ಲಂಡನ್,ಅ.೧-ಓವಲ್‌ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಮೊದಲ ದಿನದಂದು ಫೀಲ್ಡಿಂಗ್ ಮಾಡುವಾಗ ಇಂಗ್ಲೆಂಡ್ ವೇಗಿ ಕ್ರಿಸ್ ವೋಕ್ಸ್ ಗಾಯಗೊಂಡಿದ್ದಾರೆ ಅವರು ಭುಜದ ಗಾಯದಿಂದ ಮೈದಾನದಿಂದ ಹೊರ ನಡೆದಿದ್ದಾರೆ.
ಮೊದಲ ದಿನದ ಆಟದ ಕೊನೆಯವರೆಗೂ ಅವರು ಮೈದಾನಕ್ಕೆ ಹಿಂತಿರುಗಲಿಲ್ಲ, ಇದು ಇಂಗ್ಲೆಂಡ್ ತಂಡದ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಈಗ ಸಹ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಕ್ರಿಸ್ ವೋಕ್ಸ್ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ.ಕ್ರಿಸ್ ವೋಕ್ಸ್ ಗಾಯ ಇಂಗ್ಲೆಂಡ್ ತಂಡದ ಒತ್ತಡ ಹೆಚ್ಚಿಸಿದೆ.
ಈ ಘಟನೆ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದ ಮೊದಲ ದಿನ ನಡೆದಿದೆ. ೫೭ ನೇ ಓವರ್‌ನ ಐದನೇ ಎಸೆತದಲ್ಲಿ, ಕರುಣ್ ನಾಯರ್ ಜೇಮೀ ಓವರ್ಟನ್ ಅವರ ಚೆಂಡನ್ನು ಲಾಂಗ್ ಆಫ್ ಕಡೆಗೆ ಡ್ರೈವ್ ಮಾಡಿದ್ದಾರೆ.
ಆ ಸಮಯದಲ್ಲಿ ವೋಕ್ಸ್ ವೇಗದಲ್ಲಿ ಓಡಿ ಚೆಂಡನ್ನು ಬೌಂಡರಿಗೆ ಹೋಗದಂತೆ ತಡೆದು ನಾಯರ್ ಮೂರು ರನ್ ಗಳಿಸುವುದಕ್ಕೆ ಸೀಮಿತಗೊಳಿಸಿದ್ದಾರೆ. ಆದರೆ, ಚೆಂಡನ್ನು ತಡೆ ಹಿಡಿಯುವ ರಭಸದಲ್ಲಿ ವೋಕ್ಸ್ ನೆಲಕ್ಕೆ ಬಿದ್ದು ತಕ್ಷಣವೇ ತನ್ನ ಭುಜವನ್ನು ಹಿಡಿದುಕೊಂಡು ಮೈದಾನದಿಂದ ಹೊರನಡೆದಿದ್ದಾರೆ.
ಅವರ ಸ್ಥಾನದಲ್ಲಿ ಬದಲಿ ಫೀಲ್ಡರ್ ಆಗಿ ಲಿಯಾಮ್ ಡಾಸನ್ ಅವರನ್ನು ಕರೆತರಲಾಗಿದೆ.
ಮೊದಲ ದಿನದಾಟದಲ್ಲಿ ಕ್ರಿಸ್ ವೋಕ್ಸ್ ಒಟ್ಟು ೧೪ ಓವರ್‌ಗಳನ್ನು ಬೌಲಿಂಗ್ ಮಾಡಿದ್ದಾರೆ .ಪತ್ರಿಕಾಗೋಷ್ಠಿಯಲ್ಲಿ ಅವರ ಗಾಯದ ಕುರಿತು ಮಾಹಿತಿ ನೀಡುತ್ತಾ, ವೇಗದ ಬೌಲರ್ ಗಸ್ ಅಟ್ಕಿನ್ಸನ್,ನನಗೆ ಹೆಚ್ಚು ತಿಳಿದಿಲ್ಲ ಆದರೆ ಗಾಯ ಗಂಭೀರವಾಗಿ ಕಾಣುತ್ತದೆ. ಇದು ಸರಣಿಯ ಕೊನೆಯ ಪಂದ್ಯವಾಗಿದ್ದು, ಅಂತಹ ಸಮಯದಲ್ಲಿ ಆಟಗಾರನೊಬ್ಬ ಗಾಯಗೊಳ್ಳುವುದು ದುರದೃಷ್ಟಕರ. ಅದು ಗಂಭೀರವಾಗಿಲ್ಲ ಮತ್ತು ಅವರು ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ನಾವೆಲ್ಲರೂ ಆಶಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ದಿನದಾಟದಲ್ಲಿ ವೋಕ್ಸ್ ೧೪ ಓವರ್‌ಗಳಲ್ಲಿ ೪೬ ರನ್‌ಗಳಿಗೆ ೧ ವಿಕೆಟ್ ಪಡೆದಿದ್ದಾರೆ ಅದು ಕೆಎಲ್ ರಾಹುಲ್ ಅವರ ವಿಕೆಟ್ ಆಗಿತ್ತು. ಈಗ ಅವರು ಟೆಸ್ಟ್‌ನ ಉಳಿದ ದಿನಗಳಿಗೆ ಫಿಟ್ ಆಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ.
























