
ಬೆಂಗಳೂರು,ಆ.೨೯- ಹಣವನ್ನು ಪಣಕ್ಕಿಟ್ಟು ಆಡುವ ಆನ್‌ಲೈನ್ ಗೇಮ್‌ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯಿದೆ-೨೦೨೫ನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ವಿಚಾರಣೆಯನ್ನು ಹೈಕೋರ್ಟ್‌ಗೆ ನಾಳೆ ನಿಗದಿಪಡಿಸಿದೆ.
ಎ೨೩ ರಮ್ಮಿ ಎಂಬ ಆನ್‌ಲೈನ್ ಗೇಮಿಂಗ್‌ನ್ನು ನಡೆಸುತ್ತಿರುವ ಹೆಡ್ ಡಿಜಿಟಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಅರ್ಜಿಯನ್ನು ಸಲ್ಲಿಸಿದ್ದು, ತುರ್ತು ವಿಚಾರಣೆಗಾಗಿ ಪರಿಗಣಿಸಬೇಕು ಎಂದು ಅರ್ಜಿದಾರರ ಪರ ವಕೀಲರು ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರ ಪೀಠದ ಮುಂದೆ ಮನವಿ ಮಾಡಿದರು. ಮನವಿಯನ್ನು ಪರಿಗಣಿಸಿದ ಪೀಠ, ಅರ್ಜಿಯ ವಿಚಾರಣೆಯನ್ನು ಆಗಸ್ಟ್ ೩೦ರಂದು ನಡೆಸುವುದಾಗಿ ತಿಳಿಸಿತು.
ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿರುವ ಈ ಕಾಯಿದೆ ಭಾರತದ ಗಡಿಯೊಳಗೆ ಮಾತ್ರವಲ್ಲದೇ, ಹೊರ ದೇಶಗಳಿಂದಲೂ ಭಾರತದಲ್ಲಿ ಆನ್‌ಲೈನ್ ಗೇಮಿಂಗ್‌ಗಳನ್ನು ನಿರ್ವಹಣೆ ಮಾಡುವ ಕಂಪೆನಿಗಳನ್ನು ನಿಯಂತ್ರಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ. ಈ ಕಾಯಿದೆ, ನಿರ್ದಿಷ್ಟ ನಿಯಮಗಳು ಮತ್ತು ಮಾನದಂಡಗಳನ್ನು ಆಧರಿಸಿ, ಕೌಶಲ್ಯ ಆಧಾರಿತ ಕ್ರೀಡೆಗಳನ್ನು ವರ್ಚುವಲ್ ವೇದಿಕೆಯಲ್ಲಿ ಆಡುವ ಆಟಗಳನ್ನು ಗುರುತಿಸಿರುವುದಾಗಿದೆ.
ಈ ಕೌಶಲ್ಯ ಆಧಾರಿತ ಕ್ರೀಡೆಗಳನ್ನು ಆನ್‌ಲೈನ್‌ನಲ್ಲಿ ಜೂಜು ಮಾದರಿಯ ಕ್ರೀಡೆಗಳಿಂದ ಪ್ರತ್ಯೇಕಿಸುವುದಕ್ಕಾಗಿ ಈ ಕಾಯಿದೆಯಲ್ಲಿ ಅವಕಾಶವಿದೆ. ಹಣ ಹಾಗೂ ಇನ್ನಿತರೆ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಡುವ ಜೂಜನ್ನು ಒಳಗೊಂಡಿರುವ ಆಟಗಳನ್ನು ಮನಿ ಗೇಮ್? ಎಂದು ಕರೆಯಲಾಗಲಿದೆ. ಆನ್‌ಲೈನ್ ಕ್ರೀಡೆಗಳಲ್ಲಿ ಆಗುವ ವಂಚನೆಗಳಿಂದ ಗ್ರಾಹಕರಿಗೆ ರಕ್ಷಣೆ ದೊರಕಿಸಿಕೊಡಲು ಕಾಯಿದೆಯಲ್ಲಿ ಅವಕಾಶವಿರಲಿದೆ.
ನಿರ್ವಹಣೆಯ ಹೊಣೆ :
ಕಾಯಿದೆಯು ಆನ್‌ಲೈನ್ ಗೇಮಿಂಗ್‌ಗಳ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಇ-ಪ್ರಾಧಿಕಾರ ರಚನೆಗೆ ಅವಕಾಶ ನೀಡಲಿದೆ. ಈ ಪ್ರಾಧಿಕಾರದ ಅಡಿಯಲ್ಲಿ ನಿಯಂತ್ರಣಕ್ಕೆ ಕಾರ್ಯನಿರ್ವಹಣೆಗೆ ಈ ಕಾಯಿದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಜೊತೆಗೆ, ಸ್ಪರ್ಧಾತ್ಮಕ ಕ್ರೀಡೆಗಳಿಗೆ ಉತ್ತೇಜನ ನೀಡುವುದು, ಹಣದ ವಹಿವಾಟು ಇಲ್ಲದ ಸಾಮಾನ್ಯ ಆನ್‌ಲೈನ್ ಸಾಮಾಜಿಕ ಆಟಗಳ ನೋಂದಣಿ, ಸುರಕ್ಷತೆ ಮತ್ತು ದೂರುಗಳಿದ್ದಲ್ಲಿ ಪ್ರತ್ಯೇಕ ಕಾನೂನು ರಚನೆ, ಸ್ಥಳೀಯ ಆಡಳಿತದ ಕಾನೂನಗಳೊಂದಿಗೆ ಈ ಕಾಯಿದೆಯನ್ನು ಸೇರ್ಪಡೆ ಮಾಡಿಕೊಳ್ಳಲು ರಾಜ್ಯ ಸರ್ಕಾರಗಳೊಂದಿಗೆ ಕೆಲಸ ಮಾಡುವುದು ಈ ಪ್ರಾಧಿಕಾರದ ಮುಖ್ಯ ಕರ್ತವ್ಯವಾಗಿರಲಿದೆ. ಜೊತೆಗೆ, ಈ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಬಹುದಾಗಿದೆ.
ಆನ್‌ಲೈನ್ ಗೇಮಿಂಗ್‌ನ್ನು ಕಾನೂನುಬಾಹಿರವಾಗಿ ಪ್ರಚೋದನೆ ನೀಡುವುದು ಮತ್ತು ಅಂತಹ ಗೇಮಿಂಗ್‌ಗಳಿಗೆ ಅವಕಾಶ ಕಲ್ಪಿಸುವವರ ವಿರುದ್ಧ ತನಿಖಾಧಿಕಾರಿಗೆ ಯಾವುದೇ ಸಂಶಯ ಬಂದಲ್ಲಿ ವಾರೆಂಟ್ ನೀಡದೆಯೇ ಆರೋಪಿಗಳನ್ನು ಬಂಧಿಸುವುದು, ಆಸ್ತಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.
ಶಿಕ್ಷೆ ಪ್ರಮಾಣ:
ಕಾನೂನನ್ನು ಉಲ್ಲಂಘಿಸಿ ಈ ರೀತಿಯ ಆನ್‌ಲೈನ್ ಗೇಮಿಂಗ್‌ಗಳನ್ನು ಮುಂದುವರೆಸಿದಲ್ಲಿ ಅಂತಹ ವ್ಯಕ್ತಿಗೆ ೩ ವರ್ಷಗಳವರೆಗೂ ಶಿಕ್ಷೆ ಅಥವಾ ೧ ಕೋಟಿ ರೂ.ಗಳ ದಂಡ, ಇಲ್ಲವೇ ಎರಡನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಈ ಆನ್‌ಲೈನ್ ಗೇಮಿಂಗ್‌ಗಳ ಕುರಿತಂತೆ ಪ್ರಚಾರದಲ್ಲಿ ತೊಡಗುವವರಿಗೆ ೨ ವರ್ಷ ಜೈಲು ಶಿಕ್ಷೆ ಮತ್ತು ೫೦ ಲಕ್ಷ ರೂ.ಗಳ ವರೆಗೂ ದಂಡ ಹಾಗೂ ಎರಡನ್ನೂ ವಿಧಿಸಬಹುದಾಗಿದೆ.
ಇತ್ತೀಚೆಗೆ, ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ-೨೦೨೫ಕ್ಕೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ರಾಷ್ಟ್ರಪತಿಗಳಿಂದಲೂ ಆಗಸ್ಟ್ ೨೨ರಂದು ಅನುಮತಿ ಕೂಡ ದೊರೆತಿದೆ. ಇದೀಗ ಕಾನೂನಾಗಿ ದೇಶದಲ್ಲಿ ಜಾರಿಯಲ್ಲಿದೆ. ಈ ಕಾಯಿದೆಯನ್ನು ಪ್ರಶ್ನಿಸಿ ಇದೀಗ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.