ಪಾಲಿಸಿದಾರರ ಹಣ ತಡೆ:ಗ್ರಾಹಕರ ಆಯೋಗ ಮಹತ್ವದ ತೀರ್ಪು

ಬೀದರ, ಫೆ.26: ಬೀದರ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗವು ಕರ್ನಾಟಕ ಸರ್ಕಾರದ ಅಧಿನದಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿಮಾ ಇಲಾಖೆ ವಿರುದ್ಧ ಮಹತ್ವದ ತೀರ್ಪು ನೀಡಿದೆ.
ಆಡಳಿತಾತ್ಮಕ ಲೋಪ ಮತ್ತು ತಾಂತ್ರಿಕ ದೋಷದ ನೆಪದಲ್ಲಿ ಪಾಲಿಸಿದಾರರ ಹಣ ತಡೆಹಿಡಿದ ಕ್ರಮವನ್ನು ಆಯೋಗವು ಕಾನೂನುಬಾಹಿರವೆಂದು ಘೋಷಿಸಿದೆ.
ಸರ್ಕಾರಿ ನೌಕರರಾದ ಸಿದ್ದಮ್ಮಾ ಓಂಪ್ರಕಾಶ ಹಂಗರಗಿ ಅವರು ಕೆ.ಜಿ.ಐ.ಡಿ ಕಡ್ಡಾಯ ವಿಮಾ ಯೋಜನೆಯಡಿ 07 ಪಾಲಿಸಿಗಳನ್ನು ಹೊಂದಿದ್ದು, 2008, 2012 ಮತ್ತು 2015ರಲ್ಲಿ ಮೂರು ಸಾಲಗಳನ್ನು ಪಡೆದಿದ್ದರು. 01-02-2025ರಂದು 55 ವರ್ಷ ಪೂರೈಸಿ ಪಾಲಿಸಿಗಳ ಮುಕ್ತಾಯದ ನಂತರ ಪಾವತಿಯಾಗಬೇಕಿದ್ದ ರೂ.10,99,260/-ಮೊತ್ತದಿಂದ ರೂ.21,016/- ಅನ್ನು ಬಾಕಿ ಸಾಲ ಹಾಗೂ ಬಡ್ಡಿ ಹೆಸರಿನಲ್ಲಿ ಪೂರ್ವ ಸೂಚನೆ ನೀಡದೆ ಕಡಿತಗೊಳಿಸಲಾಗಿತ್ತು. ಈ ಕ್ರಮದ ವಿರುದ್ದ ಅವರು ದೂರು ದಾಖಲಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗವು, ಗಣಕೀಕೃತ ವ್ಯವಸ್ಥೆಯ ತಾಂತ್ರಿಕ ದೋಷ ಅಥವಾ ಆಡಳಿತಾತ್ಮಕ ಒತ್ತಡ ಎಂಬ ಕಾರಣಗಳನ್ನು ಸಮರ್ಥಿಸಲು ಕೆ.ಜಿ.ಐ.ಡಿ ಯಾವುದೇ ಸಮರ್ಪಕ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಗಮನಿಸಿದೆ. ತಾಂತ್ರಿಕ ದೋಷ ಸಾಬೀತುಪಡಿಸುವ ಹೊಣೆ ವಿಮಾ ಇಲಾಖೆಯ ಮೇಲಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ. ಪೂರ್ವ ಸೂಚನೆ ಇಲ್ಲದೆ ಕಡಿತ ಮಾಡಿರುವುದು ಮತ್ತು ಕೈಂ ಸೆಟಲ್ಲೆಂಟ್ ವಿಳಂಬ ಮಾಡಿರುವುದು ಸೇವಾ ನ್ಯೂನತೆ ಹಾಗೂ ನಿರ್ಲಕ್ಷ್ಯವೆಂದು ಅಭಿಪ್ರಾಯಪಟ್ಟಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಕಲಂ 35ರಡಿ ದಾಖಲಾದ ಈ ಪ್ರಕರಣದಲ್ಲಿ ಆಯೋಗವು ಕಡಿತಗೊಂಡ ರೂ.21,016/- ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸಬೇಕು. ವಿಳಂಬಿತ ಮುಕ್ತಾಯ ಮೊತ್ತದ ಮೇಲೆ ಮಾನದಂಡಕ್ಕಿಂತ 2% ಹೆಚ್ಚುವರಿ ಬಡ್ಡಿ ಪಾವತಿಸಬೇಕು.
ಸಂಚಿತ ಬೋನಸ್ ಹಾಗೂ ಅದರ ಬಡ್ಡಿ ನೀಡಬೇಕು. ಮಾನಸಿಕ ಕಿರುಕುಳಕ್ಕಾಗಿ ರೂ.10,000/-ಪರಿಹಾರ ಹಾಗೂ ರೂ.5,000/- ಪ್ರಕರಣ ವೆಚ್ಚ ಪಾವತಿಸಬೇಕು ಎಂದು ಬೀದರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ಪ್ರಭಾರಿ ಅಧ್ಯಕ್ಷರಾದ ತ್ರಿಯಂಬಕೇಶ್ವರ ಹಾಗೂ ಮಹಿಳಾ ಸದಸ್ಯರಾದ ಕುಮಾರಿ ಕವಿತಾ ಹುಶಾರೆ ಇವರು ದೂರಿನ ವಿಚಾರಣೆ ನಡೆಸಿ, ಗೌರವಾನ್ವಿತ ಆಯೋಗವು ಕೆ.ಜಿ.ಐ.ಡಿ ಸಂಸ್ಥೆಗೆ ಸೂಚನೆ ನೀಡಿದೆ.
ಈ ತೀರ್ಪು ಪಾಲಿಸಿದಾರರ ಹಕ್ಕುಗಳ ರಕ್ಷಣೆ ಮತ್ತು ವಿಮಾ ಇಲಾಖೆಗಳ ಜವಾಬ್ದಾರಿತ್ವದ ಬಗ್ಗೆ ಮಹತ್ವದ ಮಾರ್ಗದರ್ಶನ ನೀಡುವಂತಾಗಿದೆ