜ್ಯದಲ್ಲಿ ಎಲ್ಲ ರೈತರು ನೊಂದಿದ್ದಾರೆ. ನಂದಿ ಬಿಜಲಗಾಂವ, ಹೊಕ್ರಾಣಾ, ಕಮಲನಗರ, ಸಾವಳಿ ಸೇರಿದಂತೆ ಎಲ್ಲ ಕಡೆಗಳಲ್ಲಿ ಮಣ್ಣು ಸಮೇತ ಹೊಲಗಳು ಕೊಚ್ಚಿಕೊಂಡು ಹೋಗಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಕಣ್ಣು, ಕಿವಿ ಇಲ್ಲದಂತೆ ವರ್ತಿಸುತ್ತಿದೆ. ಇದಕ್ಕಾಗಿ ರೈತರೆಲ್ಲರೂ ಒಗ್ಗಟ್ಟಾಗಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಮಾತನಾಡಿ, ಅತಿವೃಷ್ಟಿ ಸಂದರ್ಭದಲ್ಲಿ ಪಕ್ಕದ ಮಹಾರಾಷ್ಟ್ರ ಸರ್ಕಾರ ರೈತರಿಗೆ ಉತ್ತಮ ಸ್ಪಂದನೆ ನೀಡಿದೆ. ಬೆಳೆ ಹಾನಿಯಾದ ಎಲ್ಲ ರೈತರಿಗೆ ಪರಿಹಾರ ನೀಡಿದೆ. ಮಣ್ಣು, ಜಾನುವಾರುಗಳಿಗೂ ಪರಿಹಾರ ನೀಡಲಾಗಿದೆ. ಮುಂದೆ ರೈತರ ಸಾಲ ಮನ್ನಾ ಮಾಡಲಾಗುವುದೆಂದು ಅಲ್ಲಿನ ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಕರ್ನಾಟಕದಲ್ಲಿರುವ ಸರ್ಕಾರ ರೈತರು ನೋವಿನಲ್ಲಿದ್ದರೂ ನಿದ್ರೆಯಲ್ಲಿದೆ ಎಂದು ಆರೋಪಿಸಿದರು.
ನಾವು ಜಿಲ್ಲೆಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ರೈತರ ನೋವುಗಳನ್ನು ಕಣ್ಣಾರೆ ನೋಡಿದ್ದೇವೆ. ಔರಾದ(ಬಿ) ಕ್ಷೇತ್ರದ ಗ್ರಾಮ ಪಂಚಾಯಿತಿಯೊಂದರ ವ್ಯಾಪ್ತಿಯಲ್ಲಿ 316 ಎಂ.ಎಂ ಮಳೆ ದಾಖಲಾಗಿದೆ. ಅನೇಕ ಜನ ಜಾನುವಾರುಗಳು ಮರಣ ಹೊಂದಿವೆ. ರೈತರ ಬೆಳೆ ಸಂಪೂರ್ಣ ಮುಳುಗಡೆಯಾಗಿದೆ. ಜಿಲ್ಲೆಯಲ್ಲಿ ಶೇ.90ರಷ್ಟು ಬೆಳೆ ಹಾನಿ ಸಂಭವಿಸಿದೆ. ಆದರೂ ಸಮೀಕ್ಷೆಯಲ್ಲಿ ಕಡಿಮೆ ತೋರಿಸಲಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ರೈತರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ರೈತರಿಗೆ ಬೆಳೆ ಹಾನಿ ಪರಿಹಾರ ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂಧರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಜಿಲ್ಲಾ ಉಪಾಧ್ಯಕ್ಷ ಅರಹಂತ ಸಾವಳೆ, ಮಂಡಲ ಪ್ರಭಾರಿ ಮಹೇಶ್ವರ ಸ್ವಾಮಿ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಜೆ, ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ಮುಖಂಡರಾದ ರಾಜಶೇಖರ ನಾಗಮೂರ್ತಿ, ಮಾರುತಿ ಚವ್ಹಾಣ, ಶಿವಾಜಿರಾವ ಪಾಟೀಲ ಮುಂಗನಾಳ, ಖಂಡೋಬಾ ಕಂಗಟೆ, ರೈತ ಮೋರ್ಚಾ ತಾಲ್ಲೂಕು ಅಧ್ಯಕ್ಷ ನಾಗಶೆಟ್ಟಿ ಗಾದಗೆ, ಬಸವರಾಜ ಪಾಟೀಲ ಕಮಲನಗರ, ರಂಗಾರಾವ ಜಾಧವ, ಪ್ರವೀಣ ಕಾರಬಾರಿ, ಇನಿಲಕುಮಾರ ಸಂಗಮ್, ಉದಯ ಸೋಲಪೂರೆ, ಭರತ ಕದಂ, ನಾಗಶೆಟ್ಟಿ ಮೇತ್ರೆ, ಬಸವರಾಜ ಹಳ್ಳೆ, ಆನಂದ ದ್ಯಾಡೆ, ಅಶೋಕ ಶಂಬೆಳ್ಳಿ, ಪ್ರಕಾಶ ಜೀರ್ಗೆ, ಸಂಜು ಮುರ್ಕೆ ಬಂಟಿ ರಾಂಪೂರೆ, ಸಚಿನ ಬಿರಾದಾರ, ರಾಜಕುಮಾರ ಸೋರಳ್ಳಿ, ಶ್ರೀನಿವಾಸ ಖೂಬಾ, ಮಲ್ಲಪ್ಪ ದಾನಾ, ಉಮೇಶ ನಾಯಕ್, ಮಲ್ಲಪ್ಪ ನೇಳಗೆ, ಗುಂಡಪ್ಪ ಬಿರಾದಾರ, ರಾಮರೆಡ್ಡಿ ಪಾಟೀಲ, ಗಣೇಶ ಕಾರೆಗಾವೆ, ಅಶೋಕ ಮೇತ್ರೆ, ಶಿವಕುಮಾರ ಪಾಂಚಾಳ ಸೇರಿದಂತೆ ಇತರರಿದ್ದರು.