
ಶಹಾಪುರ,ಅ.19-ಶಹಾಪುರ ತಾಲೂಕಿನ ಕಸಾಪದ ಮೂಲಕ ನಡೆದ ಕಾವ್ಯ ಕಮ್ಮಟದಲ್ಲಿ ನಾಡಿನ ಹಿರಿಯ ಲೇಖಕ, ಖ್ಯಾತ ಕವಿ ಡಾ.ಮೂಡ್ನಾಕೂಡು ಚಿನ್ನಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿ ” ಕಾವ್ಯ ಕರ್ಮಕ್ಕೆ ಧರ್ಮಬೇಕಿಲ್ಲ, ಪ್ರೀತಿ ಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಕಾವ್ಯ ಪ್ರೀತಿಯ “ಲೇಖಕ ಸಿದ್ಧರಾಮ ಹೊನ್ಕಲ್ ಅವರ ಹೊಸ ಕೃತಿಗಳಾದ ಅವಲೋಕನ (ವಿಮರ್ಶೆ), ಹೊನ್ನ ಹೃದಯದ ಹಾಡು ( ಕಾವ್ಯ), ಹೊನ್ನ ಸಿರಿಯ ಹೊನ್ನುಡಿಗಳು (ನುಡಿಗಳ ಸಂಕಲನ), ಇದು ಪ್ರೇಮ ಮಹಲ್ ( ಗಜಲ್ ಸಂಕಲನ) ಹಾಗೂ ಗಜಲ್ ಧಾರೆ (ಸಂಪಾದನಾ ಗಜಲ್ ಸಂಕಲನ) ಹೀಗೆ ಐದು ಕೃತಿಗಳನ್ನು ಲೋಕಾರ್ಪಣೆ ಮಾಡಿದರು. ಈ ಐದು ಕೃತಿಗಳು ಹೊನ್ಕಲ್ ಅವರ ವೈವಿಧ್ಯಮಯ ಸಾಹಿತ್ಯ ಸೇವೆಯ ಪ್ರತಿ ರೂಪಕಗಳಾಗಿವೆ. ಇಂತಹ ನಾಡಿನ ಬಹು ಮುಖ್ಯ ಲೇಖಕರಾದ ಹೊನ್ಕಲ್ ಅವರ ಈ ಕೃತಿಗಳ ಲೋಕಾರ್ಪಣೆ ಮಾಡುವ ಸಂತಸ ನನ್ನದಾಗಿದೆ ಎಂದರು.
ಈ ವೇದಿಕೆಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಡಾ.ರವೀಂದ್ರ ಹೊಸಮನಿ, ಲೇಖಕ ಕವಿ ಡಾ.ಅಪ್ಪಗೆರೆ ಸೋಮಶೇಖರ, ಡಿಡಿಯೂ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ದೇವಿಂದ್ರಪ್ಪ ಮೇಟಿಯವರು, ವೈಚಾರಿಕ ಲೇಖಕ ವಿಶ್ವಾರಾಧ್ಯ ಸತ್ಯಂಪೇಟೆಯವರು, ಕೇಂದ್ರಿಯ ವಿವಿಯ ಡಿ.ಟಿ.ರಾಜಣ್ಣ, ಲೇಖಕಿ ಅನುಸೂಯಾ ಕಾಂಬಳೆ ಹಾಗೂ ಕಸಾಪ ಗೌರವ ಕಾರ್ಯದರ್ಶಿ ಡಾ.ರಾಘವೇಂದ್ರ ಹಾರನಗೇರಾ, ಸುರೇಶ ಅರುಣಿಯವರು, ವಲಯ ಕಸಾಪ ಅಧ್ಯಕ್ಷ ಶರಣಬಸು ಬಿರಾದಾರ ಮುಂತಾದ ಗಣ್ಯರು ಉಪಸ್ಥಿತರಿದ್ದರು.