
ಬೆಂಗಳೂರು, ಮಾ. ೧೨- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ವಿಚಾರವನ್ನು ವಿಧಾನಸಭೆಯಲ್ಲಿಂದು ಪ್ರಸ್ತಾಪಿಸಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಂದಿಸಿದ ಸಭಾಧ್ಯಕ್ಷ ಯು.ಟಿ. ಖಾದರ್ ನಾಳೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿದರು.
ಪ್ರಶ್ನೋತ್ತರ ಅವಧಿ ಪೂರ್ಣಗೊಂಡ ನಂತರ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಿ, ರಾಜ್ಯದಲ್ಲಿ ಔಷಧಿಗಳ ಕೊರತೆ ಇದೆ. ಆರೋಗ್ಯ ಸಚಿವರು ಆರೋಗ್ಯವಾಗಿದ್ದಾರೆ. ಆದರೆ ಆರೋಗ್ಯ ಇಲಾಖೆ ಅನಾರೋಗ್ಯವಾಗಿದೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಔಷಧಿಗಳು ಸಿಗುತ್ತಿಲ್ಲ. ವೈದ್ಯರು ಸಹ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಅದನ್ನು ಸರ್ಕಾರ ತಾತ್ಕಾಲಿಕವಾಗಿ ನಿಲ್ಲಿಸಿದೆ. ಔಷಧಿಗಳ ಕೊರತೆಯಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಹೇಳಿದರು.
ಔಷಧಿಗಳ ಕೊರತೆಯ ಜತೆಗೆ ೨೭೦ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಂದ್ ಮಾಡಿ ವೈದ್ಯರುಗಳ ವರ್ಗಾವಣೆಗೂ ಮುಂದಾಗಿದ್ದೀರಿ. ಜನ ಆರೋಗ್ಯ ಸೇವೆಗಳಿಲ್ಲದೆ, ಔಷಧಿಗಳಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರು.
ಸರ್ಕಾರಿ ಆಸ್ಪತ್ರೆಗಳ ವೈದ್ಯರ ಸಂಘದವರೇ ಸರ್ಕಾರಕ್ಕೆ ಪತ್ರ ಬರೆದು ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಿದೆ. ಇದರಿಂದ ರೋಗಿಗಳು, ವೈದ್ಯರು ಹಾಗೂ ಸಿಬ್ಬಂದಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಇದನ್ನು ತಪ್ಪಿಸಿ ಎಂದು ಮನವಿ ಮಾಡಿದ್ದಾರೆ ಎಂದು ಹೇಳಿ, ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಇದೆ. ಹಾಗಾಗಿ ಈ ವಿಚಾರದ ಬಗ್ಗೆ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಇದಕ್ಕೆ ದನಿಗೂಡಿಸಿ ಬಿಜೆಪಿಯ ಡಾ. ಸಿ.ಎನ್. ಅಶ್ವತ್ಥ್‌ನಾರಾಯಣ ಅವರು, ಸಮಸ್ಯೆ ಗಂಭೀರವಾಗಿದೆ. ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ. ವೈದ್ಯರಿಲ್ಲ, ಔಷಧಿಗಳಿಲ್ಲ, ಆಂಬ್ಯುಲೆನ್ಸ್‌ಗಳಿಲ್ಲ. ಹಾಗಾಗಿ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಿ ಎಂದರು.
ಆಗ ಈ ಹಂತದಲ್ಲಿ ಎದ್ದು ನಿಂತು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಾವು ಈ ಬಗ್ಗೆ ಚರ್ಚೆಗೆ ಸಿದ್ದರಿದ್ದೇವೆ. ಎಲ್ಲ ಮಾಹಿತಿಗಳನ್ನು ಕೊಡುತ್ತೇವೆ ಎಂದು ಹೇಳಿದಾಗ ಸಭಾಧ್ಯಕ್ಷರು, ನಿಲುವಳಿ ಸೂಚನೆಯಡಿ ಈ ವಿಚಾರದ ಚರ್ಚೆಗೆ ಅವಕಾಶ ಇಲ್ಲ. ನಿಯಮ ೬೯ರ ಅಡಿಯಲ್ಲಿ ನಾಳೆ ಚರ್ಚೆಗೆ ಅವಕಾಶ ಕಲ್ಪಿಸುವುದಾಗಿ ತಿಳಿಸಿ, ಮುಂದಿನ ಕಲಾಪವನ್ನು ಕೈಗೆತ್ತಿಕೊಂಡರು.
ಔಷಧಿ ಕೊರತೆ ಇಲ್ಲ: ದಿನೇಶ್
ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಇಲ್ಲ, ಔಷಧಿ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ದೊಡ್ಡನಗೌಡ ಹನುಮಗೌಡ ಪಾಟೀಲ್ ರವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಔಷಧಿ ಕೊರತೆ ಇರುವ ಆಸ್ಪತ್ರೆಗಳಲ್ಲಿ ಸ್ಥಳೀಯವಾಗಿಯೂ ಔಷಧಿ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಹಾಗೆಯೇ ಕೆಎಸ್‌ಎಂಸಿಯಿಂದಲೂ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಖರೀದಿ ಆದೇಶಗಳನ್ನು ನೀಡಲಾಗಿದೆ ಎಂದು ತಿಳಿಸಿದರು.
ಔಷಧಿ ಖರೀದಿ ಸಂಬಂಧ ಕೆಎಸ್‌ಎಂಸಿ ವ್ಯವಸ್ಥೆಗಳ್ನು ಸುಧಾರಿಸಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆಯಾಗದಂತೆ ಕ್ರಮ ವಹಿಸಿದ್ದೇವೆ ಎಂದು ಹೇಳಿದರು.
ಕುಷ್ಠಗಿ ತಾಲ್ಲೂಕಿಗೆ ೫೦ ಹಾಸಿಗೆ ಸಾಮರ್ಥ್ಯದ ಕ್ರಿಟಿಕಲ್ ಕೇರ್ ಆಸ್ಪತ್ರೆಯನ್ನು ನೀಡಿದ್ದೇವೆ. ಪಕ್ಷಪಾತ ಮಾಡುವ ಅಗತ್ಯವಿಲ್ಲ. ಹಾಗೆಯೇ ತಾವರೆಗೆರೆಗೂ ೩೦ ಹಾಸಿಗೆಗಳ ಆಸ್ಪತ್ರೆಯನ್ನು ಮಂಜೂರು ಮಾಡಲಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್‌ಗೆ ತೊಂದರೆಯಾಗದಂತೆಯೂ ತಂತ್ರಜ್ಞರ ಸೇವೆಯನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.




























