
ಬೆಂಗಳೂರು,ಆ. 2: ಕೆಆರ್ ನಗರದ ಮನೆಗೆಲಸದ ಮಹಿಳೆ ಮೇಲೆ ಅತ್ಯಾಚಾರ ಅಪಹರಣ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವನ ಪರ್ಯಂತ ಜೈಲು ಶಿಕ್ಷೆ ಹಾಗೂ 10 ಲಕ್ಷ ರೂ ಗಳಿಗೂ ಹೆಚ್ಚು ಮೊತ್ತದ ದಂಡ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ವಿರುದ್ಧದ ಆರೋಪ ಸಂಬಂಧ ವಾದ -ಪ್ರತಿವಾದ ಸುದೀರ್ಘ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜೀವಾವಧಿ ಶಿಕ್ಷೆ ಜೊತೆಗೆ 10 ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ಇದರಲ್ಲಿ ಸಂತ್ರಸ್ತೆಗೆ 7 ಲಕ್ಷ ರೂ.ಗಳ ಪರಿಹಾರವನ್ನು ನೀಡಲು ಸೂಚಿಸಿದೆ. ಇದಕ್ಕೂ ಮುನ್ನ ವೇಳೆ ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ಎಸ್‌ಪಿಪಿ ಬಿ.ಎನ್. ಜಗದೀಶ, ಅಧಿಕಾರಯುತ ಸ್ಥಾನದಲ್ಲಿದ್ದ ಪ್ರಜ್ವಲ್ ರೇವಣ್ಣ ಸಂತ್ರಸ್ತ ಮಹಿಳೆಯನ್ನು ಬೆದರಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಅವಿದ್ಯಾವಂತೆಯಾಗಿದ್ದ ಆಕೆಯ ಮೇಲೆ ಪದೇ ಪದೆ ಅತ್ಯಾಚಾರ ನಡೆದಿದೆ. ಅಪರಾಧಿಯಿಂದ ಸಂತ್ರಸ್ತೆ ಸುಲಭದ ಬಲಿಯಾಗಿದ್ದಳು. ಆಕೆಯ ಒಪ್ಪಿಗೆಯಿಲ್ಲದೇ ಅತ್ಯಾಚಾರದ ವಿಡಿಯೋ ಸಹ ಮಾಡಿಕೊಂಡಿದ್ದರು.
ಬ್ಲಾಕ್‌ಮೇಲ್ ಮಾಡುವ ಉದ್ದೇಶದಿಂದಲೇ, ಅಪರಾಧಿ ಪ್ರಜ್ವಲ್ ರೇವಣ್ಣ ವಿಡಿಯೋ ಮಾಡಿಕೊಂಡಿದ್ದು, ಅವುಗಳನ್ನು ಅಸ್ತ್ರವಾಗಿ ಬಳಸಿಕೊಂಡಿದ್ದಾರೆ. ವಿಡಿಯೋ ಹೊರಬಂದ ನಂತರ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನಿಸಿದ್ದಳು. ವಿಡಿಯೋ ಬಹಿರಂಗವಾದ ಬಳಿಕ ಆಕೆ ಹಾಗೂ ಆಕೆಯ ಕುಟುಂಬದ ಮರ್ಯಾದೆಗೆ ಧಕ್ಕೆಯಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆ ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹಿಂಸೆ ಅನುಭವಿಸಿದ್ದಳು ಎಂದು ನ್ಯಾಯಾಲಯಕ್ಕೆ ವಿವರಿಸಿದರು.
ಸಾಕ್ಷ್ಯಾಧಾರ ನಾಶಕ್ಕೆ ಯತ್ನ:
ಸಾಕ್ಷ್ಯಾಧಾರ ನಾಶಕ್ಕೆ ಪ್ರಯತ್ನಿಸಲಾಗಿದೆ. ಅಪರಾಧಿಯ ಕುಟುಂಬದವರು ಸಂತ್ರಸ್ತೆಯನ್ನೇ ಅಪಹರಿಸಿ, ತಮಗೆ ಬೇಕಾದ ರೀತಿ ಹೇಳಿಕೆ ಪಡೆದುಕೊಂಡಿದ್ದಾರೆ. ಸಂತ್ರಸ್ತೆಗೆ ಬೆದರಿಕೆಯೊಡ್ಡಿ ಸಾಕ್ಷ್ಯನಾಶಕ್ಕೆ ಯತ್ನಿಸಲಾಗಿದೆ. ಇವೆಲ್ಲವೂ ಗಂಭೀರ ಅಪರಾಧವಾಗಿದೆ. ಸಾಲದಕ್ಕೆ ಕೋರ್ಟ್ ವಿಚಾರಣೆಯನ್ನೂ ವಿಳಂಬ ಮಾಡುವ ಯತ್ನವೂ ನಡೆದಿತ್ತು.
ಅಪರಾಧಿಯ ಮೇಲೆ ಮತ್ತಷ್ಟು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಬೇರೆ ಬೇರೆ ಮಹಿಳೆಯರ ಮೇಲಿನ ಅತ್ಯಾಚಾರದ ವಿಡಿಯೋಗಳಿವೆ. ಹಣ ಅಧಿಕಾರ ಇರುವ ಇವರಿಗೆ ಕಡಿಮೆ ಶಿಕ್ಷೆಯಾಗಬಾರದು. ಅಪರಾಧಿಗೆ ಯಾವುದೇ ರೀತಿ ಕನಿಕರ ತೋರಬಾರದು. ಅಪರಾಧಿಯ ವಕ್ರ ಮನಸ್ಥಿತಿ ಗಮನದಲ್ಲಿಟ್ಟುಕೊಳ್ಳಬೇಕು. ಗರಿಷ್ಠ ಪ್ರಮಾಣದ ಶಿಕ್ಷೆಯನ್ನೇ ಅಪರಾಧಿ ಪ್ರಜ್ವಲ್ ರೇವಣ್ಣಗೆ ನೀಡಬೇಕು. ಜೀವನಪರ್ಯಂತ ಸೆರೆವಾಸದ ಶಿಕ್ಷೆ ವಿಧಿಸಬೇಕು ಎಂದು ಎಸ್‌ಪಿಪಿ ಬಿ. ಎನ್. ಜಗದೀಶ್ ಮನವಿ ಮಾಡಿದರು.
ಸಂಸದರಾಗಿ ಆಯ್ಕೆ:
ರಾಜಕಾರಣಿಯಾಗಿ ಕಿರಿಯ ವಯಸ್ಸಿನಲ್ಲೇ ಪ್ರಜ್ವಲ್ ರೇವಣ್ಣ ಸಂಸದರಾಗಿ ಆಯ್ಕೆಯಾಗಿದ್ದರು. ಜನ ಇವರನ್ನು ಆಯ್ಕೆ ಮಾಡಿದ್ದು ಏಕೆ? ಇವರು ಮಾಡಿದ್ದೇನು? ಸಂಸದರೇ ಇಂಥ ಹೀನ ಕೃತ್ಯವೆಸಗಿದಾಗ ಗರಿಷ್ಠ ಪ್ರಮಾಣದ ಶಿಕ್ಷೆಯನ್ನೇ ವಿಧಿಸಬೇಕು. ಪ್ರಜ್ವಲ್ ಬಡವನಲ್ಲ, ಕೋಟ್ಯಾಧಿಪತಿಯಾಗಿದ್ದಾರೆ. ಆದ್ದರಿಂದ, ಸೆಕ್ಷನ್ 357ರ ಅಡಿಯಲ್ಲಿ ಹೆಚ್ಚಿನ ಮೊತ್ತದ ದಂಡ ವಿಧಿಸಿ, ಅದರ ಬಹುಭಾಗವನ್ನು ಸಂತ್ರಸ್ತೆಗೆ ಪರಿಹಾರವಾಗಿ ನೀಡಬೇಕು. ವಿಡಿಯೋ ಬಹಿರಂಗಗೊಂಡ ಬಳಿಕ ಆಕೆ ಹೊರಗೆ ದುಡಿಯಲು ಹೋಗದಂತಾಗಿದೆ. ಆದ್ದರಿಂದ, ಗರಿಷ್ಠ ಪ್ರಮಾಣದ ಶಿಕ್ಷೆ ನೀಡಬೇಕು ಎಂದು ಪ್ರಾಸಿಕ್ಯೂಷನ್ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿದರು.
ಪ್ರಜ್ವಲ್ ಜನಸೇವೆ:
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಜ್ವಲ್ ಪರ ವಾದ ಮಂಡಿಸಿದ ವಕೀಲರಾದ ನಳೀನಾ ಮಾಯೇಗೌಡ, ಯುವ ಸಂಸದನಾಗಿ ಪ್ರಜ್ವಲ್ ಜನಸೇವೆ ಮಾಡಿದ್ದಾರೆ. ಹಣ ಮಾಡಬೇಕೆಂಬ ಉದ್ದೇಶದಿಂದ ರಾಜಕಾರಣಕ್ಕೆ ಬಂದವರಲ್ಲ. ಆರೋಪಿಯ ರಾಜಕೀಯ ಸ್ಥಾನಮಾನ ಶಿಕ್ಷೆಗೆ ಕಾರಣವಾಗಬಾರದು. ಇಷ್ಟು ದಿನ ಅವರು ಸಂಪಾದಿಸಿದ್ದ ಒಳ್ಳೆಯ ಹೆಸರು ಏನಾಗಬೇಕು. ಸಂತ್ರಸ್ತೆ ಸಮಾಜದಿಂದ ತಿರಸ್ಕೃತಗೊಂಡವರಲ್ಲ. ಸಂಸಾರದೊಂದಿಗೆ ಎಂದಿನಂತೆ ಜೀವನ ಸಾಗಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿಯೇ ವಿಡಿಯೋ ಹರಿಬಿಡಲಾಗಿದ್ದು, ಪ್ರಜ್ವಲ್ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದೆ. ಪ್ರಜ್ವಲ್ ಯುವಕನಾಗಿದ್ದು ಆತನ ಭವಿಷ್ಯವನ್ನೂ ಗಮನಿಸಬೇಕು. ಈಗಾಗಲೇ ಮಾಧ್ಯಮಗಳಲ್ಲಿ ತೇಜೋವಧೆ ಆಗಿದೆ. ವಯಸ್ಸಾದ ತಂದೆ-ತಾಯಿ ಇದ್ದಾರೆ. ಅವರ ತಾತ ಮಾಜಿ ಪ್ರಧಾನಿಯಾಗಿದ್ದಾರೆ. ನ್ಯಾಯಾಲಯ ವಿಧಿಸುವ ಶಿಕ್ಷೆಯಿಂದ ಪ್ರಜ್ವಲ್ ಅವರ ಭವಿಷ್ಯಕ್ಕೆ ಹಾನಿಯಾಗಬಾರದು ಎಂದು ಮನವಿ ಮಾಡಿದರು.
ಕಣ್ಣೀರಿಡುತ್ತಲೇ ಪ್ರತಿಕ್ರಿಯೆ:
ವಾದ ಆಲಿಸಿದ ನ್ಯಾಯಾಧೀಶರು, ಪ್ರಜ್ವಲ್ ಅವರನ್ನು ಕುರಿತು, ನೀವೇನಾದರೂ ಹೇಳಲು ಬಯಸುವಿರೇ ಎಂದು ಪ್ರಶ್ನಿಸಿದರು. ಅದಕ್ಕೆ ಕಣ್ಣೀರಿಡುತ್ತಲೇ ಪ್ರತಿಕ್ರಿಯಿಸಿದ ಪ್ರಜ್ವಲ್, ನಾನು ಹಲವು ಮಹಿಳೆಯರೊಂದಿಗೆ ಈ ಕೃತ್ಯವೆಸಗಿದ್ದೇನೆ ಎಂದು ಆರೋಪಿಸಲಾಗುತ್ತಿದೆ. ಸಂಸದನಾದಾಗ ಯಾರೂ ಇಂಥ ಆರೋಪ ಮಾಡಿಲ್ಲ. ರೇಪ್ ಮಾಡಿದ್ದೇನೆಂದು ಯಾರೂ ಹೇಳಿಲ್ಲ. ಆರು ತಿಂಗಳಿಂದ ತಂದೆ-ತಾಯಿಯನ್ನು ನೋಡಿಲ್ಲ. ನಾನು ಮಾಡಿದ ಒಂದೇ ತಪ್ಪೇನೆಂದರೆ ರಾಜಕೀಯದಲ್ಲಿ ಬೇಗ ಬೆಳೆದದ್ದು. ಈ ವಿಚಾರದಲ್ಲಿ ಮಾಧ್ಯಮಗಳನ್ನೂ ದೂರುವುದಿಲ್ಲ. ಕೋರ್ಟ್ ಆದೇಶಕ್ಕೆ ತಲೆ ಬಾಗುತ್ತೇನೆ ಎಂದು ನುಡಿದರು.
ಶಿಕ್ಷೆಯ ವಿವರ
*ಐಪಿಸಿ ಸೆಕ್ಷನ್ 376 (2)(ಕೆ)ರಡಿ ಜೀವಾವಧಿ ಶಿಕ್ಷೆ ಹಾಗೂ 5 ಲಕ್ಷ ರೂ. ದಂಡ
*376(2)(ಎನ್ ) ಅಡಿ ಪದೇಪದೆ ಅತ್ಯಾಚಾರಕ್ಕೆ ಜೀವನಪರ್ಯಂತ ಜೈಲು, 5 ಲಕ್ಷ ರೂ. ದಂಡ
*ಐಪಿಸಿ ಸೆಕ್ಷನ್ 354(ಎ) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
*ಐಪಿಸಿ ಸೆಕ್ಷನ್ 354 (ಬಿ) ಅಡಿ 7 ವರ್ಷ ಸೆರೆವಾಸ, 50,000 ರೂಪಾಯಿ ದಂಡ
*ಐಪಿಸಿ ಸೆಕ್ಷನ್ 354 (ಸಿ) ಅಡಿ 3 ವರ್ಷ ಸೆರೆವಾಸ, 25,000 ರೂಪಾಯಿ ದಂಡ
*ಸೆಕ್ಷನ್ 506 ಅಡಿ 2 ವರ್ಷ ಸೆರೆವಾಸ 10,000 ರೂ. ದಂಡ
*ಸೆಕ್ಷನ್ 201 ಅಡಿ 3 ವರ್ಷ ಸೆರೆವಾಸ 25,000 ರೂ. ದಂಡ
*ಐಟಿ ಕಾಯ್ದೆ ಸೆ.66(ಇ) ಅಡಿ 3 ವರ್ಷ 25,000 ರೂ. ದಂಡ.
*ಪ್ರಜ್ವಲ್ ರೇವಣ್ಣಗೆ ಇಂದಿನಿಂದಲೇ ಶಿಕ್ಷೆ ಆರಂಭ, ಇಲ್ಲಿಯವರೆಗಿನ ಜೈಲುವಾಸ ಮೈನಸ್ ಆಗುವುದಿಲ್ಲ.
*ಏಕೆಂದರೆ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನವಾಗಿರಲಿಲ್ಲ, ಕೇವಲ ಬಾಡಿ ವಾರಂಟ್ ಮೇಲೆ ಪ್ರಜ್ವಲ್‌ನನ್ನು ವಶಕ್ಕೆ ಪಡೆಯಲಾಗಿತ್ತು