Home ಜಿಲ್ಲೆ ರಾಜ್ಯ ಆಡಳಿತದಲ್ಲಿ ನಿರ್ಲಕ್ಷ್ಯ ಹೆಚ್ಚಳ: ಜನರ ಪ್ರಶ್ನೆಗಳಿಗೆ ಉತ್ತರವೇ ಇಲ್ಲ : ಶ್ರೀಧರ ಸಾಹುಕಾರ ಕಿಡಿ

ರಾಜ್ಯ ಆಡಳಿತದಲ್ಲಿ ನಿರ್ಲಕ್ಷ್ಯ ಹೆಚ್ಚಳ: ಜನರ ಪ್ರಶ್ನೆಗಳಿಗೆ ಉತ್ತರವೇ ಇಲ್ಲ : ಶ್ರೀಧರ ಸಾಹುಕಾರ ಕಿಡಿ

ಯಾದಗಿರಿ:ಮಾ.೧೮: ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಜನಸಾಮಾನ್ಯರ ನಿರೀಕ್ಷೆಗಳನ್ನು ಈಡೇರಿಸಲು ವಿಫಲವಾಗುತ್ತಿದೆ ಎಂದು ಬಿಜೆಪಿ ಯುವ ಘಟಕದ ಜಿಲ್ಲಾಧ್ಯಕ್ಷ ಶ್ರೀಧರ ಸಾಹುಕಾರ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು ತಿಳಿಸಿದ್ದಾರೆ, ವಿಧಾನಸಭೆ ಅಧಿವೇಶನವು ಜನರ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ವೇದಿಕೆಯಾದರೂ, ಇತ್ತೀಚಿನ ದಿನಗಳಲ್ಲಿ ಅದೇ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ. ಸಚಿವರು ಸಭೆಗೆ ಗೈರು ಹಾಜರಾಗುವುದು, ಅಧಿಕಾರಿಗಳು ಸಮರ್ಪಕ ಮಾಹಿತಿಯನ್ನು ಒದಗಿಸದಿರುವುದು ಆಡಳಿತದ ಅಸಮರ್ಪಕತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ರಾಜ್ಯದ ನಾಯಕತ್ವದಲ್ಲಿ ಸ್ಪಷ್ಟ ದಿಕ್ಕು ಕಾಣಿಸುತ್ತಿಲ್ಲ. ಆಡಳಿತಕ್ಕಿಂತ ರಾಜಕೀಯ ಪ್ರಾಬಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂಬ ಟೀಕೆ ವ್ಯಕ್ತಪಡಿಸಿದ ಅವರು, ಇದರ ಪರಿಣಾಮವಾಗಿ ಜನರ ಸಮಸ್ಯೆಗಳು ಬಗೆಹರಿಯದೆ ಉಳಿಯುತ್ತಿವೆ ಎಂದು ಅಭಿಪ್ರಾಯಪಟ್ಟರು.

ಸರ್ಕಾರದ ಕಾರ್ಯವೈಖರಿಯಿಂದ ಅಭಿವೃದ್ಧಿ ಯೋಜನೆಗಳು ನಿಧಾನಗತಿಯಲ್ಲಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಮುಂದುವರಿದಿದೆ. ಇದರಿಂದ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚುತ್ತಿದೆ ಎಂದು ಹೇಳಿದರು.

ಭ್ರಷ್ಟಾಚಾರದ ಆರೋಪಗಳು ಹೆಚ್ಚುತ್ತಿರುವುದು ಕೂಡ ಆಡಳಿತದ ಮೇಲೆ ಜನರ ನಂಬಿಕೆಯನ್ನು ಕುಗ್ಗಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಪಾರದರ್ಶಕತೆ ಕೊರತೆಯಿದ್ದು, ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ಸೂಚಿಸಿದರು.

ಸರ್ಕಾರ ಜನಪರ ಆಡಳಿತ ನೀಡಲು ವಿಫಲವಾದರೆ, ಮುಂದಿನ ದಿನಗಳಲ್ಲಿ ಜನರು ತಮ್ಮ ನಿರ್ಣಯದ ಮೂಲಕ ಸ್ಪಷ್ಟ ಸಂದೇಶ ನೀಡಲಿದ್ದಾರೆ ಎಂದು ಶ್ರೀಧರ ಸಾಹುಕಾರ ಎಚ್ಚರಿಸಿದರು.