ಅಂಚೆ ಸೇವೆ ಜನರ ಜೀವನದ ಅವಿಭಾಜ್ಯ ಅಂಗ:ಸಂತೋಷ ಬಂಡೆ

ಇಂಡಿ:ಅ.10: ಇಂಟರ್ನೆಟ್ -ದೂರಸಂಪರ್ಕದ ಆವಿಷ್ಕಾರಕ್ಕಿಂತ ಮುಂಚೆ, ಜನರ ಸಂವಹನಕ್ಕಾಗಿ ಅಂಚೆ ಸೇವೆ ಮುಖ್ಯವಾಗಿತ್ತು. ಶತಮಾನಗಳಿಂದ ದಕ್ಷ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ವ್ಯವಸ್ಥೆಯು ಪ್ರಪಂಚದಾದ್ಯಂತ ಮಾಹಿತಿಯನ್ನು ರವಾನಿಸುವ ಅತ್ಯಂತ ವಿಶ್ವಾಸಾರ್ಹ ಸಾಧನವಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಗುರುವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಅರಿವು ಕೇಂದ್ರದಲ್ಲಿ ಹಮ್ಮಿಕೊಂಡ ‘ವಿಶ್ವ ಅಂಚೆ ದಿನ’ವನ್ನು ಉದ್ಧೇಶಿಸಿ ಅವರು ಮಾತನಾಡಿದರು.
ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದ ಅಂಚೆ ಇಲಾಖೆ ಈಗ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತಾ, ಹಣದ ವರ್ಗಾವಣೆ, ವಿಮಾ, ಉಳಿತಾಯ ಯೋಜನೆಗಳ ಮೂಲಕ ಜನರ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣರ ಬದುಕಿಗೆ ಆಸರೆಯಾಗಿದೆ ಎಂದು ಹೇಳಿದರು.
ಶಿಕ್ಷಕ ರವಿ ಗಿಣ್ಣಿ ಮಾತನಾಡಿ, ಜನರ ದೈನಂದಿನ ಜೀವನದಲ್ಲಿ ಅಂಚೆ ಸೇವೆಗಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸಲು, ಜಾಗತಿಕ, ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಂಚೆಗಳ ಕೊಡುಗೆಯನ್ನು ಗುರ್ತಿಸಲು ಪ್ರತಿವರ್ಷ ಅಕ್ಟೋಬರ್ 9 ರಂದು ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಶಾಖಾ ಅಂಚೆಪಾಲಕ ಸೋಮನಗೌಡ ಬಿರಾದಾರ
ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಅಂಚೆ ಕಚೇರಿಗಳು ಬರೀ ಪತ್ರ ವ್ಯವಹಾರ, ತಂತಿ ಸಂದೇಶಗಳಿಗಷ್ಟೆ? ಮೀಸಲಾಗದೇ ಜನತೆಗೆ ಒಂದೇ ಸೂರಿನಡಿ ಎಲ್ಲ ಬ್ಯಾಂಕಿಂಗ್ ಸೌಲಭ್ಯ ಕಲ್ಪಿಸುವ ಕಚೇರಿಗಳಾಗುತ್ತಿವೆ. ಎಲ್ಲರೂ ಅಂಚೆಸೇವೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಯುವ ಧುರೀಣ ಪರಶುರಾಮ ಹೊಸಮನಿ ಜ್ಯೋತಿ ಬೆಳಗಿಸಿದರು. ಗ್ರಾಮದ ಶ್ರೀಶೈಲ ಗುನ್ನಾಪುರ, ಶಿಕ್ಷಕ ಎಸ್ ಆರ್ ಚಾಳೇಕರ, ಶಾಂತಪ್ಪ ಕಪ್ಪಿ, ಅಕ್ಬರ ಕೋರಬು, ಮಲ್ಲಮ್ಮ ಚವ್ಹಾಣ, ಸಂಗೀತಾ ಮಠಪತಿ, ಗ್ರಂಥಪಾಲಕ ಸಚೀನ ಹೊಸೂರು, ನಿಂಗಪ್ಪ ಡಂಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಖಾ ಅಂಚೆ ಪಾಲಕ ಸೋಮನಗೌಡ ಬಿರಾದಾರ, ಶಾಖಾ ಅಂಚೆ ಉಪಪಾಲಕ ಯಶವಂತ ಬಿರಾದಾರ ಅವರನ್ನು ಸನ್ಮಾನಿಸಲಾಯಿತು.