Home ಮುಖಪುಟ ಸುದ್ದಿ ಹೊಸ ವಿಮಾನಯಾನ ನೀತಿ ಜಾರಿಗೆ ಚಿಂತನೆ

ಹೊಸ ವಿಮಾನಯಾನ ನೀತಿ ಜಾರಿಗೆ ಚಿಂತನೆ

ಬೆಂಗಳೂರು, ಮಾ. ೧೩-ರಾಜ್ಯದಲ್ಲಿ ಹೊಸ ವಿಮಾನಯಾನ ನೀತಿಯನ್ನು ತರಲು ಚಿಂತನೆ ನಡೆದಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ವಿಧಾನಸಭೆಯಲ್ಲಿಂದು ತಿಳಿಸಿದರು.


ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಜನಾರ್ಧನರೆಡ್ಡಿಯವರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ವಿಮಾನ ನಿಲ್ದಾಣಗಳ ನಿರ್ಮಾಣ ಸಂದರ್ಭದಲ್ಲಿ ಸರಿಯಾದ ತೀರ್ಮಾನಗಳನ್ನು ಮಾಡದೆ ಹತ್ತಿರ ಹತ್ತಿರವೇ ವಿಮಾನ ನಿಲ್ದಾಣಗಳನ್ನು ನಿರ್ಮಿಸಿರುವುದು ವಿಮಾನ ನಿಲ್ದಾಣಗಳ ಕಾರ್ಯಾಚರಣೆಗೆ ಸಂಕಷ್ಟ ತಂದಿದೆ. ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಪ್ರದೇಶದಲ್ಲಿ ವಿಮಾನ ನಿಲ್ದಾಣ ಮಾಡಿದರೆ ಸೂಕ್ತ ಎಂಬುದನ್ನು ಅರಿತು ತೀರ್ಮಾನಗಳನ್ನು ಮಾಡುವ ಅಗತ್ಯವಿದೆ ಎಂದು ಹೇಳಿದರು.


ವಿಮಾನ ನಿಲ್ದಾಣಗಳ ನಿರ್ಮಾಣ, ಕಾರ್ಯಾಚರಣೆಗೆ ಸಂಬಂಧಿಸಿದಂತೆ ವಿಮಾನಯಾನ ನೀತಿಯನ್ನು ತರುವ ಚಿಂತನೆಯೂ ಇದೆ ಎಂದರು.


ರಾಜ್ಯದಲ್ಲಿ ಈಗ ಹಲವು ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದೇವೆ. ಆದರೆ ವಿಮಾನ ನಿಲ್ದಾಣ ನಿರ್ಮಾಣವಾದ ೩-೪ ವರ್ಷಗಳಲ್ಲಿ ನಿಲ್ದಾಣಗಳು ಬಂದ್ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೀದರ್, ಕಲ್ಬುರ್ಗಿ, ಶಿವಮೊಗ್ಗ ವಿಮಾನ ನಿಲ್ದಾಣಗಳು ಇಂಥ ಸಂಕಷ್ಟ ಎದುರಿಸುತ್ತಿವೆ. ಇದಕ್ಕೆ ಕಾರಣ ಉಡಾನ್ ಯೋಜನೆ ೩ ವರ್ಷಕ್ಕೆ ಪೂರ್ಣಗೊಂಡ ನಂತರ ವಿಮಾನ ಕಾರ್ಯಾಚರಣೆಗಳಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಉಡಾನ್ ಯೋಜನೆಯನ್ನು ೩ ರಿಂದ ೫ ವರ್ಷಕ್ಕೆ ವಿಸ್ತರಿಸುವಂತೆ ಕೇಂದ್ರಕ್ಕೂ ಮನವಿ ಮಾಡಿದ್ದೇವೆ. ಜತೆಗೆ ೫ ವರ್ಷದ ನಂತರ ಉಡಾಣ್ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ. ೫೦ ರಷ್ಟು ಖರ್ಚು-ವೆಚ್ಚದ ಹಂಚಿಕೆ ಆಧಾರದ ಮೇಲೆ ಮುಂದುವರೆಸಬೇಕು ಎಂಬ ಆಗ್ರಹವನ್ನು ಇಟ್ಟಿದ್ದೇವೆ ಎಂದು ಅವರು ಹೇಳಿದರು.


ವಿಮಾನ ನಿಲ್ದಾಣ ಆರಂಭವಾದ ೩ ವರ್ಷಗಳ ನಂತರ ನಿಲ್ದಾಣ ಬಂದ್ ಆಗುತ್ತಿರುವುದು ರಾಜ್ಯಕ್ಕೆ ಮಾತ್ರ ಸೀಮಿತವಲ್ಲ. ದೇಶದ ಎಲ್ಲೆಡೆಯೂ ಈ ರೀತಿಯ ಸಮಸ್ಯೆ ಇದೆ. ಹಾಗಾಗಿಯೇ ನಾವು ಬೀದರ್ ಮತ್ತು ಕಲ್ಬುರ್ಗಿ ವಿಮಾನ ನಿಲ್ದಾಣವನ್ನು ಕೆಕೆಆರ್‌ಡಿಬಿ ಅನುದಾನದಲ್ಲಿ ನಿರ್ವಹಿಸುತ್ತಿದ್ದೇವೆ. ಬೇರೆ ವಿಮಾನ ನಿಲ್ದಾಣಕ್ಕೂ ಸ್ಥಳೀಯವಾಗಿ ಹಣ ಒದಗಿಸುವ ಅಗತ್ಯವೂ ಇದೆ ಎಂದು ಅವರು ಹೇಳಿ, ಈ ಎಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ವಿಮಾನಯಾನ ನೀತಿಯನ್ನು ಜಾರಿ ಮಾಡುವ ಚಿಂತನೆಯೂ ಇದೆ ಎಂದು ಹೇಳಿದರು.


ಬಳ್ಳಾರಿಯಲ್ಲಿ ವಿಮಾನ ನಿಲ್ದಾಣಕ್ಕೆ ಗುರುತಿಸಿರುವ ಜಾಗವನ್ನು ಹೊರತುಪಡಿಸಿ ಸುಮಾರು ೨೦ ಕಿ.ಮೀ. ದೂರದಲ್ಲಿ ಬಳ್ಳಾರಿ, ಕೊಪ್ಪಳ, ವಿಜಯನಗರ ಮೂರು ಜಿಲ್ಲೆಗಳಿಗೆ ಅನುಕೂಲವಾಗುವ ಸ್ಥಳದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಇದಕ್ಕಾಗಿ ೨ ಕಡೆ ಸ್ಥಳವನ್ನು ಗುರುತು ಮಾಡಿದ್ದೇವೆ.

ಎಲ್ಲ ಸಾಧಕ-ಬಾಧಕಗಳನ್ನು ನೋಡಿಕೊಂಡು ಬಳ್ಳಾರಿಯಲ್ಲಿ ಎಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಈ ಮೂರು ಜಿಲ್ಲೆಗಳ ಜನಪ್ರತಿನಿಧಿಗಳ ಸಭೆ ಕರೆದು ತೀರ್ಮಾನ ಕೈಗೊಳ್ಳುವುದಾಗಿಯೂ ಸಚಿವ ಎಂ.ಬಿ. ಪಾಟೀಲ್ ಹೇಳಿದರು.