
- ಮಹೇಶ ಡಿ.ತಳಕೇರಿ
ಕಲಬುರಗಿ,ಆ.20-ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮುಗಿಸಿ ಯಾವುದಾದರೂ ಒಂದು ಸರಕಾರಿ ನೌಕರಿ ಪಡೆದು ತಮ್ಮ ತಂದೆ, ತಾಯಿಯ ಕನಸು ನನಸು ಮಾಡಬೇಕೆಂದು ಬಹಳ ಶ್ರದ್ಧೆಯಿಂದ ಓದುತ್ತಾರೆ. ಆದರೆ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಂದು ನೌಕರಿಗೆ ನೇಮಕ ಆಗುವುದು ದೊಡ್ಡ ಸವಾಲಾಗಿದೆ. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದರೆ, ಯಾವುದು ಅಸಾಧ್ಯವಲ್ಲ ಎಂದು ಸಾಬೀತು ಮಾಡಿರುವ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪೂರ ಗ್ರಾಮದ ಮುಖಂಡರಾದ ನಾಗೇಶ ಹೊಸಮನಿ ಅವರ ಪುತ್ರಿ ಪಲ್ಲವಿ ಬರೋಬ್ಬರಿ 9 ವಿವಿಧ ಇಲಾಖೆಯಲ್ಲಿ ಸರ್ಕಾರಿ ನೌಕರಿ ಪಡೆಯುವುದರ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಮೂರು ವರ್ಷಗಳಲ್ಲಿ “ಪಲ್ಲವಿ” ಆಯ್ಕೆಯಾದ ಹುದ್ದೆಗಳು
………..
2023ರಲ್ಲಿ ಕೆಪಿಟಿಸಿಎಲ್ ದ್ವಿತೀಯ ದರ್ಜೆ ಸಹಾಯಕ, ಡಿಸಿಸಿ ಬ್ಯಾಂಕ್ ಪ್ರಥಮ ದರ್ಜೆ ಸಹಾಯಕ, ಲೇಬರ್ ಇನ್ಸ್‍ಪೆಕ್ಟರ್, ಡಾಟಾ ಎಂಟ್ರಿ ಸ್ಟಾಟಿಸ್ಟಿಕ್ಸ್ ಮತ್ತು ಆರ್ಥಿಕ ಇಲಾಖೆ, ಕೆಆರ್ಡಿಎಲ್ ಪ್ರಥಮ ದರ್ಜೆ ಸಹಾಯಕ, ಫಿಲ್ಡ್ ಇನ್ಸ್‍ಪೆಕ್ಟರ್ ಲೇಬರ್ ಡಿಪಾರ್ಟ್‍ಮೆಂಟ್, ಪ್ರಥಮ ದರ್ಜೆ ಸಹಾಯಕ ಆಹಾರ ಮತ್ತು ಸಿವಿಲ್ ಸಪ್ಲೈ ಇಲಾಖೆ, 2024 ರಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಇನ್ಸ್‍ಪೆಕ್ಟರ್ ಆಗಿ ನೇಮಕ ಹಾಗೂ ಪ್ರಸ್ತುತ (2025) ಸಾಲಿನಲ್ಲಿ ಪಂಚಾಯತ ಡೆವೆಲಪಮೆಂಟ್ ಅಧಿಕಾರಿ (ಪಿಡಿಒ) ಹುದ್ದೆಗೆ ಆಯ್ಕೆಯಾಗುವ ಮೂಲಕ ಸತತ ಪ್ರಯತ್ನ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಪಲ್ಲವಿ ಸಾಕ್ಷಿಯಾಗಿದ್ದಾರೆ.
ನಮ್ಮ ಮಗಳು ಎರಡ್ಮೂರು ವರ್ಷದಲ್ಲಿ ಸರಿಸುಮಾರು 9 ವಿವಿಧ ಇಲಾಖೆಯ ಅಡಿಯಲ್ಲಿ ಆಯ್ಕೆಯಾಗಿರುವುದು ಬಹಳಷ್ಟು ಖುಷಿಯಾಗಿದೆ. ವಿದ್ಯಾರ್ಥಿ ದೆಸೆಯಿಂದ ಅವಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಶಿಕ್ಷಣ ಕೊಡಿಸಿದ್ದೇನೆ. ನಾನು ಕಷ್ಟ ಪಟ್ಟು ಓದಿಸಿದಕ್ಕೂ ನನ್ನ ಮಗಳು ಶ್ರದ್ಧೆಯಿಂದ ಓದಿ ಇಷ್ಟು ಸರಕಾರಿ ನೌಕರಿಗೆ ಆಯ್ಕೆಯಾಗಿದ್ದಾಳೆ. ಪ್ರಸ್ತುತ ಕೆಆರ್ಡಿಎಲ್ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾಗಿ ಕಲಬುರಗಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ. ವಾಣಿಜ್ಯ ತೆರಿಗೆ ಇಲಾಖೆಯ ಇನ್ಸಪೆಕ್ಟರ್ ಆಗಿಯಾಗಿ ಸೇವೆ ಸಲ್ಲಿಸಲು ಇಚ್ಛಿಸಿದ್ದಾಳೆ.
-ನಾಗೇಶ ಹೊಸಮನಿ, ಮುಖಂಡರು, ದೇವಲ ಗಾಣಗಾಪೂರ.
ನಮ್ಮ ಆತ್ಮೀಯರಾದ ನಾಗೇಶ ಹೊಸಮನಿ ಅವರು ಬಹಳ ಕಷ್ಟಪಟ್ಟು ತಮ್ಮ ಮಕ್ಕಳಿಗೆ ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಕೊಡಿಸಿದ್ದಾರೆ. ಅದರ ಫಲವಾಗಿ ಪುತ್ರಿ ಕು.ಪಲ್ಲವಿ ಎರಡುವರೆ ವರ್ಷದಲ್ಲಿ ವಿವಿಧ ಇಲಾಖೆಯ ಉನ್ನತ ಸ್ಥಾನದ ನೌಕರಿ ಗಿಟ್ಟಿಸಿಕೊಂಡಿದ್ದು ತುಂಬಾ ಹೆಮ್ಮೆಯ ವಿಷಯ. ಬುದ್ದ, ಬಸವ ಹಾಗೂ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶೀರ್ವಾದ ಮಗಳ ಮೇಲೆ ಇರಲಿ. ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಮಟ್ಟದ ಹುದ್ದೇಗೇರಲೆಂದು ಮನದುಂಬಿ ಶುಭ ಹಾರೈಸುವೆ.
- ಭಗವಂತ ವಗ್ಗೆ
ಅಧ್ಯಕ್ಷರು, ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ,ಅಫಜಲಪುರ.
ಪ್ರಾಥಮಿಕ ಶಿಕ್ಷಣ ದೆಸೆಯಿಂದಲೇ ಶ್ರದ್ಧೆ, ಭಕ್ತಿಯಿಂದ ವಿದ್ಯಾಭ್ಯಾಸ ಮಾಡಿ, ಪ್ರೌಢ ಮತ್ತು ಕಾಲೇಜು ಶಿಕ್ಷಣ ಮತ್ತಷ್ಟು ಹೆಚ್ಚಿನ ಸಮಯ ನೀಡಿ ವಿದ್ಯಾಭ್ಯಾಸ ಮಾಡಿರುವ ಫಲ ಇವತ್ತು ಇಷ್ಟೊಂದು ನೌಕರಿ ಪಡೆಯಲು ಸಾಧ್ಯವಾಗಿದೆ. ನಮ್ಮ ತಂದೆ, ತಾಯಿ ನನಗೆ ಯಾವುದೇ ಕುಂದು ಕೊರತೆ ಇಲ್ಲದೆ ಸರಿಯಾದ ರೀತಿಯಲ್ಲಿ ಶಿಕ್ಷಣ ನೀಡಿದ್ದಾರೆ. ಈಗಾಗಲೇ ಕೆಆರ್ಡಿಎಲ್ ಇಲಾಖೆ ಕಲಬುರಗಿ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದೇನೆ. ಈಗ ಬಂದಿರುವ ವಾಣಿಜ್ಯ ತೆರಿಗೆ ಇನ್ಸ್‍ಪೆಕ್ಟರ್ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಸೇವೆ ಸಲ್ಲಿಸುವ ನಿರ್ಧಾರ ಮಾಡಿರುವೆ.
-ಕು.ಪಲ್ಲವಿ ಹೊಸಮನಿ, 9 ಸರಕಾರಿ ನೌಕರಿ ಪಡೆದ ಸಾಧಕಿ.