
ನವಲಗುಂದ,ಮಾ15 : ಪಟ್ಟಣದಲ್ಲಿರುವ ನ್ಯಾಯಾಲಯಗಳ ಸಂಕೀರ್ಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮಕ್ಕೆ ಹಿರಿಯ ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುನಾಥ.ಪಿ.ಪಾನಘಂಟಿ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಕಕ್ಷಿದಾರರು ತಮ್ಮ ವಿವಾದಗಳನ್ನು ಸೌಹಾರ್ದ ಮತ್ತು ತ್ವರಿತವಾಗಿ ಪರಿಹರಿಸಿಕೊಳ್ಳಲು ಲೋಕ ಅದಾಲತ್ ಸಹಾಯವಾಗಿದೆ ಎಂದರು.
ಅಪರಾದ ಚೆಕ್ ಬೌನ್ಸ, ಹಣ ವಸೂಲಾತಿ, ಮೋಟಾರು ವಾಹನ,ಸಿವಿಲ್, ಜನನ ನೋಂದಣಿ, ಲಘು ಪ್ರಕರಣ, ಪೂರ್ವ ವಾಜ್ಯ ಪ್ರಕರಣಗಳು ಸೇರಿದಂತೆ, ವಿವಿಧ ಒಟ್ಟು 918 ಪ್ರಕರಣಗಳಲ್ಲಿ 706 ಪ್ರಕರಣಗಳು ಇತ್ಯರ್ಥಗೊಳಿಸಲಾಗಿದೆ.
ರಾಜಿ ಸಂಧಾನದ ಮೂಲಕ ವಿವಾದವನ್ನು ಇತ್ಯರ್ಥಪಡಿಸುವ ಮೂಲಕ ಪ್ರಕರಣಗಳು ಸುಖಾಂತ್ಯಗೊಳ್ಳುವ ಮಾನವ ಸಂಬಂಧಗಳನ್ನು ಬೆಸೆಯುವಲ್ಲಿ ಲೋಕ ಅದಾಲಾತ್ ಸಹಕಾರಿಯಾಗಿದೆ. ಆ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿದ್ದೇ ಆದಲ್ಲಿ ಕಕ್ಷಿದಾರರು ವಿನಾಕಾರಣ ನ್ಯಾಯಾಲಯಕ್ಕೆ ಅಲೆದಾಡುವುದು ತಪ್ಪಲಿದೆ. ಸಮಯ ಮತ್ತು ಹಣ ಉಳಿತಾಯವಾಗಲಿದೆ ಎಂದರು.
ಇಂದಿನ ದಿನಗಳಲ್ಲಿ ವ್ಯಾಜ್ಯಗಳು ಸರ್ವೇ ಸಾಮಾನ್ಯ, ಆದರೆ ಕಕ್ಷಿದಾರರು ಆದಷ್ಟು ನ್ಯಾಯಾಲಯಕ್ಕೆ ಬರುವುದನ್ನು ಕಡಿಮೆ ಮಾಡಬೇಕು. ರಾಜಿ ಮಾಡುವ ಮೂಲಕ ಅನೇಕ ಸಮಸ್ಯೆಗಳು, ವ್ಯಾಜ್ಯಗಳನ್ನು ಇತ್ಯರ್ಥ ಪಡಿಸಬಹುದು. ಈ ಉದ್ದೇಶದಿಂದಲೇ ಲೋಕ ಅದಾಲತ್ ಅನ್ನು ನಡೆಸಲಾಗುತ್ತಿದೆ. ಕಕ್ಷಿದಾರರಿಗೆ ಶೀಘ್ರ ನ್ಯಾಯ ಒದಗಿಸಲು ಮತ್ತು ಅವರ ಸಮಯ, ಸಂಬಂಧ, ಹಣ ಉಳಿಸಲು ಲೋಕ ಅದಾಲತ್ ನಲ್ಲಿ ರಾಜಿಸೂತ್ರದ ಮೂಲಕ ಪ್ರಕರಣ ಇತ್ಯರ್ಥಪಡಿಸಲಾಗುತ್ತಿದೆ ಎಂದರು.
ಸಿವಿಲ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ನವೀನ ಎಫ್ ಡಿಸೋಜ, ಸಹಾಯಕ ಸರ್ಕಾರಿ ಅಭಿಯೋಜಕರಾದ ಆನಂದ ಮುರಾಳ, ನ್ಯಾಯವಾದಿ ಪಿ.ಸಿ.ಹಿರೇಮಠ, ಎಸ್.ಎಸ್ .ಸೋಮನಕಟ್ಟಿ, ವಿ ಟಿ ಕುಲಕರ್ಣಿ, ವಿ ಪಿ ಪಾಟೀಲ, ಪಿ ಎಚ್ ಕೋನರಡ್ಡಿ, ಅದಾಲತನಲ್ಲಿ ಭಾಗವಹಿಸಿದ್ದರು.



























