
ಕಲಬುರಗಿ:ಅ.27: ಬೇಂದ್ರೆಯವರು ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ, ಅವುಗಳನ್ನು ಸಾಹಿತ್ಯದಲ್ಲಿ ಕೃಷಿ ಮಾಡಿದ್ದರಿಂದ ಅವರ ಸಾಹಿತ್ಯವು ಹೆಚ್ಚು ನೈಜತೆ ಹಾಗೂ ಗಟ್ಟಿತನದಿಂದ ಕೂಡಿದೆ. ಅವರಂತೆ ಸಾಹಿತ್ಯಕವಾಗಿ ಮೇರು ಸಾಧನೆ ಮಾಡಬೇಕಾದರೆ, ಸಾಕಷ್ಟು ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬೇಕು. ‘ಜೀವನದಲ್ಲಿ ಬೆಂದವರು ಮಾತ್ರ ಬೇಂದ್ರೆಯಾಗಲು ಸಾಧ್ಯವಿದೆ’ ಎಂದು ಉಪನ್ಯಾಸಕ, ಲೇಖಕ ಎಚ್.ಬಿ.ಪಾಟೀಲ ಮಾರ್ಮಿಕವಾಗಿ ಅಭಿಮತಪಟ್ಟರು.
ತಾಲೂಕಿನ ಫರತಾಬಾದನ ಕರಿಗೋಳೇಶ್ವರ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ವರಕವಿ ದ.ರಾ.ಬೇಂದ್ರೆಯವರ 44ನೇ ಪುಣ್ಯಸ್ಮರಣೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಮ ಸಮಾಜದ ನಿರ್ಮಾಣಕ್ಕೆ ಅನುಭವ, ನೈಜತೆ, ಮೌಲ್ಯಗಳಿಂದ ಕೂಡಿದ ಶ್ರೇಷ್ಠ ಸಾಹಿತ್ಯವನ್ನು ರಚಿಸಿ, ಕನ್ನಡವನ್ನು ಶ್ರೀಮಂತಗೊಳಿಸಿದ ಬೇಂದ್ರೆಯವರ ಸಾಹಿತ್ಯ, ಕೃತಿಗಳು ವಿಮರ್ಶಕರು ಹಾಗೂ ಸಹೃದಯರ ವಿಮರ್ಶಗೆ ಇಂದಿಗೂ ಕೂಡಾ ದಕ್ಕದಿರುವದು ಗಮನಿಸಿದರೆ, ಅವರ ಮೇರು ವ್ಯಕ್ತಿತ್ವ ನಮಗೆ ತಿಳಿಯುತ್ತದೆ. ಬೇಂದ್ರೆಯವರು ನವೋದಯ ಕಾಲಘಟ್ಟದಲ್ಲಿನ ಪ್ರಮುಖವಾದ ಸಾಹಿತಿಯಾಗಿದ್ದಾರೆ. ಮಾನವೀಯ ಮೌಲ್ಯ, ನೈಜತೆಗಳಿಂದ ಕೂಡಿದ ಸಾಹಿತ್ಯವನ್ನು ರಚಿಸಿ ಕನ್ನಡಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು.
ಕಸಾಪ ಉತ್ತರ ವಲಯದ ಗೌರವ ಅಧ್ಯಕ್ಷ ಶಿವಯೋಗೆಪ್ಪಾ ಎಸ್.ಬಿರಾದಾರ ಮಾತನಾಡಿ, ಬೇಂದ್ರೆಯವರ ಸಾಹಿತ್ಯದಲ್ಲಿ ದೇಶಿ ಸೊಗಡು ಹಾಸು ಹೊಕ್ಕಿದೆ. ಮರಾಠಿ ಮಾತೃಭಾಷೆಯಾದರು ಕೂಡಾ, ಕನ್ನಡದ ಮೇಲಿನ ಅಪಾರವಾದ ಪ್ರೀತಿಯಿಂದ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟಿದ್ದು ಸಾಮಾನ್ಯವಾದ ಸಂಗತಿಯಲ್ಲ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಶೋಧಕ-ಸಾಹಿತಿ ಮುಡಬಿ ಗುಂಡೇರಾವ, ಪ್ರಮುಖರಾದ ಶ್ರೀಕಾಂತ ಪಾಟೀಲ್ ತಿಳಗೋಳ್, ಅಸ್ಲಾಂ ಶೇಖ್, ಮಹಾದೇವಪ್ಪ ಎಚ್.ಬಿರಾದಾರ, ಪ್ರಭು ಸಬಶೆಟ್ಟಿ, ಸಿದ್ದಲಿಂಗ ಪೂಜಾರಿ ಸೇರಿದಂತೆ ಇನ್ನಿತರರಿದ್ದರು.






























