
ಬೆಂಗಳೂರು,ಮಾ.೨೨- ಎಂಜಿ ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ನಿನ್ನೆ ಮುಂಜಾನೆ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ ಅಪಾಯಕಾರಿ ಚಾಲನೆ ಮಾಡಿ ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಜಾನೆ ೨ ಗಂಟೆ ಸುಮಾರಿಗೆ ಲಾಂಬೊರ್ಗಿನಿ ಕಾರು ಅನಿಲ್ ಕುಂಬ್ಳೆ ವೃತ್ತದ ಬಳಿ ಬಂದಿತ್ತು. ಈ ವೇಳೆ ಕಾರು ಡ್ರಿಫ್ಟಿಂಗ್ ಮಾಡಿದೆ. ಇದನ್ನು ಕಂಡು ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಮಾಹಿತಿ ಆಧರಿಸಿ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಸಿಟಿವಿ ಪರಿಶೀಲನೆ ವೇಳೆ ಕೆಎ-೦೫ ಎನ್ ಆರ್ ೦೦೦೯ ನಂಬರ್??ನ ಲ್ಯಾಂಬೋರ್ಗಿನಿ ಕಾರು ಎಂಬುದು ಪತ್ತೆಯಾಗಿ ಅದನ್ನು ವಶಪಡಿಸಿಕೊಳ್ಳಲಾಗಿದೆ.
ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕಾರು ಡ್ರಿಫ್ಟಿಂಗ್ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ರಿಕ್ಕಿ ರೈಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಅಲ್ಲದೇ ಕಾರಿನ ದಾಖಲೆಗಳು ಯಾರ ಹೆಸರಿನಲ್ಲಿವೆ ಎಂದು ಪರಿಶೀಲಿಸಲು ಆರ್‌ಟಿಒಗೆ ಪೊಲೀಸರು ಪತ್ರ ಬರೆದಿದ್ದಾರೆ.ಚಾಲಕನ ವಿರುದ್ಧ ಅಜಾಗರೂಕತೆ ಹಾಗೂ ಅಪಾಯಕಾರಿ ಚಾಲನೆಯಡಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪಶ್ಚಿಮ ವಿಭಾಗದ ಸಂಚಾರ ಪ್ರಭಾರ ಡಿಸಿಪಿ ಸಾಹಿಲ್ ಬಾಂಗ್ಲಾ ಪ್ರತಿಕ್ರಿಯಿಸಿ, ಬೆಳಗಿನಜಾವ ೨ ರಿಂದ ೩ಗಂಟೆ ಸುಮಾರಿಗೆ ಕಾರು ಡ್ರಿಫ್ಟಿಂಗ್ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸದ್ಯ ಕಾರಿನ ಮಾಲೀಕರು ಯಾರು ಎಂಬುದರ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಅಪಾಯಕಾರಿಯಾಗಿ ವಾಹನ ಚಾಲನೆ ಮಾಡುವಂತಿಲ್ಲ. ಪ್ರಕರಣ ಸಂಬಂಧ ಆರ್.ಸಿ ರದ್ದು ಮಾಡಲು ಆರ್‌ಟಿಒಗೆ ಪತ್ರ ಬರೆದು ಶಿಫಾರಸು ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದ್ಧಾರೆ.
ಏನಿದು ಕಾರ್ ಡ್ರಿಫ್ಟಿಂಗ್
ಕಾರ್ ಡ್ರಿಫ್ಟಿಂಗ್ ಎಂಬುದು ವಾಹನದ ಹಿಂದಿನ ಚಕ್ರಗಳ ಹಿಡಿತವನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿ, ತಿರುವುಗಳಲ್ಲಿ ನಿಯಂತ್ರಿತ ರೀತಿಯಲ್ಲಿ ಜಾರುವಂತೆ ಮಾಡುವ ಸಾಹಸಮಯ ಚಾಲನಾ ತಂತ್ರವಾಗಿದೆ.
ಈ ಕಲೆಗೆ ಹೆಚ್ಚಿನ ಕೌಶಲ್ಯದ ಅಗತ್ಯವಿದೆ. ವೇಗ, ನಿಯಂತ್ರಣ ಮತ್ತು ಕೌಶಲ್ಯವನ್ನು ಪ್ರದರ್ಶಿಸುವ ಮೋಟಾರ್‌ಸ್ಪೋರ್ಟ್ ಆಗಿದೆ.































