
ಬೆಂಗಳೂರು.ಜೂ೨೪- ಮಹಾರಾಷ್ಟ್ರದಲ್ಲಿ ನಡೆದ ೧೫ ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ನಲ್ಲಿ ಕರ್ನಾಟಕದ ಕುಸ್ತಿ ಪಟುಗಳು ಅದ್ಬುತ ಸಾಧನೆಯ ಮೂಲಕ ಚಿನ್ನ ಸೇರಿದಂತೆ ಐದು ಪದಕಗಳನ್ನು ಗಳಿಸಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.
ಬೆಂಗಳೂರಿನ ಕರ್ನಾಟಕ ಕುಸ್ತಿ ಸಂಘದ ಕಛೇರಿಯಲ್ಲಿ ಚಿನ್ನದ ಪದಕ ಗೆದ್ದ ಕುಸ್ತಿಪಟು ತಿಮ್ಮೇಶಿ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ಮಹಾರಾಷ್ಟ್ರದ ನಾಗ್ಪುರದಲ್ಲಿ ಭಾರತೀಯ ಕುಸ್ತಿ ಸಂಘದ ಅಧೀನದಲ್ಲಿ ಮಹಾರಾಷ್ಟ್ರ ಕುಸ್ತಿಗಿರಿ ಸಂಘದ ವತಿಯಿಂದ ಜೂನ್ ೨೦ ರಿಂದ ೨೨ರವರೆಗೆ ಆಯೋಜಿಸಿದ್ದ ಅಂಡರ್-೧೫ ಫ್ರೀ ಸ್ಟೈಲ್, ಗ್ರಿಕೋ ರೋಮನ್ ಮತ್ತು ಮಹಿಳಾ ಕುಸ್ತಿ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕ ಕುಸ್ತಿಪಟುಗಳು ಶ್ರೇಷ್ಠ ಪ್ರದರ್ಶನವನ್ನು ನೀಡುವ ಮೂಲಕ ಐದು ಪದಕಗಳನ್ನು ಗಳಿಸಿದ್ದಾರೆ. ಈ ಸಾಧನೆಯಿಂದ ನಮ್ಮ ಕರ್ನಾಟಕದಲ್ಲಿ ಕುಸ್ತಿ ಸಂಘದಿಂದ ಬಲಿಷ್ಠ ಕುಸ್ತಿ ನಿರ್ಮಾಣದ ವ್ಯವಸ್ಥೆಗಾಗಿ ಕೈಗೊಂಡಿರುವ ಸತತ ಪ್ರಯತ್ನದ ಫಲವಾಗಿದೆ ಹಾಗೂ ರಾಷ್ಟ್ರಮಟ್ಟದಲ್ಲಿ ನಮ್ಮ ರಾಜ್ಯದ ಕುಸ್ತಿ ಪಟುಗಳು ತೋರಿದ ಪ್ರದರ್ಶನವು ಯುವ ಕುಸ್ತಿ ಪ್ರತಿಭೆಗಳನ್ನು ಪೋಷಿಸುವ ಬದ್ಧತೆಯ ಜೊತೆಗೆ ಕುಸ್ತಿಪಟುಗಳು ತೋರಿದ ಶಿಸ್ತು, ಕೌಶಲ್ಯ ಸಮರ್ಪಣೆಗೆ ನಾವು ಹೆಮ್ಮೆ ಪಡೆಯುವಂತೆ ಮಾಡಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷರಾದ ಬಿ.ಗುಣರಂಜನ್ ಶೆಟ್ಟಿಯವರ ತಂದೆ ವಿಠಲ್ ಶೆಟ್ಟಿ ಹಾಗೂ ತಾಯಿ ಫ್ರಪುಲ ವಿ ಶೆಟ್ಟಿಯವರು ಚಿನ್ನದ ಪದಕ ಗಳಿಸಿದ ತಿಮ್ಮೇಶಿ ಅವರನ್ನು ಆಶೀರ್ವದಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸಾಧನೆ ಮಾಡಿ ರಾಜ್ಯಕ್ಕೆ ಮತ್ತು ಕರ್ನಾಟಕ ಕುಸ್ತಿ ಸಂಘಕ್ಕೆ ಉತ್ತಮ ಹೆಸರನ್ನು ತರುವಂತೆ ಕಿವಿ ಮಾತನ್ನು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಶ್ರೀನಿವಾಸ್, ತಾಂತ್ರಿಕ ವಿಭಾಗದ ಅಧ್ಯಕ್ಷ ವಿನೋದ್, ಖಜಾಂಚಿ ಶ್ರೀನಿವಾಸ ಅಂಗರಕೋಡಿ, ಜಂಟಿ ಕಾರ್ಯದರ್ಶಿ ಕುಮಾರ್, ನಾಗೇಶ್, ಸುದರ್ಶನ್, ಇತರರು ಇದ್ದರು