
ಮೈಸೂರು,ಅ.೨೯-ಹುಣಸೂರು ತಾಲ್ಲೂಕಿನ ಕಪ್ಪನಾಯನ ಕಾಲೋನಿ – ಎಮ್ಮೆಕೊಪ್ಪಲು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ವಿದ್ಯುತ್ ಆಘಾತದಿಂದ ತಾಯಿ ಮತ್ತು ಮಗ ಸಾವನ್ನಪ್ಪಿದ್ದಾರೆ. ಮೃತರನ್ನು ತಾಯಿ ನೀಲಮ್ಮ (೪೨) ಮತ್ತು ಮಗ ಹರೀಶ್ (೨೪) ಎಂದು ಗುರುತಿಸಲಾಗಿದೆ.
ತಮ್ಮ ಜಮೀನಿನಲ್ಲಿ ಬೆಳೆದಿದ್ದ ಜೋಳವನ್ನು ಪರಿಶೀಲಿಸಲು ಹೋಗುತ್ತಿದ್ದಾಗ ತಾಯಿ ಮತ್ತು ಮಗ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ಜಮೀನಿನ ಬಳಿಯ ಬೇಲಿಯ ಬಳಿ ಬಿದ್ದಿದ್ದ ವಿದ್ಯುತ್ ತಂತಿ ಮೊದಲು ಹರೀಶ್ ಗೆ ತಗುಲಿದೆ. ಅವರು ನೋವಿನಿಂದ ಬಳಲುತ್ತಿರುವುದನ್ನು ನೋಡಿದ ತಾಯಿಯೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದಾಗ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ. ಪರಿಣಾಮವಾಗಿ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ವಿದ್ಯುತ್ ಆಘಾತಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ ಮತ್ತು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ಕೋರಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

































