
ಮೈಸೂರು: ಸೆ.೨೨:- ವಿಶ್ವದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ, ನಾಡಿನ ಕಲೆ, ಸಂಸ್ಕೃತಿ, ಪರಂಪರೆ, ಇತಿಹಾಸ ಬಿಂಬಿಸುವ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ. ಈ ಮೂಲಕ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ೧೧ ದಿನಗಳ ಕಾಲ ದಸರಾ ವೈಭವ ಕಳೆಗಟ್ಟಲಿದೆ.
ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಅಗ್ರಪೂಜೆ ಸಲ್ಲಿಸುವ ಮೂಲಕ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಬೆಳಗ್ಗೆ ೧೦.೧೦ರಿಂದ ೧೦.೪೦ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ದಸರಾ ಉದ್ಘಾಟಕಿ ಬಾನು ಮುಷ್ತಾಕ್ ಹಾಗೂ ಗಣ್ಯರನ್ನು ಬೆಳಗ್ಗೆ ಚಾಮುಂಡಿಬೆಟ್ಟದಲ್ಲಿ ನಂದಿಧ್ವಜ, ಮಂಗಳವಾದ್ಯ, ವೀರಗಾಸೆ, ತಮಟೆ, ನಗಾರಿ ಮೇಳ ಮುಂತಾದ ಜಾನಪದ ತಂಡಗಳ ಮೆರವಣಿಗೆಯ ಮೂಲಕ ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತ್ತು. ನಂತರ ಪೂರ್ಣಕುಂಭ ಸ್ವಾಗತ ನೀಡಿದ ಬಳಿಕ ಚಾಮುಂಡಿಬೆಟ್ಟದಲ್ಲಿ ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಸೇರಿದಂತೆ ಸಚಿವರ ಉಪಸ್ಥಿತಿಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿದೇವಿಯ ಅಗ್ರ ಪೂಜೆ ನಡೆಸಲಾಯಿತು. ದೇವಿಗೆ ವಿಶೇಷ ಪೂಜೆ ನಂತರ ವಿಶೇಷ ವೇದಿಕೆಯಲ್ಲಿ ಬೆಳ್ಳಿರಥದಲ್ಲಿ ವಿರಾಜಮಾನವಾಗಿರುವ ಚಾಮುಂಡೇಶ್ವರಿಗೆ ಪುಷ್ಪಾರ್ಚನೆಗೈಯ್ಯುವ ಮೂಲಕ ದಸರಾ ಮಹೋತ್ಸವವನ್ನು ಬಾನು ಮುಷ್ತಾಕ್ ವಿದ್ಯುಕ್ತವಾಗಿ ಉದ್ಘಾಟಿಸಿದರು.
ಈ ಬಾರಿ ೧೧ ದಿನಗಳ ಕಾಲ ನಡೆಯುವ ವೈಭವದ ದಸರಾ ಉತ್ಸವಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ನವವಧುವಿನಂತೆ ಸಜ್ಜಾಗಿದ್ದು, ಈ ಬಾರಿ ದಸರಾ ಉದ್ಘಾಟಕರ ವಿವಾದ ಹೊರತು ಪಡಿಸಿದರೆ ಉಳಿದಂತೆ ದಸರೆ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲು ಎಲ್ಲಾ ರೀತಿಯಲ್ಲೂ ಸಿದ್ಧತೆ ಭರ್ಜರಿಯಾಗಿಯೇ ನಡೆಯಲಿದೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಸಚಿವರಾದ ಕೆ.ವೆಂಕಟೇಶ್, ಹೆಚ್.ಕೆ.ಪಾಟೀಲ್, ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ, ಅನೀಲ್ ಚಿಕ್ಕಮಾದು, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ, ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಕೆ.ಆರ್.ರಕ್ಷಿತ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಶಾಸಕ ಜಿ.ಟಿ.ದೇವೇಗೌಡ ಅಧ್ಯಕ್ಷತೆ ವಹಿಸಿದ್ದರು.
ನವವಧುವಿನಂತೆ ಕಂಗೊಳಿಸುತ್ತಿದೆ ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರು ನವವಧುವಿನಂತೆ ಸಿಂಗಾರಗೊಂಡಿದ್ದು, ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯಲು ಸಜ್ಜಾಗಿದೆ. ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಸೇರಿದಂತೆ ಜಂಬೂಸವಾರಿ ಸಾಗುವ ರಾಜಮಾರ್ಗ, ನಗರದ ಪ್ರಮುಖ ರಸ್ತೆಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿವೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಾದ ಫಲಪುಷ್ಪ ಪ್ರದರ್ಶನ, ಆಹಾರ ಮೇಳ, ರೈತ ದಸರಾ, ಸಾಂಸ್ಕೃತಿಕ ಕಾರ್ಯಕ್ರಮ, ಕುಸ್ತಿ ಪಂದ್ಯಾವಳಿ, ಮಹಿಳಾ ದಸರಾ, ದಸರಾ ಪುಸ್ತಕ ಮೇಳ, ರಾಜ್ಯ ದಸರಾ ಕ್ರೀಡಾಕೂಟ, ರಂಗಾಯಣ ನಾಟಕೋತ್ಸವ, ವಸ್ತುಪ್ರದರ್ಶನ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಉದ್ಘಾಟನೆಗೊಂಡು ಸಾರ್ವಜನಿಕರನ್ನು ರಂಜಿಸಲಿವೆ. ಈ ಮೂಲಕ ೧೧ ದಿನಗಳ ಕಾಲ ಮೈಸೂರು ನವರಾತ್ರಿ ಸಂಭ್ರಮದಲ್ಲಿ ಮಿಂದೇಳಲಿದೆ.
ಚಾಮುಂಡಿ ತಾಯಿಯ ಸೀರೆ ಪಡೆದ ಮುಷ್ತಾಕ್:
ದಸರಾ ಉದ್ಘಾಟನೆಗೆ ಆಗಮಿಸಿದ ಬಾನು ಮುಷ್ತಾಕ್ ಚಾಮುಂಡಿ ತಾಯಿಯ ದರ್ಶನ ಪಡೆದು ಮಂಗಳಾರತಿ ಸ್ವೀಕರಿಸಿದರು.
ಹಸಿರು ಬಾರ್ಡರ್ ಇರುವ ಹಳದಿ ಮೈಸೂರು ರೇಷ್ಮೆ ಸೀರೆ, ತಲೆಗೆ ಮೈಸೂರು ಮಲ್ಲಿಗೆ ಮುಡಿದು ಬಾನು ಮುಷ್ತಾಕ್ ದೇವಸ್ಥಾನಕ್ಕೆ ಆಗಮಿಸಿದರು. ಗರ್ಭಗುಡಿ ಮುಂಭಾಗದ ಆವರಣದಲ್ಲಿ ನಿಂತು ತಾಯಿ ಚಾಮುಂಡಿ ದರ್ಶನ ಪಡೆದರು. ನಂತರ ಗಣಪತಿಗೆ ಕೈ ಮುಗಿದು, ಮಂಗಳಾರತಿ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.
ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಇಡೀ ಕುಟುಂಬವೇ ಹಾಜರಾಗಿದ್ದು ವಿಶೇಷ ಖಾಸಗಿ ಹೋಟೆಲಿನಿಂದ ಕಾರಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಬಾನು ಮುಷ್ತಾಕ್ ಆಗಮಿಸಿದರೆ ಸಿಎಂ ಮತ್ತು ಸಚಿವರು ಐರಾವತ ಬಸ್ಸಿನಲ್ಲಿ ಆಗಮಿಸಿದರು.
ಹತ್ತು ಹಲವು ಕಾರ್ಯಕ್ರಮ:
ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಬೆಟ್ಟದಲ್ಲಿ ದಸರಾ ಉದ್ಘಾಟನೆಯಾಗುತ್ತಿದ್ದಂತೆ ನಗರದ ವಿವಿಧ ವೇದಿಕೆಗಳಲ್ಲಿ ದಸರಾ ಅಂಗವಾಗಿ ನಡೆಯುವ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಮೊದಲ ದಿನವಾದ ಸೋಮವಾರ ಕುಪ್ಪಣ್ಣ ಪಾರ್ಕ್‌ನಲ್ಲಿ ಫಲಪುಷ್ಪ ಪ್ರದರ್ಶನ, ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ, ಕಾವಾ ಕಾಲೇಜಿನಲ್ಲಿ ಚಿತ್ರಕಲಾ ಶಿಬಿರ, ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಪುಸ್ತಕ ಮೇಳ, ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ದಸರಾ ಸಿಎಂ ಕಪ್ ಕ್ರೀಡಾಕೂಟ, ಜೆ.ಕೆ.ಮೈದಾನದಲ್ಲಿ ಯೋಗ ದಸರಾ, ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಹಸಿರು ಚಪ್ಪರದಲ್ಲಿ ದಸರಾ ವಿದ್ಯುತ್ ದೀಪಾಲಂಕಾರ, ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರದ ಆವರಣದಲ್ಲಿ ವಸ್ತುಪ್ರದರ್ಶನ ಹಾಗೂ ಅರಮನೆ ಆವರಣದ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಬಿಗಿ ಪೊಲೀಸ್ ಭದ್ರತೆ:
ದಸರಾ ಉದ್ಘಾಟಕಿಯಾಗಿ ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಆಯ್ಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಅವರು ಕನ್ನಡಾಂಬೆ ಕುರಿತು ನೀಡಿದ್ದ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರತಿಪಕ್ಷಗಳು ಸೇರಿದಂತೆ, ಸಾರ್ವಜನಿಕರು ಅವರ ಆಯ್ಕೆಯನ್ನು ವಿರೋಧಿಸಿದ್ದರಲ್ಲದೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆದರೆ, ನ್ಯಾಯಾಲಯ ಅರ್ಜಿ ವಜಾ ಮಾಡಿ ಅವರ ಆಯ್ಕೆಯನ್ನು ಸಮರ್ಥಿಸಿದ್ದರೂ ವಿರೋಧ ಮುಂದುವರಿದಿದೆ. ಹೀಗಾಗಿ ದಸರಾ ಉದ್ಘಾಟನಾ ಕಾರ್ಯಕ್ರಮದ ವೇಳೆ ಸಾರ್ವಜನಿಕರು ಅನಿರೀಕ್ಷಿತವಾಗಿ ಪ್ರತಿಭಟನೆ, ಗಲಾಟೆ ಮಾಡುವ ನಿರೀಕ್ಷೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದೆ. ಬೆಟ್ಟದ ಎಲ್ಲಾ ದ್ವಾರಗಳಲ್ಲೂ ಪೊಲೀಸರನ್ನು ನಿಯೋಜಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.