ಗುಂಡಿಕ್ಕಿ ಕುಖ್ಯಾತ ರೌಡಿ ಬಂಧನ

ಶಿವಮೊಗ್ಗ,ಫೆ.೮- ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡ ಬೆನ್ನಲ್ಲೇ ಮತ್ತೆ ಡಕಾಯಿತಿಗೆ ಹೊಂಚು ಹಾಕಿದ್ದ ಕುಖ್ಯಾತ ರೌಡಿ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್ ಗೆ ಭದ್ರಾವತಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.


ಗುಂಡೇಟು ತಗುಲಿ ಬಲಗಾಲಿಗೆ ಗಾಯಗೊಂಡಿರುವ ರೌಡಿ ಡಿಚ್ಚಿ ಮುಬಾರಕ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಭದ್ರಾವತಿ ತಾಲೂಕು ಗೌರಪುರದ ಬಳಿ ಡಿಚ್ಚಿ ಮುಬಾರಕ್? ಡಕಾಯಿತಿ ನಡೆಸಲು ಹೊಂಚು ಹಾಕಿ ಕಾದು ಕುಳಿತಿದ್ದ ಖಚಿತವಾದ ಮಾಹಿತಿ ಆಧರಿಸಿ ಕೂಡಲೇ ಕಾರ್ಯಾಚರಣೆ ಕೈಗೊಂಡ ಭದ್ರಾವತಿ ಪೇಪರ್ ಟೌನ್ ಠಾಣೆಯ ಪಿಎಸ್‌ಐ ಕೃಷ್ಣಕುಮಾರ್ ಮಾನೆ ಅವರು ಸಿಬ್ಬಂದಿ ಬಂಧಿಸಲು ತೆರಳಿದ್ದಾರೆ.


ಬೆನ್ನತ್ತಿ ಬಂದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲ್ಲೆಗೆ ಮುಂದಾದ ಮುಬಾರಕ್ ಗೆ ಗಾಳಿಯಲ್ಲಿ ಒಂದು ಸುತ್ತ ಗುಂಡು ಹಾರಿಸಿ ಎಚ್ಚರಿಕೆ ನೀಡಿದರೂ ಮತ್ತೆ ಹಲ್ಲೆಗೆ ಯತ್ನಿಸಿದಾಗ ಜೀವ ರಕ್ಷಣೆಗಾಗಿ ಮತ್ತೊಂದು ಗುಂಡು ಹಾರಿಸಿದ್ದು,ಅದು ಆತನ ಕಾಲಿಗೆ ಬಿದ್ದು ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.


ಡಿಚ್ಚಿ ಮುಬಾರಕ್ ಎರಡು ದಿನಗಳ ಹಿಂದೆ ನಗರದ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾ ಆಗಿ ನಿನ್ನೆ ತನ್ನ ೭-೮ ಮಂದಿ ಸಂಗಡಿಗರೊಂದಿಗೆ ಕಾರು ಮತ್ತು ಸ್ಕೂಟಿಯಲ್ಲಿ ಮಾರಕಾಸ್ತ್ರಗಳೊಂದಿಗೆ ಭದ್ರಾವತಿ ತಾಲೂಕು ಶಿವನಿ ಕ್ರಾಸ್ ಗೌರಪುರದ ಬಳಿ ಇರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಬಳಿಕ ಭದ್ರಾವತಿ ಡಿವೈಎಸ್‌ಪಿ ಅವರು ಸ್ಥಳಕ್ಕೆ ಒಂದು ತಂಡ ರಚನೆ ಮಾಡಿ ಕಳುಹಿಸಿದ್ದರು.


ದರೋಡೆಗೆ ಹೊಂಚು ಹಾಕುತ್ತಿದ್ದ ರೌಡಿಶೀಟರ್ ಹಾಗೂ ತಂಡವನ್ನು ಬಂಧಿಸಲು ಹೋದಾಗ ಡಿಚ್ಚಿ ಮುಬಾರಕ್ ಹಾಗೂ ಆತನ ಸಂಗಡಿಗರು ಕಲ್ಲು ಮತ್ತು ಚಾಕುಗಳಿಂದ ಪೊಲೀಸರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾರೆ.


ಇದರಿಂದ ಹೊಸಮನೆ ಠಾಣೆ ಪಿಎಸ್‌ಐ ಸಿದ್ದಪ್ಪನವರ ಕಾಲಿನ ಮೂಳೆ ಮುರಿತವಾಗಿದೆ. ಇವರ ಮೇಲೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಲಾಗಿದೆ. ಅಲ್ಲದೆ, ಕೃಷ್ಣಕುಮಾರ್ ಅವರ ಕೈ ಬೆರಳು ಮುರಿತವಾಗಿದೆ. ಜೊತೆಗೆ, ಆದರ್ಶ್ ಅವರ ಕಾಲಿಗೂ ಗಾಯವಾಗಿದೆ.


ಈ ವೇಳೆ, ಪಿಎಸ್‌ಐ ಕೃಷ್ಣಕುಮಾರ್ ಅವರು ಡಿಚ್ಚಿ ಮುಬಾರಕ್‌ಗೆ ಶರಣಾಗುವಂತೆ ಸೂಚಿಸಿದರೂ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೂ ಮುಬಾರಕ್ ಪೊಲೀಸರಿಗೆ ಆವಾಜ್ ಹಾಕಿ ತನ್ನ ಬಳಿ ಇದ್ದ ಚಾಕುವಿನಿಂದ ಚುಚ್ಚಲು ಹೋಗಿದ್ದ. ಈ ವೇಳೆ ಕೃಷ್ಣಕುಮಾರ್ ತಮ್ಮ ಆತ್ಮರಕ್ಷಣೆಗೆ ಡಿಚ್ಚಿಯ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ.


ಆತನ ಜೊತೆ ಸಹಚರಾದ ಜಹೀರ್, ರೆಹಮತ್, ಪಾಷಾ, ಜುನೈದ್ ಮತ್ತು ಮನುಸಿಂಗ್? ಎಂಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


ಆಸ್ಪತ್ರೆಗೆ ಎಸ್‌ಪಿ ನಿಖಿಲ್ ಭೇಟಿ ನೀಡಿ ಘಟನೆ ಕುರಿತು ಮಾತನಾಡಿದ ಅವರು ರೌಡಿ ಮುಬಾರಕ್ ಅಲಿಯಾಸ್ ಡಿಚ್ಚಿ ಮುಬಾರಕ್?ನನ್ನು ಹಿಡಿಯಲು ಹೋದಾಗ ಪೊಲೀಸರ ತಂಡದ ಮೇಲೆ ಹಲ್ಲೆಗೆ ಮುಂದಾಗಿದ್ದಾಗ ಪೊಲೀಸರು ಗಾಯಗೊಂಡಿದ್ದಾರೆ. ಇದರಿಂದ ಕೃಷ್ಣಕುಮಾರ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ, ನಂತರ ಶರಣಾಗದಿದ್ದಾಗ ಆತನ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ. ಘಟನೆಯಲ್ಲಿ ಪಿಎಸ್‌ಐ ಸಿದ್ದಪ್ಪ ಅವರ ಕಾಲಿನ ಮೂಳೆ ಮುರಿತವಾಗಿದೆ. ನಮ್ಮ ಸಿಬ್ಬಂದಿ ಆದರ್ಶ ಅವರಿಗೂ ಗಾಯವಾಗಿದೆ. ನಮ್ಮ ತಂಡದವರು ಸದ್ಯ ಆರೋಗ್ಯವಾಗಿದ್ದಾರೆ.


ಮುಬಾರಕ್ ವಿರುದ್ಧ ೧೫ ಪ್ರಕರಣಗಳಿವೆ. ಈ ಘಟನೆಯಲ್ಲಿ ನಮ್ಮ ತಂಡವು ಜೀವದ ಹಂಗು ತೊರೆದು ಕೆಲಸ ಮಾಡಿದೆ” ಎಂದು ತಿಳಿಸಿದರು.