
ನವದೆಹಲಿ,ಫೆ.,೫- ಲೋಕಸಭೆಯಲ್ಲಿ ಇಂದು ಕೂಡ ಪ್ರತಿಪಕ್ಷಗಳು ಭಾರಿ ಗದ್ದಲ, ಕೋಲಾಹಲ ಎಬ್ಬಿಸಿದ ಹಿನ್ನಲೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಯದೆ ದ್ರೌಪದಿಮುರ್ಮು ಅವರ ಭಾಷಣ ಲೋಕಸಭೆಯಲ್ಲಿಂದು ಅಂಗೀಕಾರವಾಯಿತು. ಪ್ರತಿಪಕ್ಷಗಳ ಸದಸ್ಯರು ಪ್ರಧಾನಿಯವರ ಭಾಷಣಕ್ಕೆ ತೀವ್ರ ಅಡ್ಡಿಪಡಿಸಿದ್ದರಿಂದ ಕಡೆಗಳಿಗೆಯಲ್ಲಿ ಮೋದಿ ಭಾಷಣವನ್ನು ರದ್ದುಪಡಿಸಲಾಯಿತು. ಗದ್ದಲ, ಕೋಲಾಹಲದ ನಡುವೆ ಲೋಕಸಭೆಯಲ್ಲಿ ಸಭಾಧ್ಯಕ್ಷ ಓಂ ಬಿರ್ಲಾ ರಾಷ್ಟ್ರಪತಿ ಭಾಷಣವನ್ನು ಅಂಗೀಕರಿಸಲಾಗಿದೆ ಎಂದು ಪ್ರಕಟಿಸಿದರು.
ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ರದ್ದಾದ ಬಗ್ಗೆ ಮತ್ತು ಪದೇ ಪದೇ ಗದ್ದಲ ಉಂಟಾಗಿ ಗೊಂದಲದ ಗೂಡಾಯಿತು. ಇದೇ ವಿಚಾರವಾಗಿ ರಾಜ್ಯಸಭೆಯಲ್ಲೂ ಆಡಳಿತ ಮತ್ತು ಪ್ರತಿ ಪಕ್ಷಗಳ ನಡುವೆ ವಾಕ್ಸಮರ ತಾರಕಕ್ಕೇರಿತು. ಸಂಜೆ ೫ ಗಂಟೆಗೆ ಪ್ರಧಾನಿ ರಾಜ್ಯಸಭೆಯಲ್ಲಿ ಉತ್ತರ ನೀಡುವ ಸಾಧ್ಯತೆ ಇದೆ. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಗದ್ದಲವೆಬ್ಬಿಸಿದರೆ ಪ್ರಧಾನಿ ಭಾಷಣ ರದ್ದಾಗುವ ಸಾಧ್ಯತೆ ಇದೆ.
ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ರಾಹುಲ್ ಗಾಂಧಿ ಅವರನ್ನು ಟೀಕಿಸಿ ಕಾಂಗ್ರೆಸ್ ಪಕ್ಷ “ಮುಗ್ಧ ಮಗುವಿನ ಒತ್ತೆಯಾಳು” ಎಂದು ಆರೋಪಿಸಿದ ನಂತರ ಕಾವೇರಿದ ವಾಗ್ವಾದ ನಡೆಯಿತು. ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯಸಭಾ ನಾಯಕ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಅವರು ಕಲಾಪಗಳನ್ನು ಸ್ಥಗಿತಗೊಳಿಸಿದ್ದಕ್ಕಾಗಿ ವಿರೋಧ ಪಕ್ಷಗಳನ್ನು ದೂಷಿಸಿದರು ಮತ್ತು ಪ್ರಜಾಪ್ರಭುತ್ವ ಕಾರ್ಯಚಟುವಟಿಕೆಗೆ ಅಪಾಯವಿದೆ ಎಂದು ದೂರಿದ್ದಾರೆ.
“ನೀವು ಸುಗಮ ಕಲಾಪ ನಡೆಸಲು ಬಿಡಲಿಲ್ಲ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಆರೋಪವನ್ನು ಬಲವಾಗಿ ಖಂಡಿಸುತ್ತೇನೆ” ಕಾಂಗ್ರೆಸ್ ನಾಯಕತ್ವದ ಆಂತರಿಕ ವ್ಯವಹಾರಗಳನ್ನು ಹೆಚ್ಚು ಪ್ರಜಾಸತ್ತಾತ್ಮಕವಾಗಿ ನಡೆಸುವಂತೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಸರ್ಕಾರ ಚರ್ಚೆಯನ್ನು ಹತ್ತಿಕ್ಕುತ್ತಿದೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ಧ್ವನಿಯನ್ನು ಕೇಳಲು ಬಿಡುತ್ತಿಲ್ಲ ಎಂದು ಆರೋಪಿಸಿದರು.
ಸಂಸತ್ತು ಎರಡೂ ಸದನಗಳನ್ನು ಒಳಗೊಂಡಿದೆ ಎಂದು ಹೇಳಿದ ಅವರು, ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳನ್ನು ಮುಕ್ತವಾಗಿ ಏಕೆ ಎತ್ತಬಾರದು ಎಂದು ಪ್ರಶ್ನಿಸಿದ ಅವರು ನೀವು ಸದನವನ್ನು ಈ ರೀತಿ ಹೇಗೆ ನಡೆಸುತ್ತೀರಿ?” ಎಂದು .ತರಾಟೆಗೆ ತೆಗೆದುಕೊಂಡರು
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಕೂಡ ಇದಕ್ಕೆ ಸಮ್ಮತಿಸಿ, ಸಂಸದರು ಸದನದ ನಿಯಮಗಳು ಮತ್ತು ಸಂಪ್ರದಾಯಗಳನ್ನು ಗೌರವಿಸಬೇಕೆಂದು ಕರೆ ನೀಡಿದರು.
ಎಲ್ಲಾ ಸಂಸದರು ಸದನದ ನಿಯಮಗಳು ಮತ್ತು ಸಂಪ್ರದಾಯಗಳನ್ನು ಪಾಲಿಸಬೇಕೆಂದು ನಾವು ನಿರೀಕ್ಷಿಸುತ್ತೇವೆ. ಸದಸ್ಯರು ಪ್ರಧಾನ ಮಂತ್ರಿಯವರ ಭಾಷಣವನ್ನು ಕೇಳಲು ಕಾಯುತ್ತಿದ್ದಾರೆ. ಕಾಂಗ್ರೆಸ್ ಕೇಳಲು ಬಯಸದಿದ್ದರೆ, ಅದು ಅದರ ಆಯ್ಕೆಯಾಗಿದೆ, ಆದರೆ ಇತರರು ಮಾಡುತ್ತಾರೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರು ಸದನದ ನಿಯಮಗಳನ್ನು ಪಾಲಿಸುತ್ತಿಲ್ಲ ಮತ್ತು ರಾಹುಲ್ ಗಾಂಧಿ ಸಂಸದೀಯ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಕಾಂಗ್ರೆಸ್ ಕಲಾಪಕ್ಕೆ ಅಡ್ಡಿಪಡಿಸಬಾರದು” ಎಂದು ಆರೋಪಿಸಿದ್ದಾರೆ.
ಪ್ರತಿಪಕ್ಷಗಳ ಆಕ್ರೋಶ
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾಷಣ ರದ್ದುಗೊಳಿಸಿದ್ದಕ್ಕೆ ಸಂಸತ್ತಿನಲ್ಲಿ ಪ್ರತಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಈ ವಿಚಾರವಾಗಿ ಭಾರೀ ಗದ್ದಲ, ಕೋಲಾಹಲ ಉಂಟಾಗಿದ್ದರಿಂದ ಸ್ಪೀಕರ್ ಓಂ ಬಿರ್ಲಾ ಕಲಾಪವನ್ನು ಮಧ್ಯಾಹ್ನ ೨ ಗಂಟೆಗೆ ಮುಂದೂಡಿದರು.
ಕೇಂದ್ರ ಸರ್ಕಾರದ ನಡೆಯನ್ನು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಖಂಡಿಸಿದ್ದಾರೆ. ಗದ್ದಲ ನೆಪ ಹೇಳಿ ಪ್ರಧಾನಿಯವರು ಭಾಷಣದಿಂದ ತಪ್ಪಿಸಿಕೊಂಡಿರುವುದು ಸದನದ ಸಂಪ್ರದಾಯಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.
ಲೋಕಸಭೆಯಲ್ಲಿ ಗದ್ದಲ ಉಂಟಾದ ಕಾರಣ ಪ್ರಧಾನಿ ಭಾಷಣವನ್ನು ರದ್ದುಪಡಿಸಲಾಗಿದೆ ಎಂದು ಈ ಸಂಬಂಧ ಸರ್ಕಾರ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಸದನ ನಾಯಕರ ಸಭೆ
ಕಳೆದ ಹಲವು ದಿನಗಳಿಂದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆರೋಪ,ಪ್ರತ್ಯಾರೋಪ,ಗದ್ದಲ ,ವಿರೋದ ಪಕ್ಣದ ಸದಸ್ಯರ ಅಮಾನತ್ತು ಸೇರಿದಂತೆ ವಿವಿಧ ವಿಷಯಗಳ ಕುರಿತು ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ ನೇತೃತ್ವದಲ್ಲಿ ಉಭಯ ಸದಗಳ ವಿರೋಧ ಪಕ್ಷದ ಸದನ ನಾಯಕರ ಸಭೆ ನಡೆಯಿತು.
ಸಂಸತ್ತಿನ ಅಧಿವೇಶನಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ.ಈ ಸಭೆಯಲ್ಲಿ ಇಂಡಿಯಾ ಮೈತ್ರಿಕೂಟದ ನಾಯಕರು ಭಾಗಿಯಾಗಿದ್ದರು
ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ತಿಳಿಸಿದೆ.


























