ಹಿಂದುಳಿದ ವರ್ಗ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ

ಬಿವೈವಿ ವಾಗ್ದಾಳಿ

ಬೆಂಗಳೂರು, ಜ. ೩೦- ಅಹಿಂದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗ ಹಾಗೂ ಸಮುದಾಯಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿಯ ಬಿ.ವೈ. ವಿಜಯೇಂದ್ರ ವಿಧಾನಸಭೆಯಲ್ಲಿಂದು ಹೇಳಿದರು.


ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಿ, ಆ ನಿಗಮಗಳ ಮೂಲಕ ಆ ಸಮುದಾಯದ ಯುವ ಜನತೆಗೆ ನೆರವಾಗಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇವರಾಜು ಅರಸು ಅಭಿವೃದ್ಧಿ ನಿಗಮ, ವಿಶ್ವಕರ್ಮ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಮರಾಠ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ಬಜೆಟ್‌ನಲ್ಲಿ ನಿಗದಿಪಡಿಸಿರುವ ಅನುದಾನದಲ್ಲಿ ಶೇ. ೫೦ ರಷ್ಟು ಅನುದಾನ ಬಿಡುಗಡೆ ಮಾಡಿಲ್ಲ. ಆದರೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ ಎಲ್ಲಾ ನಿಗಮಗಳಿಗೆ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡಿತ್ತು ಎಂದು ಹೇಳಿದರು.


ಅಹಿಂದ ವರ್ಗದ ಹೆಸರೇಳುವ ಈ ರಾಜ್ಯ ಸರ್ಕಾರದಿಂದ ಅಹಿಂದ ವರ್ಗದ ಕನಸುಗಳು ನುಚ್ಚು ನೂರಾಗಿವೆ. ಅವರು ಇಟ್ಟುಕೊಂಡಿದ್ದ ನಿರೀಕ್ಷೆಗಳು ಸುಳ್ಳಾಗಿವೆ. ಅಹಿಂದ ವರ್ಗವನ್ನು ಕಾಂಗ್ರೆಸ್ ಮೊದಲಿನಿಂದಲೂ ತನ್ನ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ದೂರಿದರು.


ಈ ನಿಗಮಗಳಿಗೆ ಶೇ. ೫೦ಕ್ಕಿಂತ ಕಡಿಮೆ ಹಣವನ್ನು ಸರ್ಕಾರ ನೀಡಿದೆ. ಇದು ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎನ್ನುವಂತಾಗಿದೆ. ಈ ಸಮುದಾಯಗಳ ಯುವಕರ ಅಭಿವೃದ್ಧಿಗೆ ಆದ್ಯತೆ ನೀಡದಿರುವುದು ದುರಂತ ಎಂದು ಹೇಳಿದ ಅವರು, ಅಹಿಂದ ವರ್ಗದ ಅಭಿವೃದ್ಧಿಗೆ ಸ್ಥಾಪಿಸಿರುವ ನಿಗಮಗಳಿಗೆ ನಿಗದಿಪಡಿಸಿರುವ ಹಣವನ್ನು ಬಿಡುಗಡೆ ಮಾಡಿ ಎಂದು ಅವರು ಒತ್ತಾಯಿಸಿದರು.


ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ೩.೭ ಲಕ್ಷ ಕೋಟಿ ರೂಪಾಯಿ ಈ ಸರ್ಕಾರ ಸಾಲ ಮಾಡಿದೆ. ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವವರು ಈ ಸಾಲ, ಬಡ್ಡಿ, ಅಸಲು ತೀರಿಸುವ ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು.


ಈ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ನಾವು ಹಲವಾರು ಬಾರಿ ಹೇಳಿದ್ದೇವೆ. ಅದಕ್ಕೆ ಪೂರಕ ಎಂಬಂತೆ ಗೃಹಲಕ್ಷ್ಮೀ ಯೋಜನೆಯ ಒಂದು ತಿಂಗಳ ೫ ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿಲ್ಲ. ಹಾಗೆಯೇ ಮಂಡ್ಯದಲ್ಲಿ ಸ್ವಾತಂತ್ರ್ಯ ಯೋಧರ ಮಾಸಿಕ ಗೌರವ ಧನ ೪.೮೫ ಕೋಟಿ ರೂ. ಬಾಕಿ ಇದೆ. ವೇತನ ಸಿಗಲಿಲ್ಲ ಎಂದು ಸೇಡಂನಲ್ಲಿ ಗ್ರಂಥಪಾಲಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡರು. ಇನ್ನು ಗುತ್ತಿಗೆದಾರರ ಪರಿಸ್ಥಿತಿಯಂತೂ ಹೇಳಲೇಬಾರದು. ಹಲವಾರು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಪರಿಸ್ಥಿತಿ ಸರಿ ಇದ್ದಿದ್ದರೆ ಇವೆಲ್ಲಾ ಆಗುತ್ತಿತ್ತೆ ಎಂದು ಅವರು ಪ್ರಶ್ನಿಸಿದರು.


ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ನೀಡುವ ಅನುದಾನದಲ್ಲೂ ದುರ್ಬಳಕೆಯಾಗಿದೆ. ಈ ಹಣವನ್ನು ಬೇರೆ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅವರು ದೂರಿದರು.


ರಾಜ್ಯ ಸರ್ಕಾರ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಅಬಕಾರಿ ಇಲಾಖೆಯ ಆದಾಯ ಸಂಗ್ರಹವನ್ನು ೪೦ ಸಾವಿರ ಕೋಟಿ ರೂಪಾಯಿಗಳಿಗೆ ನಿಗದಿ ಮಾಡಿದೆ. ಇದರ ಪರಿಣಾಮ ದಿನಸಿ ಅಂಗಡಿಗಳಲ್ಲೂ ಮದ್ಯ ಮಾರಾಟ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.


ಒಂದು ಕಡೆ ಗೃಹಲಕ್ಷ್ಮೀ ಯೋಜನೆಯಡಿ ೨ ಸಾವಿರ ಕೊಡುತ್ತಾ, ಮತ್ತೊಂದೆಡೆ ಅಬಕಾರಿ ಇಲಾಖೆಯಿಂದ ೫ ಸಾವಿರ ಹಣವನ್ನು ಪ್ರತಿ ಕುಟುಂಬದಿಂದ ವಸೂಲಿ ಮಾಡುತ್ತಿದೆ. ಇದು ಅಭಿವೃದ್ಧಿನಾ ಎಂದು ಅವರು ಪ್ರಶ್ನಿಸಿದರು.


ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿ ಹೋಗಿದೆ. ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ ಎಂದು ಒತ್ತಾಯಿಸಿದ ಅವರು, ಉತ್ತರ ಕನ್ನಡದಲ್ಲಿ ರಂಜಿತಾ ಎಂಬ ದಲಿತ ಮಹಿಳೆಯನ್ನು ಹತ್ಯೆ ಮಾಡಲಾಯಿತು. ಆಕೆಗೂ ಸರ್ಕಾರ ಪರಿಹಾರ ಕೊಡಲಿಲ್ಲ ಎಂದು ದೂರಿದರು.


ರಾಜ್ಯ ಸರ್ಕಾರ ರಾಜ್ಯಪಾಲರ ಮೂಲಕ ಸತ್ಯ ಹೇಳಿಸಬೇಕಿತ್ತು, ಸರ್ಕಾರದ ಸಾಧನೆ ಏನೆಂದು ಹೇಳಿಸಬೇಕಿತ್ತು. ಆ ಕೆಲಸ ಮಾಡಿಲ್ಲ. ಈ ಸರ್ಕಾರ ಎಲ್ಲ ರಂಗದಲ್ಲೂ ವೈಫಲ್ಯ ಹೊಂದಿದೆ ಎಂದು ದೂರಿದರು.


ರಾಜ್ಯದಲ್ಲಿರುವುದು ಅಭಿವೃದ್ಧಿ ಶೂನ್ಯ ಸರ್ಕಾರ. ವಾಲ್ಮೀಕಿ ಹಗರಣ ನಡೆಸಿದ್ದೇ ಇವರ ಸಾಧನೆ. ರಾಷ್ಟ್ರೀಯ ಶಿಕ್ಷಣ ನೀತಿ ತಡೆದಿದ್ದೇ ಇವರ ಸಾಧನೆ ಎಂದು ಟೀಕಿಸಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ಒಕ್ಕೂಟ ವ್ಯವಸ್ಥೆ, ಮಹಾತ್ಮಗಾಂಧಿ, ಅಂಬೇಡ್ಕರ್, ಪ್ರಜಾಪ್ರಭುತ್ವ ಎಂದೆಲ್ಲಾ ಮಾತನಾಡುತ್ತದೆ. ಇದನ್ನೆಲ್ಲಾ ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಎನ್ನುವಂತಾಗಿದೆ. ಈ ಹಿಂದೆ ಸೀತೆಯನ್ನು ಹೇಗೆ ರಾವಣ ಅಪಹರಿಸಿದನೋ ಹಾಗೆಯೇ ಮಹಾತ್ಮಗಾಂಧೀಜಿಯವರಿಗೆ ಟೋಪಿ ಹಾಕಲು ಕಾಂಗ್ರೆಸ್ ನವರು ಹೊರಟಿದ್ದಾರೆ. ಜತೆಗೆ ಜನರಿಗೂ ಮಕ್ಮಾಲ್ ಟೋಪಿ ಹಾಕಿದ್ದಾರೆ ಎಂದು ಅವರು ಹೇಳಿದರು.