ಒಗ್ಗಟ್ಟು ಪ್ರದರ್ಶಿಸಿದ ನಾರಾಯಣಸ್ವಾಮಿ-ಅನಿಲ್ ಕುಮಾರ್

ಕೋಲಾರ,ಅ,೨೧- ಕಳೆದ ಕೆಲವು ತಿಂಗಳುಗಳಿಂದ ಹಾವು ಮುಂಗುಸಿಗಳಂತೆ ಕಿತ್ತಾಡುತ್ತಿದ್ದ ಶಾಸಕರಾದ ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಕೋಲಾರದ ಕೊತ್ತೂರು ಮಂಜುನಾಥ್ ಮತ್ತು ಎಂಎಲ್ಸಿ ಅನಿಲ್ ಕುಮಾರ್ ಒಂದುಗೂಡಿದ್ದ ಪ್ರಸಂಗ ನಡೆದಿದೆ.


ಮುಂದಿನ ತಿಂಗಳು ನಡೆಯುವ ಮಗಳ ಮದುವೆ ಆಹ್ವಾನ ಪತ್ರಿಕೆ ನೀಡುವ ಕಾರ್ಯದಲ್ಲಿ ತೊಡಗಿರುವ ಶಾಸಕ ನಗರದ ಕನಕ ಬ್ಯಾಸ್ಕೆಟ್ಬಾಲ್ ಕ್ಲಬ್‌ನಿಂದ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಕೊತ್ತೂರು ಮಂಜುನಾಥ್‌ರನ್ನು ಹುಡುಕಿ ಬಂದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಗಳ ಮದುವೆ ಆಹ್ವಾನ ಪತ್ರಿಕೆ ನೀಡಿದರು.


ಈ ವೇಳೆ ಶಾಸಕರಿಬ್ಬರೂ ಆತ್ಮೀಯವಾಗಿ ವರ್ತಿಸಿದರು. ತಪ್ಪದೇ ಮಗಳ ಮದುವೆಗೆ ಬರಬೇಕು ಎಂದು ನೀಡಿದ ಅಹ್ವಾನಕ್ಕೆ ಕೊತ್ತೂರು ಏನಾದರೂ ಕೆಲಸ ಇದ್ದರೆ ಹೇಳಿ ಎಂದು ತೆಲುಗಿನಲ್ಲಿ ಕೇಳಿದಾಗ ನೀವು ಮದುವೆಗೆ ಬರೋದೇ ದೊಡ್ಡ ಕೆಲಸ ಎಂದು ನಾರಾಯಣಸ್ವಾಮಿ ಹೇಳಿದಾಗ ಖಂಡಿತ ಬರ್ತೀವಿ ಸರ್ ಎಂದು ಅನಿಲ್ ಕುಮಾರ್ ಆಶ್ವಾಸನೆ ನೀಡಿದರು.


ನಾರಾಯಣಸ್ವಾಮಿ ಹೊರಟಾಗ ಶಾರದಾ ಟಾಕೀಸ್ ಮುಖ್ಯ ರಸ್ತೆಯಲ್ಲಿದ್ದ ಕಾರಿನವರೆಗೂ ಬಂದು ಬಿಟ್ಟು ಹೋದ ಮಂಜುನಾಥ್ ಕೈಮುಗಿದರು.


ಪತ್ರಕರ್ತರ ಕೋರಿಕೆ ಮೇಲೆ ಗ್ರೂಪ್ ಫೋಟೋಗೆ ಫೋಸ್ ಸಹ ನೀಡಿದರು. ಈ ಫೋಟೋ ಇವರಿಗೆ ಬಹಳ ಮುಖ್ಯ ಎಂದು ಕೊತ್ತೂರು ಹೇಳಿದಾಗ ನಾವು ಎಲ್ಲರೂ ಒಂದೇ ಪಕ್ಷದವರು ರಾಜಕೀಯದಲ್ಲಿ ಆಗಾಗ ಸಣ್ಣಪುಟ್ಟ ವಿಚಾರ ಬರೋದು ಸಹಜ ಬಿಡಪ್ಪ ಎಂದು ಶಾಸಕ ನಾರಾಯಣಸ್ವಾಮಿ ಹೇಳಿದರು.

ಕೋಮುಲ್ ವಿಚಾರವೂ ಬಂತು
ಮದುವೆ ಆಮಂತ್ರಣ ಪತ್ರಿಕೆ ನೀಡಲು ಬಂದಿದ್ದ ವೇಳೆ ಕೋಮುಲ್ ವಿಚಾರ ಸಹ ಪರೋಕ್ಷವಾಗಿ ಪ್ರಸ್ತಾಪವಾಯಿತು. ಕ್ರೀಡಾಪಟು ಒಬ್ಬರನ್ನು ಉದ್ದೇಶಿಸಿ ನಾರಾಯಣಸ್ವಾಮಿ ಹುತ್ತೂರು ಬಳಿ ಕ್ರಿಕೆಟ್ ಸ್ಟೇಡಿಯಂ ಕೆಲಸ ಹಾಗೆ ಉಳಿಸಿ ಬಿಟ್ರಲ್ಲ ಎಂದು ಪ್ರಶ್ನಿಸಿದರು.


ಅದಕ್ಕೆ ಕೊತ್ತೂರು ನೀವು ಅದರ ಬಗ್ಗೆ ಏನೇನೋ ಮಾಡ್ತಾ ಇದ್ದೀರಿ, ನಾನೇನು ಅದರ ಬಗ್ಗೆ ಜಾಸ್ತಿ ಮಾತಾಡಲ್ಲ ಎಂದು ಹೇಳಿದರು.


ಅದಕ್ಕೆ ಪ್ರತಿಕ್ರಿಯಿಸಿದ ಎಸ್ ಎನ್ ಸ್ಟೇಡಿಯಂ ವಿಚಾರದಲ್ಲಿ ನನ್ನದೇನೂ ತಕರಾರು ಇಲ್ಲ ಎಂದು ಹೇಳಿದರು.


ಹುತ್ತೂರು ಬಳಿ ಕೋಮುಲ್ ನಿರ್ಮಿಸಿರುವ ಸೋಲಾರ್ ಘಟಕದ ವಿಚಾರದಲ್ಲಿ ಎಸ್ ಎನ್ ಭಾರಿ ವಿರೋಧ ಮತ್ತು ಟೀಕಾಪ್ರಹಾರ ನಡೆಸುತ್ತಿರುವುದು ಗಮನಾರ್ಹ.