
ಪಾಟ್ನಾ,ನ,೧೯- ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿರುವ ಎನ್‌ಡಿಎ ಮೈತ್ರಿಕೂಟದ ನೂತನ ಸರ್ಕಾರ ನಾಳೆ ಅಸ್ತಿತ್ವಕ್ಕೆ ಬರಲಿದ್ದು ಬಿಹಾರದ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ೧೦ನೇ ಬಾರಿ ಅಧಿಕಾರ ಗದ್ದುಗೆ ಏರಲಿದ್ದಾರೆ.
ನಾಳೆ ಪಾಟ್ನಾದ ಗಾಂಧಿ ಮೈದಾನದಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೊತೆ ಎನ್‌ಡಿಎ ಮೈತ್ರಿಕೂಟದ ಪಕ್ಷಗಳ ಶಾಸಕರಿಗೂ ಸಚಿವ ಸ್ಥಾನ ಭಾಗ್ಯ ಒಲಿಯಲಿದ್ದು ಜೆಡಿಯುನ ೧೦ ಶಾಸಕರು, ಬಿಜೆಪಿಯ ೯, ಎಲ್‌ಜೆಪಿ, ಎಚ್‌ಎಎಂ, ಆರ್‌ಎಲ್‌ಎಂನ ತಲಾ ಒಬ್ಬರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಬಿಜೆಪಿಯ ಇಬ್ಬರು, ಶಾಸಕರು, ಉಪಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವರು.
ಬಿಹಾರದ ರಾಜ್ಯಪಾಲ ಆರೀಫ್ ಮೊಹ್ಮದ್ ಖಾನ್ ಅವರು ನೂತನ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರುಗಳಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸುವರು.
ನಾಳೆ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರುಗಳಾದ ಅಮಿತ್ ಶಾ, ರಾಜನಾಥ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರುಗಳು, ಎನ್‌ಡಿಎ ಆಡಳಿತವಿರುವ ರಾಜ್ಯಗಳ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಪಾಲ್ಗೊಳ್ಳಲಿದ್ದು ನಾಳಿನ ಪ್ರಮಾಣ ವಚನ ಸ್ವೀಕಾರ ಸಮಾರಂಭ ಎನ್‌ಡಿಎನ ಶಕ್ತಿ ಪ್ರದರ್ಶನ ಒಗ್ಗಟ್ಟಿಗೂ ಸಾಕ್ಷಿಗಳಾಗಲಿದೆ.
ಎನ್‌ಡಿಯು ಮೈತ್ರಿಪಕ್ಷಗಳ ನಾಯಕರುಗಳ ಸಭೆ ಇಂದು ಪಾಟ್ನಾದಲ್ಲಿ ನಡೆಯಲಿದ್ದು ಯಾವ ಪಕ್ಷಗಳಿಂದ ಯಾರನ್ನು ಸಚಿವರನ್ನಾಗಿಸಬೇಕು ಎಂಬ ಪಟ್ಟಿಯನ್ನು ಅಂತಿಮಗೊಳಿಸಿ ಸಂಜೆ ರಾಜ್ಯಪಾಲರಿಗೆ ಹಂಗಾಮಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಚಿವರ ಪಟ್ಟಿಯನ್ನು ಸಲ್ಲಿಸಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವರು.
ಬಿಹಾರದ ನೂತನ ಸರ್ಕಾರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದ್ದು, ಈ ಹಿಂದೆ ಸಚಿವರಾಗಿದ್ದ ಹಲವರಿಗೆ ಮತ್ತೇ ಸಚಿವ ಸ್ಥಾನ ಸಿಗುವ ಸಾಧ್ಯತೆಗಳು ಕಡಿಮೆ ಇದ್ದು ಹೊಸಬರಿಗೆ ಹೆಚ್ಚಿನ ಅವಕಾಶ ನೀಡಲು ಜೆಡಿಯು, ಬಿಜೆಪಿ ನಿರ್ಧರಿಸಿದೆ.
೨ ಉಪಮುಖ್ಯಮಂತ್ರಿ ಹುದ್ದೆ
ಬಿಜೆಪಿಯಿಂದ ಇಬ್ಬರು ಉಪಮುಖ್ಯಮಂತ್ರಿಗಳಾಗಿದ್ದು, ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮತ್ತೆ ಉಪಮುಖ್ಯಮಂತ್ರಿಯಾಗುವುದು ನಿಶ್ಚಿತ. ಇವರ ಜೊತೆ ವಿಜಯಕುಮಾರ್ ಸಿನ್ಹಾ ವತ್ತು ನಿತೀಶ್ ಮಿಶ್ರಾ, ಮಂಗಳ್ ಪಾಂಡೆ, ಪೈಪೋಟಿ ಇದ್ದು, ಇವರಲ್ಲಿ ಒಬ್ಬರು ಉಪಮುಖ್ಯಮಂತ್ರಿಗಳಾಗುವರು.
ಸಚಿವರುಗಳ ಸಂಭಾವ್ಯ ಪಟ್ಟಿ
ಬಿಜೆಪಿಯಿಂದ ಸಂಭಾವ್ಯ ಸಚಿವರು
ಬಿಜೆಪಿಯಿಂದ ವಿಜಯ್ ಕುಮಾರ್ ಸಿನ್ಹಾ, ಮಂಗಲ್ ಪಾಂಡೆ, ನಿತೀಶ್ ಮಿಶ್ರಾ, ನಿತಿನ್ ನವೀನ್, ರೇಣು ದೇವಿ, ನೀರಜ್ ಕುಮಾರ್ ಬಬ್ಲು, ಸಂಜಯ ಸರವಾಗಿ ಹಾಗು ರಜನೀಶ್ ಕುಮಾರ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ
ಜೆಡಿಯು ಸಂಭಾವ್ಯ ಸಚಿವರು
ವಿಜಯ್ ಕುಮಾರ್ ಚೌಧರಿ, ವಿಜೇಂದ್ರ ಯಾದವ್, ಶ್ರವಣ್ ಕುಮಾರ್, ಅಶೋಕ್ ಚೌಧರಿ, ರತ್ನೇಶ್ ಸದಾ, ಸುನಿಲ್ ಕುಮಾರ್, ಶ್ಯಾಮ್ ರಜಾಕ್, ಜಮಾ ಖಾನ್, ಲೆಸಿ ಸಿಂಗ್ ಹಾಗು ದಾಮೋದರ್ ರಾವತ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡು ನಿರೀಕ್ಷೆ ಇದೆ
ಎನ್ ಡಿಎ ಮೈತ್ರಿಕೂಟದ ಪಾಲುದಾರ ಪಕ್ಷಗಳಾಗಿರುವ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ ಪಕ್ಷದಿಂದ ರಾಜು ತಿವಾರಿ, ಹಿಂದೂಸ್ತಾನಿ ಅವಾಮ್ ಮೋರ್ಚಾದಿಂದ ಸಂತೋಷ್ ಕುಮಾರ್ ಸುಮನ್, ರಾಷ್ಟ್ರೀಯ ಲೋಕ ಮೋರ್ಚಾದಿಂದ
ಸ್ನೇಹಲತಾ ಕುಶ್ವಾಹ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ನಿರೀಕ್ಷೆ ಇದೆ
೨೪೩ ಸದಸ್ಯರ ವಿಧಾನಸಭೆಯಲ್ಲಿ ೨೦೨ ಸ್ಥಾನಗಳನ್ನು ಗೆದ್ದು ಬಿಹಾರದಲ್ಲಿ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದಿದೆ. ಇದರಲ್ಲಿ ಬಿಜೆಪಿ ೮೯, ಜೆಡಿಯು ೮೫, ಎಲ್‌ಜೆ -ಆರ್‍ವಿ ೧೯, ಎಚ್‌ಎಎಂ ೫ ಮತ್ತು ಆರೆಲ್‌ಎಂ ೪ ಸ್ಥಾನ ಗಳಿಸಿದೆ.
ಪ್ರಬಲ ಖಾತೆಗಳಿಗೆ ಪೈಪೋಟಿ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ತನ್ನ ಮಿತ್ರ ಪಕ್ಷವಾದ ಜೆಡಿಯುಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿರುವುದರಿಂದ ೨ ಉಪಮುಖ್ಯಮಂತ್ರಿ ಸ್ಥಾನ, ವಿಧಾನಸಭೆ ಸ್ಪೀಕರ್ ಹಾಗೂ ಪ್ರಬಲ ಖಾತೆಗಳಿಗೆ ಬೇಡಿಕೆಯಿಟ್ಟಿದೆ. ಸ್ಪೀಕರ್ ಸ್ಥಾನದ ಜೊತೆ ಹಣಕಾಸು, ನೀರಾವರಿ, ಲೋಕೋಪಯೋಗಿ, ಇಂಧನದಂತಹ ಪ್ರಬಲ ಖಾತೆಗಳು ಬಿಜೆಪಿ ಪಾಲಾಗಲಿದ್ದು, ಗೃಹ ಖಾತೆ ಜೆಡಿಯುಗೆ ಸಿಗುವ ಸಾಧ್ಯತೆಯಿದ್ದು ಸಚಿವರುಗಳ ಖಾತೆಯ ಸಂಬಂಧ ಮಿತ್ರಪಕ್ಷಗಳ ನಡುವೆ ಮಾತುಕತೆ ನಡೆದಿದ್ದು, ಸಂಜೆಯ ಹೊತ್ತಿಗೆ ಎಲ್ಲವೂ ಅಂತಿಮವಾಗಲಿದೆ.
ನಿತೀಶ್ ರಾಜೀನಾಮೆ ಹಕ್ಕು ಮಂಡನೆ
ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ಇಂದು ರಾಜೀನಾಮೆ ನೀಡಿದ್ದು, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಹೊಸ ಸರ್ಕಾರ ರಚನೆಯವರಿಗೂ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ರಾಜ್ಯಪಾಲ ಅರಿಫ್ ಮೊಹ್ಮದ್ ಖಾನ್ ಸೂಚಿಸಿದ್ದಾರೆ.
ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯುನ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದು, ರಾಜ್ಯಪಾಲರಿಗೆ ಬಿಜೆಪಿ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಬೆಂಬಲದ ಪತ್ರವನ್ನು ಸಲ್ಲಿಸಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
ರಾಜ್ಯಪಾಲರು ಜೆಡಿಯು ಶಾಸಕಾಂಗ ಪಕ್ಷದ ನಾಯಕನಾಗಿ, ಆಯ್ಕೆಯಾಗಿ ಬಿಜೆಪಿ ಎಲ್ ಜೆಪಿ, ಹೆಚ್‌ಎಎಂ, ಆರ್ ಎಲ್‌ಎಂ ಬೆಂಬಲ ಪಡೆದು ಬಹುಮತ ಹೊಂದಿರುವ ನಿತೀಶ್ ಕುಮಾರ್‌ಅನ್ನು ಹೊಸ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ.


































