
ಬೆಳಗಾವಿ, ಜೂ. ೧೩- ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಚುರುಕಾಗಿದ್ದು, ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿವೆ. ಮನೆ ಗೋಡೆ ಕುಸಿದು ಓರ್ವ ವೃದ್ಧೆ ಸಾವನ್ನಪ್ಪಿದ್ದಾರೆ. ಮತ್ತೊಂದೆಡೆ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಆಟೋ ಸಮೇತ ಕೊಚ್ಚಿಕೊಂಡು ಹೋಗುತ್ತಿದ್ದ ಚಾಲಕನನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.
ಗೋಕಾಕ್ ತಾಲ್ಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಭಾರಿ ಮಳೆಯಿಂದಾಗಿ ಮಣ್ಣಿನ ಗೋಡೆ ಕುಸಿದು ಫಕೀರವ್ವ ಲಕ್ಷ್ಮಣ ಹಾವೇರಿ (೬೫) ವೃದ್ಧೆ ಸಾವನ್ನಪ್ಪಿದ್ದಾರೆ.
ಮಣ್ಣಿನಲ್ಲಿ ಸಿಲುಕಿದ್ದ ವೃದ್ಧೆಯನ್ನು ಸ್ಥಳೀಯರು ಹೊರತೆಗೆದಿದ್ದಾರೆ. ಆದರೆ ಅಷ್ಟರೊಳಗೆ ವೃದ್ಧೆ ಸಾವನ್ನಪ್ಪಿದ್ದರು.
ಗೋಕಾಕ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.
ಮತ್ತೊಂದೆಡೆ ಯರಗಟ್ಟಿ ತಾಲ್ಲೂಕಿನ ಚಿಕ್ಕಬೂದನೂರ ಗ್ರಾಮದ ಹೊರವಲಯದಲ್ಲಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಆಟೋ ದಾಟಿಸುವ ವೇಳೆ ನೀರಿನ ರಭಸಕ್ಕೆ ಆಟೋ ಸಮೇತ ಚಾಲಕ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದನು. ಇದನ್ನು ಗಮನಿಸಿದ ಗ್ರಾಮಸ್ಥರು ಹಗ್ಗ ಹರಿಬಿಟ್ಟು ಚಾಲಕನನ್ನು ರಕ್ಷಿಸಿದ್ದಾರೆ. ಇದರಿಂದಾಗಿ ಆಟೋ ಚಾಲಕನ ಪ್ರಾಣ ಉಳಿಯಿತು. ಮುರಗೋಡ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ನಗರ ಹೊರತುಪಡಿಸಿ ಬಯಲಹೊಂಗಲ ಸವದತ್ತಿ ಗೋಕಾಕ್ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ವರ್ಷಧಾರೆಯಾಗಿದ್ದು ಹಳ್ಳ ಕೊಳ್ಳಗಳು ಉಕ್ಕಿ ಹರಿಯುತ್ತಿದೆ. ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ಸಾರ್ವಜನಿಕರು ಬವಣೆ ಪಡುವಂತಾಯಿತು.