ಕೃಷಿ ಪಂಪ್‍ಸೆಟ್‍ಗಳಿಗೆ ಹಗಲು ಹೊತ್ತಿನಲ್ಲಿ ತ್ರೀ ಫೇಸ್ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ,ಡಿ.8-ಜಿಲ್ಲೆಯಾದ್ಯಂತ ಕೃಷಿ ಪಂಪ್‍ಸೆಟ್‍ಗಳಿಗೆ ರಾತ್ರಿ ವೇಳೆಯಲ್ಲಿ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡುವುದನ್ನು ಬಿಟ್ಟು ಹಗಲು ಹೊತ್ತಿನಲ್ಲಿ ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‍ಎಸ್)ದ ನೇತೃತ್ವದಲ್ಲಿ ಜೆಸ್ಕಾಂ ಮುಂದೆ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಂತರ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕೃಷಿ ಪಂಪ್‍ಸೆಟ್, ಟ್ರಾನ್ಸ್‍ಫಾರ್ಮ್ ಸುಟ್ಟಿದ ತಕ್ಷಣವೇ ಟಿಸಿ ಕೂಡಿಸಲು, ಜೋತು ಬಿದ್ದ ವಿದ್ಯುತ್ ತಂತಿಗಳನ್ನು ಬಿಗಿ ಮಾಡಲು ಮತ್ತು ಜೋತುಬಿದ್ದ ವಿದ್ಯುತ್ ತಂತಿಯಿಂದ ಕಬ್ಬು ಹಾನಿಯಾದ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು, ವಿದ್ಯುತ್ ಖಾಸಗೀಕರಣ ಕೈ ಬಿಡಬೇಕು, 2022 ವಿದ್ಯುತ್ ಮಸೂದೆ ಹಿಂಪಡೆಯಬೇಕು, ಪಂಪ್‍ಸೆಟ್ ಅಕ್ರಮ ಸಕ್ರಮ ಕೈ ಬಿಡಬೇಕು, ಪಂಪ್‍ಸೆಟ್‍ಗಳಿಗೆ ಮೀಟರ್ ಹಾಕುವುದು ತಡೆಗಟ್ಟಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಸಹ ಕಾರ್ಯದರ್ಶಿ ದಿಲೀಪ್ ಕುಮಾರ್ ನಾಗೂರೆ, ಉಪಾಧ್ಯಕ್ಷರಾದ ಸಿದ್ದಪ್ಪ ಕಲಶೆಟ್ಟಿ, ಚಂದಪ್ಪಾ ಪೂಜಾರಿ, ಕರೆಪ್ಪಾ ಕರಗೊಂಡ, ಸಿದ್ದು ಎಸ್.ಎಲ್., ಸಾಯಬಣ್ಣಾ ಕೊರಬಾ, ಬಾಬು ಡಿ.ಮೇಳಕುಂದಿ ಸೇರಿದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.