ಕುಡಿಯಬೇಡಿ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ !

ಯಾದಗಿರಿ,ಫೆ.10-ಕುಡಿತದ ಚಟಕ್ಕೆ ಒಳಗಾಗಿದ್ದ ತಾಯಿ ತನ್ನ 11 ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆಗೈದಿರುವ ಅಮಾನವೀಯ ಕೃತ್ಯ ನಗರದ ರಾಜೀವ್ ಗಾಂಧಿ ನಗರದಲ್ಲಿ ನಡೆದಿದೆ.
ಮೃತ ಬಾಲಕಿಯನ್ನು ಪ್ರತಿಭಾ (11) ಎಂದು ಗುರುತಿಸಲಾಗಿದೆ. ಆರೋಪಿತೆಯನ್ನು ನಿರ್ಮಲಾ ಎಂದು ಪೆÇಲೀಸರು ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿ ಪ್ರಕಾರ, ನಿರ್ಮಲಾ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಗಲಾಟೆ ಮಾಡುತ್ತಿದ್ದಳು. ಮನೆಯಲ್ಲಿನ ಜಗಳಗಳು ಸಾಮಾನ್ಯವಾಗಿದ್ದವು ಎನ್ನಲಾಗಿದೆ.
ಘಟನೆಯ ದಿನವೂ ನಿರ್ಮಲಾ ಕುಡಿತದ ಮತ್ತಿನಲ್ಲಿ ಮನೆಗೆ ಬಂದಿದ್ದು, ಈ ವೇಳೆ ತಾಯಿಯ ವರ್ತನೆ ಬಗ್ಗೆ ಬಾಲಕಿ ಪ್ರತಿಭಾ ಪ್ರಶ್ನಿಸಿದ್ದಾಳೆ ಎಂದು ಹೇಳಲಾಗುತ್ತಿದೆ. “ಕುಡಿಯಬೇಡಿ” ಎಂದು ಮಗಳು ಕೇಳಿದ್ದೇ ತಾಯಿಯ ಆಕ್ರೋಶಕ್ಕೆ ಕಾರಣವಾಯಿತೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಆಕ್ರೋಶದ ಅತಿರೇಕದಲ್ಲಿ ನಿರ್ಮಲಾ, ಹೆತ್ತ ಮಗಳೆಂದೂ ಪರಿಗಣಿಸದೆ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೊಲೆ ಬಳಿಕ ಘಟನೆಗೆ ಆತ್ಮಹತ್ಯೆ ಬಣ್ಣ ಹಚ್ಚಲು ಯತ್ನಿಸಿದ ಆರೋಪವೂ ನಿರ್ಮಲಾಳ ಮೇಲಿದೆ.
ಮನೆಯ ಪ್ಯಾನ್‍ಗೆ ಸೀರೆ ಕಟ್ಟಿ, ಮಗಳು ನೇಣು ಬಿಗಿದುಕೊಂಡಂತೆ ದೃಶ್ಯ ಸೃಷ್ಟಿಸಿ ಪೆÇಲೀಸರನ್ನು ತಪ್ಪಿಸಲು ಯತ್ನಿಸಿದ್ದಾಳೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ. ಆದರೆ ಘಟನೆ ಅನುಮಾನಾಸ್ಪದವಾಗಿ ಕಂಡ ಹಿನ್ನೆಲೆಯಲ್ಲಿ ಪೆÇಲೀಸರು ಪರಿಶೀಲನೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ಯಾದಗಿರಿ ಟೌನ್ ಪೆÇಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪ್ರಾಥಮಿಕ ವರದಿ ಆಧರಿಸಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿತ ತಾಯಿ ನಿರ್ಮಲಾಳನ್ನು ಪೆÇಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಯಾದಗಿರಿ ನಗರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಪೂರ್ಣ ಸತ್ಯಾಂಶ ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ತನಿಖೆ ಬಳಿಕವೇ ಸ್ಪಷ್ಟವಾಗಲಿದೆ ಎಂದು ಪೆÇಲೀಸ್ ಮೂಲಗಳು ತಿಳಿಸಿವೆ.