ಖರ್ಗೆ ಜೊತೆ ರಾಜಕೀಯ ಚರ್ಚೆ ನಡೆಸಿಲ್ಲ

ಬೆಂಗಳೂರು, ಜ. ೩೧- ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರ ಜತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಇದೊಂದು ಸೌಹಾರ್ದ ಹಾಗೂ ಸೌಜನ್ಯದ ಭೇಟಿ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಬೆಂಗಳೂರಿನಲ್ಲಿಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಂಬಂಧ ಕುಟುಂಬದ ಸಂಬಂಧ. ಹಾಗಾಗಿ ಅವರು ಬೆಂಗಳೂರಿಗೆ ಬಂದಾಗಲೆಲ್ಲಾ ಭೇಟಿ ಮಾಡುತ್ತಾ ಇರುತ್ತೇನೆ. ರಾಜ್ಯದ ರಾಜಕಾರಣದ ವಿಚಾರಗಳನ್ನು ಅವರ ಗಮನಕ್ಕೆ ತಂದಿದ್ದೇನೆ ಅಷ್ಟೇ ಎಂದರು.


ನಾನು ಎಐಸಿಸಿ ಅಧ್ಯಕ್ಷರ ಜತೆ ಯಾವುದೇ ರಾಜಕೀಯ ವಿಷಯಗಳನ್ನು ಪ್ರಸ್ತಾಪ ಮಾಡಿಲ್ಲ. ರಾಜಕೀಯ ವಿಚಾರಗಳ ಚರ್ಚೆಯೂ ಆಗಿಲ್ಲ. ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇನೆ ಅಷ್ಟೇ ಎಂದರು.


ಗುಲ್ಬರ್ಗಾದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಇದಕ್ಕಾಗಿ ಬಜೆಟ್‌ನಲ್ಲಿ ಪ್ರತ್ಯೇಕವಾಗಿ ಅನುದಾನ ನೀಡುವ ಬಗ್ಗೆ ಅವರು ಹೇಳಿದ್ದಾರೆ. ನಾನು ಕೂಡಾ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಈ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ಹೇಳಿದರು.


ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಬೂದಿಮುಚ್ಚಿದ ಕೆಂಡದಂತಿರುವಾಗಲೇ ಸಚಿವ ಡಾ. ಜಿ. ಪರಮೇಶ್ವರ್ ಅವರು ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿರುವುದು ನಾನಾ ವ್ಯಾಖ್ಯಾನಗಳಿಗೆ ಕಾರಣವಾಗಿದೆ.