ಕೇರಳಕ್ಕೆ ಮುರ್ಮು: ವ್ಯಾಪಕ ಭದ್ರತೆ

ತಿರುವನಂತಪುರಂ (ಕೇರಳ),ಅ.೨೧: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದಿನಿಂದ ನಾಲ್ಕು ದಿನಗಳ ಕಾಲ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಭೇಟಿ ನೀಡಲಿರುವ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.


ಸಂಜೆ ವೇಳೆಗೆ ಕೇರಳಕ್ಕೆ ಆಗಮಿಸಲಿರುವ ಅವರು, ವಿಮಾನ ನಿಲ್ದಾಣದಿಂದ ರಾಷ್ಟ್ರಪತಿ ಅವರು ಹೋಗುವ ಮಾರ್ಗದಲ್ಲಿ ಮಧ್ಯಾಹ್ನ ೩ ಗಂಟೆಯಿಂದ ನಗರದಾದ್ಯಂತ ಸಂಚಾರ ನಿರ್ಬಂಧಗಳು ಮತ್ತು ನಿಯಮಗಳು ಜಾರಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.


ಬುಧವಾರ ಪತ್ತನಂತಿಟ್ಟುವಿನಲ್ಲಿರುವ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಜೊತೆಗೆ ಆರತಿ ಸೇವೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನದ ಹಿನ್ನೆಲೆಯಲ್ಲಿ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಡಿಬಿ) ತಿಳಿಸಿದೆ.


ಅಯ್ಯಪ್ಪ ಸ್ವಾಮಿ ದೇಗುಲ ಸಾಗುವ ರಸ್ತೆ ಮತ್ತು ಸಾಂಪ್ರದಾಯಿಕ ಚಾರಣ ಮಾರ್ಗದ ಮೂಲಕ ಅವರು ಸನ್ನಿಧಾನಂ ತಲುಪಲಿದ್ದಾರೆ. ಭದ್ರತಾ ವ್ಯವಸ್ಥೆಗಳನ್ನು ಈಗಾಗಲೇ ಬಲಪಡಿಸಲಾಗಿದ್ದು, ಇತ್ತೀಚೆಗೆ ಬೆಂಗಾವಲು ಪಡೆ ಚಲನೆಯ ಪೂರ್ವಾಭ್ಯಾಸ ನಡೆಸಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.


ಭಾನುವಾರ ಪೂರ್ವ ಭದ್ರತಾ ಪರಿಶೀಲನೆಯಲ್ಲಿ ಕ್ಷಿಪ್ರ ಕಾರ್ಯ ಪಡೆ, ಅಡ್ವಾನ್ಸ್ ಪೆಟ್ರೋಲಿಂಗ್ ತಂಡ, ಶ್ವಾನ ದಳ, ರಕ್ಷಣಾ ತಂಡ ಸೇರಿದಂತೆ ಭದ್ರತಾ ತಂಡಗಳು ಸಮಗ್ರ ತಪಾಸಣೆ ನಡೆಸಿವೆ.


ರಾಷ್ಟ್ರಪತಿ ಅವರು ಬುಧವಾರ ಬೆಳಗ್ಗೆ ೧೦ ಗಂಟೆ ಸುಮಾರಿಗೆ ನೀಲಕ್ಕಲ್ ಹೆಲಿಪ್ಯಾಡ್‌ಗೆ ಆಗಮಿಸಿ, ರಸ್ತೆ ಮೂಲಕ ಪಂಬಾಗೆ ತೆರಳಲಿದ್ದಾರೆ. ಪಂಬಾದಿಂದ ಸನ್ನಿಧಾನಕ್ಕೆ ವಿಶೇಷ ಹೊಸ ಗೂರ್ಖಾ ತುರ್ತು ವಾಹನದಲ್ಲಿ ಆರು ಬೆಂಗಾವಲು ವಾಹನಗಳೊಂದಿಗೆ ಪ್ರಯಾಣಿಸಲಿದ್ದಾರೆ. ಪೂಜಾ ದರ್ಶನದ ನಂತರ, ಅವರು ಸನ್ನಿಧಾನಂ ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಬಳಿಕ ಸಂಜೆ ಹೆಲಿಕಾಪ್ಟರ್ ಮೂಲಕ ತಿರುವನಂತಪುರಂಗೆ ಹಿಂತಿರುಗಲಿದ್ದಾರೆ.


ಗುರುವಾರ ರಾಜಭವನದಲ್ಲಿ ಮಾಜಿ ರಾಷ್ಟ್ರಪತಿ ಕೆ. ಆರ್. ನಾರಾಯಣನ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ನಂತರ ವರ್ಕಳದ ಶಿವಗಿರಿ ಮಠದಲ್ಲಿ ಶ್ರೀನಾರಾಯಣ ಗುರುಗಳ ಮಹಾ ಸಮಾಧಿ ಶತಮಾನೋತ್ಸವ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಪ್ಲಾಟಿನಂ ಜುಬಿಲಿ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.


ಅಕ್ಟೋಬರ್ ೨೪ರಂದು ಎರ್ನಾಕುಲಂನ ಸೇಂಟ್ ತೆರೇಸಾ ಕಾಲೇಜಿನ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ದೆಹಲಿಗೆ ಹಿಂತಿರುಗಲಿದ್ದಾರೆ.