
ಪಾಟ್ನಾ, ಮಾ.೮ : ಬಿಹಾರದ ರಾಜಕೀಯ ವಲಯದಲ್ಲಿ ದಶಕಗಳಿಂದ ಕೇಳಿಬರುತ್ತಿದ್ದ ಕುತೂಹಲಕ್ಕೆ ಇಂದು ತೆರೆ ಬೀಳುವ ಸಾಧ್ಯತೆಯಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ಇಂದು ಅಧಿಕೃತವಾಗಿ ಜನತಾದಳ ಯುನೈಟೆಡ್ ಪಕ್ಷವನ್ನು ಸೇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ನಿತೀಶ್ ಕುಮಾರ್ ಅವರು ಇದುವರೆಗೆ ತಮ್ಮ ಕುಟುಂಬವನ್ನು ರಾಜಕೀಯದಿಂದ ದೂರವೇ ಇಟ್ಟಿದ್ದರು. ಆದರೆ, ಈಗ ನಿಶಾಂತ್ ಕುಮಾರ್ ಅವರ ಪ್ರವೇಶವು ಜೆಡಿಯು ಪಕ್ಷದ ಭವಿಷ್ಯದ ನಾಯಕತ್ವದ ಕುರಿತು ದಿಕ್ಸೂಚಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಇಂದು ಪಾಟ್ನಾದಲ್ಲಿ ನಡೆಯಲಿರುವ ಪಕ್ಷದ ವಿಶೇಷ ಸಭೆಯಲ್ಲಿ ಅವರು ಸದಸ್ಯತ್ವ ಪಡೆಯಲಿದ್ದಾರೆ ಎನ್ನಲಾಗಿದೆ.
ನಿಶಾಂತ್ ಕುಮಾರ್ ಅವರು ಬಿಟ್ ಮೆಸ್ರಾ ಸಂಸ್ಥೆಯಿಂದ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಇದುವರೆಗೆ ಸಾರ್ವಜನಿಕ ಜೀವನ ಅಥವಾ ರಾಜಕೀಯ ವೇದಿಕೆಗಳಿಂದ ಸಂಪೂರ್ಣವಾಗಿ ದೂರವಿದ್ದ ಇವರು, ಹೆಚ್ಚಾಗಿ ಆಧ್ಯಾತ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ನಿಶಾಂತ್ ಅವರ ಆಗಮನವು ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತಂದಿದೆ. ಇತ್ತೀಚೆಗೆ ನಡೆದ ಪಕ್ಷದ ಸಭೆಗಳಲ್ಲಿ ಅನೇಕ ಹಿರಿಯ ನಾಯಕರು “ನಿಶಾಂತ್ ಅವರು ರಾಜಕೀಯಕ್ಕೆ ಬಂದು ತಂದೆಯವರಿಗೆ ನೆರವಾಗಬೇಕು” ಎಂಬ ಬೇಡಿಕೆಯನ್ನು ಬಹಿರಂಗವಾಗಿಯೇ ಇಟ್ಟಿದ್ದರು.
ಇನ್ನೊಂದೆಡೆ ನಿತೀಶ್ ಕುಮಾರ್ ಅವರ ಈ ನಿರ್ಧಾರವನ್ನು ವಿರೋಧ ಪಕ್ಷವಾದ ಆರ್ಜೆಡಿ ಟೀಕಿಸಿದೆ. “ಪರಿವಾರವಾದದ ವಿರುದ್ಧ ಮಾತನಾಡುತ್ತಿದ್ದ ನಿತೀಶ್ ಕುಮಾರ್ ಅವರು ಈಗ ತಮ್ಮ ಮಗನನ್ನೇ ರಾಜಕೀಯಕ್ಕೆ ತರುತ್ತಿರುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ” ಎಂದು ಲೇವಡಿ ಮಾಡಿದೆ.































