Home ಮುಖಪುಟ ಸುದ್ದಿ ಬಜೆಟ್‌ನಲ್ಲಿ ಹೊಸ ಅಬಕಾರಿ ನೀತಿ ಘೋಷಣೆ

ಬಜೆಟ್‌ನಲ್ಲಿ ಹೊಸ ಅಬಕಾರಿ ನೀತಿ ಘೋಷಣೆ

ಬೆಂಗಳೂರು, ಮಾ. ೬- ರಾಜ್ಯದಲ್ಲಿ ಮದ್ಯದ ಬೆಲೆಯನ್ನು ನಿಗದಿಗೊಳಿಸುವುದನ್ನು ಸರ್ಕಾರದಿಂದ ಮುಕ್ತಗೊಳಿಸಲಾಗುವುದು. ಈ ಸಂಬಂಧ ಹೊಸ ಅಬಕಾರಿ ನೀತಿಯನ್ನು ಜಾರಿಗೊಳಿಸುವ ಘೋಷಣೆಯನ್ನು ಬಜೆಟ್‌ನಲ್ಲಿ ಮಾಡಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಮಂಡಿಸಿರುವ ಬಜೆಟ್‌ನಲ್ಲಿ ಮುಂದಿನ ೩ ರಿಂದ ೪ ವರ್ಷಗಳಲ್ಲಿ ಎಲ್ಲಾ ಪಾನೀಯಗಳ ಮೇಲೆ ಏಕರೂಪವಾಗಿ ಅನ್ವಯಿಸುವಂತೆ ಪ್ರತಿ ಲೀಟರ್‌ನಲ್ಲಿ ಮದ್ಯದ ಅಂಶವನ್ನು ಆಧರಿಸಿ ಅಬಕಾರಿ ಸುಂಕ ವಿಧಿಸುವ ಪ್ರಕ್ರಿಯೆಗೆ ಹಂತ ಹಂತವಾಗಿ ಪರಿವರ್ತನೆಗೊಳ್ಳಲಾಗುವುದು.

ಹೊಸ ನೀತಿಯಡಿ ಸರ್ಕಾರದಿಂದ ಮದ್ಯದ ಬೆಲೆ ನಿರ್ಧಾರವಾಗುವುದನ್ನು ಮುಕ್ತಗೊಳಿಸಲಾಗುವುದು. ಮಾರುಕಟ್ಟೆ ಪರಿಗಣನೆಗೆ ಆಧಾರದ ಮೇಲೆ ಮದ್ಯ ಉತ್ಪನ್ನಗಳನ್ನು ಸ್ಲ್ಯಾಬ್‌ಗಳಲ್ಲಿ ಇರಿಸುವ ಅಧಿಕಾರವನ್ನು ಸಂಪೂರ್ಣವಾಗಿ ಉತ್ಪಾದಕರಿಗೆ ನೀಡಲಾಗುವುದು. ದರ ನಿಗದಿ ಸ್ಲ್ಯಾಬ್‌ಗಳನ್ನು ತರ್ಕ ಬದ್ಧಗೊಳಿಸುವ ಸಲುವಾಗಿ ಪ್ರಸ್ತುತ ಇರುವ ೧೬ ಸ್ಲ್ಯಾಬ್‌ಗಳನ್ನು ೮ ಸ್ಲ್ಯಾಬ್‌ಗಳಿಗೆ ಇಳಿಸಲಾಗುವುದು ಎಂದು ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.


ತೆರಿಗೆ ಸೋರಿಕೆಯನ್ನು ತಡೆಯಲು ತಂತ್ರಜ್ಞಾನ ಆಧಾರಿತ ಬ್ಲ್ಯಾಕ್‌ಚೈನ್ ಡಿಜಿಟಲ್ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಮದ್ಯ ರವಾನೆಗೆ ಬೆಂಗಾವಲು ವ್ಯವಸ್ಥೆಯ ಬದಲಿಗೆ ಜಿಯೋ-ಪೆನ್ಸುಡ್ ಇ-ಲಾಕ್ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಈ ಕ್ರಮಗಳನ್ನು ರಿಯಲ್ ಟೈಮ್ ಮೇಲ್ವಿಚಾರಣೆಗೆ ಅವಕಾಶ ಕಲ್ಪಿಸುವ ಮೂಲಕ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ ಎಂದು ಅವರು ತಿಳಿಸಿದ್ದಾರೆ.


ಮದ್ಯ ವಲಯದಲ್ಲಿ ಪ್ರವಾಸದ್ಯೋಮವನ್ನು ಉತ್ತೇಜಿಸುವ ಸಲುವಾಗಿ ಡಿಸ್ಟಿಲರಿಗಳು ಮತ್ತು ರಿಟೆಲರ್‌ಗಳು ಪ್ರವಾಸಿಗರು ಮದ್ಯ ಸವಿಯಲು ಹಾಗೂ ತಮ್ಮ ಆವರಣದಲ್ಲಿ ತಯಾರಿಸಿದ್ದನ್ನು ಪ್ರವಾಸಿಗರಿಗೆ ಮಾರಾಟ ಮಾಡಲು ಅವಕಾಶ ನೀಡಲಾಗುವುದು.


೨೦೨೫-೨೬ನೇ ಸಾಲಿನಲ್ಲಿ ಫೆಬ್ರವರಿ ತಿಂಗಳ ಅಂತ್ಯದವರೆಗೆ ಅಬಕಾರಿ ತೆರಿಗೆಯಿಂದ ಒಟ್ಟು ೩೬ ಸಾವಿರದ ೪೯೨ ಕೋಟಿ ರೂ.ಗಳ ರಾಜಸ್ವ ಸ್ವೀಕೃತವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಶೇ. ೧೨.೭ ರಷ್ಟು ಬೆಳವಣಿಗೆಯಾಗಿದೆ. ೨೦೨೬-೨೬ನೇ ಸಾಲಿಗೆ ೪೫ ಸಾವಿರ ಕೋಟಿ ರೂ.ಗಳ ಸಂಗ್ರಹಣ ಗುರಿಯನ್ನು ಅಬಕಾರಿ ಇಲಾಖೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಹೇಳಿದ್ದಾರೆ.


ನೋಂದಣಿ ಮುದ್ರಾಂಕ ಇಲಾಖೆಯಲ್ಲೂ ಕಳೆದ ಸಾಲಿಗಿಂತ ಶೇ. ೧೨.೩ ರಷ್ಟು ಬೆಳವಣಿಗೆಯಾಗಿದ್ದು, ೨೦೨೬-೨೭ನೇ ಸಾಲಿಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ೨೯ ಸಾವಿರ ಕೋಟಿ ರೂ.ಗಳ ರಾಜಸ್ವ ಗುರಿ ನಿಗದಿಪಡಿಸಲಾಗಿದೆ.


ಮೋಟಾರು ವಾಹನ ತೆರಿಗೆಯಲ್ಲೂ ಶೇ. ೮.೫ ರಷ್ಟು ಬೆಳವಣಿಗೆಯಾಗಿದ್ದು, ೨೦೨೬-೨೭ನೇ ಸಾಲಿನಲ್ಲಿ ಸಾರಿಗೆ ಇಲಾಖೆಗೆ ೧೫,೫೦೦ ಕೋಟಿ ರೂ.ಗಳ ತೆರಿಗೆ ಸಂಗ್ರಹ ಗುರಿಯನ್ನು ನಿಗದಿಪಡಿಸಲಾಗಿದೆ.


ಗಣಿಗಾರಿಕೆಯಿಂದ ೨೦೨೬-೨೭ನೇ ಸಾಲಿನಲ್ಲಿ ೧೧ ಸಾವಿರ ಕೋಟಿ ರೂ.ಗಳ ಆದಾಯ ನಿರೀಕ್ಷಿಸಲಾಗಿದೆ.