ಅರಮನೆಯಲ್ಲಿ ಖಾಸಗಿ ದರ್ಬಾರ್

ಮೈಸೂರು: ಸೆ.೨೨:- ಜಗತ್ಪ್ರಸಿದ್ಧ ಮೈಸೂರು ಅರಮನೆಯಲ್ಲಿ ಇಂದಿನಿಂದ ರತ್ನ ಖಚಿತ ಸಿಂಹಾಸನವೇರಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸುವುದರೊಂದಿಗೆ ಸಾಂಪ್ರದಾಯಿಕವಾಗಿ ನವರಾತ್ರಿ ಚಾಲನೆ ನೀಡಿದರು.


ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಖಾಸಗಿ ದರ್ಬಾರ್. ದಸರಾ ಕೇವಲ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವುದಲ್ಲದೆ ರಾಜಾಡಳಿತದ ಗತವೈಭವವನ್ನೂ ನೆನಪಿಸುತ್ತದೆ. ಅರಮನೆಯ ದರ್ಬಾರ್ ಹಾಲ್‌ನಲ್ಲಿ ರತ್ನಖಚಿತ ಸಿಂಹಾಸವನ್ನೇರಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರಾಜಪೊ?ಷಾಕು ಧರಿಸಿ ೧೧ನೇ ಬಾರಿಗೆ ದರ್ಬಾರ್ ನಡೆಸಲಿದ್ದಾರೆ.


ಅಲ್ಲದೆ ಇದು ಸಂಸದರಾದ ಬಳಿಕ ಅವರ ಎರಡನೇ ದರ್ಬಾರ್. ಪತ್ನಿ ತ್ರಿಷಿಕಾಕುಮಾರಿ, ಪುತ್ರ ಆದ್ಯವೀರ್ ಒಡೆಯರ್ ಜತೆಗೂಡಿ ಸಂಪ್ರದಾಯದಂತೆ ಕಂಕಣ ಕಟ್ಟಲಿದ್ದಾರೆ. ಅದರಂತೆ ಈ ದರ್ಬಾರಿನಲ್ಲಿ ಸಾಂಪ್ರದಾಯಿಕವಾಗಿ ಪಾದಪೂಜೆ ನಡೆಯಲಿದೆ. ಸಿಂಹಾಸನದಲ್ಲಿ ವಿರಾಜಮಾನರಾದ ಬಳಿಕ ಪಾದಪೂಜೆ ಮಾಡುವುದು ಆಕರ್ಷಣೆಯಾಗಿದೆ.


ಈಗಾಗಲೇ ಅರಮನೆಯ ಸ್ಟ್ರಾಂಗ್ ರೂಮ್‌ನಿಂದ ಸಿಂಹಾಸನ ತಂದು ಕನ್ನಡಿ ತೊಟ್ಟಿಯಲ್ಲಿ ಜೋಡಣೆ ಮಾಡಲಾಗಿದೆ. ಇಂದು ಬೆಳಗ್ಗೆ ೫.೩೦ ರಿಂದ ೫.೪೫ರೊಳಗೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಯಿತು. ನಂತರ ಬೆಳಗ್ಗೆ ೯.೫೫ ರಿಂದ ೧೦.೧೫ರ ಒಳಗೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಕಂಕಣ ಧಾರಣೆ ನಡೆಯಿತು. ಬೆಳಗ್ಗೆ ೧೧.೩೫ಕ್ಕೆ ಅರಮನೆಯ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಮಂಗಳವಾದ್ಯದೊಂದಿಗೆ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿವೆ. ಸವಾರಿ ತೊಟ್ಟಿಯ ಬಳಿ ಪಟ್ಟದ ಆನೆ, ಕುದುರೆ, ಹಸು ಜೊತೆ ಮಹಿಳೆಯರು ಕಳಸ ಹೊತ್ತು ತಂದು ಪೂಜೆ ನೆರವೇರಿಸಲಾಯಿತು. ಇಂದಿನಿಂದ ೨೯ರ ವರೆಗೆ ಖಾಸಗಿ ದರ್ಬಾರ್ ಜರುಗಲಿದೆ.


೨೩ ದೇವಾಲಯಗಳ ಪ್ರಸಾದ: ಖಾಸಗಿ ದರ್ಬಾರ್ಗಾಗಿ ಅರಮನೆ ಅರ್ಚಕರು, ಅರಮನೆ ಆವರಣದಲ್ಲಿರುವ ದೇವಾಲಯಗಳು, ಅರಮನೆ ಕುಲದೇವತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇಗುಲ, ಉತ್ತನಹಳ್ಳಿ ಮಾರಮ್ಮ, ನಂಜನಗೂಡಿನ ಶ್ರೀಕಂಠೇಶ್ವರ, ಶ್ರೀರಂಗಪಟ್ಟಣದ ರಂಗನಾಥಸ್ವಾಮಿ, ಮೇಲುಕೋಟೆಯ ಚಲುವನಾರಾಯಣ ಸ್ವಾಮಿ ದೇಗುಲ ಸೇರಿದಂತೆ ೨೩ ದೇವಾಲಯಗಳಿಂದ ತರುವ ತೀರ್ಥವನ್ನು ಸಿಂಹಾಸನಕ್ಕೆ ಪೊ?ರೀಕ್ಷಣೆ, ಪೂಜೆ ಮಾಡಿದ ನಂತರ ಯದುವೀರ್ ಸಿಂಹಾಸನ ಏರಲಿದ್ದಾರೆ. ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ತರಲಾಗುವ ಚಾಮುಂಡೇಶ್ವರಿ ವಿಗ್ರಹಕ್ಕೆ ಭಕ್ತಿಯಿಂದ ನಮಿಸಿ ಯದುವೀರ್ ಸಿಂಹಾಸನರೂಢರಾಗುತ್ತಾರೆ. ಸಿಂಹಾಸನದಿಂದ ಇಳಿಯುವ ಮುನ್ನ ಅದರ ಮೇಲೆ ನಿಂತು ಸೆಲ್ಯೂಟ್ ಮಾಡುತ್ತಾರೆ. ಅರಮನೆ ಸಂಸ್ಥಾನದ ಗೀತೆಯಾದ ‘ಕಾಯೌ ಶ್ರೀ ಗೌರಿ’ ವಾದ್ಯ ಸಂಗೀತ ನುಡಿಸಿದ ನಂತರ, ರಾಜಮನೆತನದ ಸದಸ್ಯರು ವಂದನೆ ಸಲ್ಲಿಸುತ್ತಾರೆ. ಅಲ್ಲದೇ, ಪೊಲೀಸ್ ಬ್ಯಾಂಡ್ನಿಂದ ಮಹಾಗಣಪತಿಂ, ಸರಸ್ವತಿ ಭಗವತಿಂ, ಐಗಿರಿ ನಂದಿನಿ, ವಿಜಯಾಂಬಿಕೆ, ಶ್ರೀ ಚಾಮುಂಡೇಶ್ವರಿ ಸೇರಿದಂತೆ ನಾನಾ ಸಂಗೀತವನ್ನು ನುಡಿಸಲಾಗುವುದು.


ಸೆ.೨೯ ರಂದು ಬೆಳಗ್ಗೆ ೧೦:೧೦ರಿಂದ ೧೦:೩೦ರ ಒಳಗೆ ಸರಸ್ವತಿ ಪೂಜೆ ನೆರವೇರಿಸುವರು. ಅಂದು ರಾತ್ರಿ ಖಾಸಗಿ ದರ್ಬಾರ್ ಕೊನೆಗೊಳ್ಳಲಿದೆ. ಖಾಸಗಿ ದರ್ಬಾರ್ ಮುಗಿದ ಬಳಿಕ ಕನ್ನಡಿ ತೊಟ್ಟಿಯಲ್ಲಿ ಕಾಳ ರಾತ್ರಿ ಪೂಜೆ ನೆರವೇರಿಸಲಿದ್ದಾರೆ. ಆಯುಧ ಪೂಜೆಯ ದಿನದಂದು ಬೆಳಗ್ಗೆ ೬ ಗಂಟೆಗೆ ಚಂಡಿ ಹೋಮ, ಬೆಳಗ್ಗೆ ೭:೩೦ ರಿಂದ ೭:೪೨ರ ಒಳಗೆ ಪಟ್ಟದ ಕತ್ತಿ ಸೇರಿದಂತೆ ಖಾಸಾ ಆಯುಧಗಳನ್ನು ಅರಮನೆಯಿಂದ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕಳುಹಿಸಿ ಪೂಜೆ ಸಲ್ಲಿಕೆಯಾಗಲಿದೆ.
ಬೆಳಗ್ಗೆ ೮ರಿಂದ ೮:೪೦ರ ಒಳಗೆ ಪಟ್ಟದ ಕತ್ತಿ ಹಾಗೂ ಖಾಸಾ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತಂದು ಪೂಜೆ ನೆರವೇರಿಸುವರು. ಬೆಳಗ್ಗೆ ೧೦:೩೫ಕ್ಕೆ ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಿಸಲಿದೆ. ಸಂಜೆ ಸಿಂಹಾಸನಕ್ಕೆ ಅಳವಡಿಸಿರುವ ಸಿಂಹ ಹಾಗೂ ಯದುವೀರ್-ತ್ರಿಷಿಕಾ ಕುಮಾರಿ ಒಡೆಯರ್ ಅವರ ಕಂಕಣ ವಿಸರ್ಜನೆ ಮಾಡಲಾಗುತ್ತದೆ.


ಅ.೨ರಂದು ೧೦ ಗಂಟೆಗೆ ವಿಜಯದಶಮಿಯ ಪೂಜಾ ಕೈಂಕರ್ಯಗಳು ನೆರವೇರಲಿದ್ದು, ೧೦:೫೫ರಿಂದ ವಿಜಯಯಾತ್ರೆ ನಡೆಸುವರು. ರಾಜಮನೆತನದ ಎಲ್ಲಾ ಪೂಜಾ ವಿಧಿಗಳು ಮುಗಿದ ಬಳಿಕ ವಿಜಯದಶಮಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ಸಿಗಲಿದೆ.