
೧.೭೬ ಲಕ್ಷ ಹೆಕ್ಟೇರ್ ಬೆಳೆ ನಾಶ
ಅಮರಾವತಿ, ಅ. ೨೯- ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಅಪ್ಪಳಿಸಿರುವ ಮೋಂಥಾ ಚಂಡಮಾರುತ ಅಪಾರ ಹಾನಿ ಉಂಟು ಮಾಡಿದೆ. ಚಂಡಮಾರುತದ ಅಬ್ಬರಕ್ಕೆ ೧.೭೬ ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ. ಒಡಿಶಾದಲ್ಲೂ ಮೋಂಥಾ ಪರಿಣಾಮ ೧೫ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಇಂದು ಬೆಳಗಿನ ಜಾವ ಆಂಧ್ರ ಕರಾವಳಿ ತೀರಕ್ಕೆ ಮೋಂಥಾ ಚಂಡಮಾರುತ ಅಪ್ಪಳಿಸಿದ್ದು, ಅದು ಈಗ ದುರ್ಬಲಗೊಂಡಿದೆ. ೬ ಗಂಟೆಗಳಲ್ಲಿ ಚಂಡಮಾರುತ ದುರ್ಬಲಗೊಂಡು ವಾಯುವ್ಯ ದಿಕ್ಕಿನತ್ತ ಚಲಿಸಿತು ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ಮುಂದಿನ ೬ ಗಂಟೆಗಳಲ್ಲಿ ಚಂಡಮಾರುತ ತೀವ್ರತೆಯನ್ನು ಕಾಯ್ದೆಕೊಳ್ಳುವ ಸಾಧ್ಯತೆಯಿದ್ದು, ೬ ಗಂಟೆಗಳಲ್ಲಿ ಆಳವಾದ ವಾಯುವ್ಯಕ್ಕೆ ಚಲಿಸಿ, ದುರ್ಬಲಗೊಳ್ಳುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯ ಮಕನಗುಡೆಮ್ ಗ್ರಾಮದಲ್ಲಿ ಚಂಡಮಾರುತದಿಂದಾಗಿ ಮಹಿಳೆ ಮೇಲೆ ಮರ ಬಿದ್ದು ಮೃತಪಟ್ಟಿದ್ದಾರೆ. ಚಂಡಮಾರುತದ ರುದ್ರನರ್ತನಕ್ಕೆ ಆಂಧ್ರಪ್ರದೇಶದಲ್ಲಿ ೩೮ ಸಾವಿರ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದು ನಿಂತಿದ್ದ ಬೆಳೆಗಳು ಮತ್ತು ೧.೩೮ ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ತೋಟಗಾರಿಕೆ ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯಲ್ಲೂ ಭಾರೀ ಮಳೆ ಸುರಿದಿದ್ದು. ೭೬ ಸಾವಿರ ಜನರನ್ನು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಿ ರಾಜ್ಯ ಸರ್ಕಾರ ೨೧೯ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿದೆ.
ಕೃಷ್ಣ, ಎಲೂರು, ಮತ್ತು ಕಾಕಿನಾಡ ಸೇರಿದಂತೆ ಚಂಡಮಾರುತ ಬಾಧಿತ ಜಿಲ್ಲೆಗಳ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಸರ್ಕಾರ ತೀರ್ಮಾನಿಸಿದೆ. ತುರ್ತುವೈದ್ಯಕೀಯ ಸೇವೆಗಳಿಗೆ ವಿನಾಯಿತಿ ನೀಡಲಾಗಿದೆ. ಪೂರ್ವ ಕರಾವಳಿ ರೈಲ್ವೆ ವಲಯದ ವಾಲ್ಟೇರ್ ವಿಭಾಗದಲ್ಲಿ ಭಾರತೀಯ ರೈಲ್ವೆ ಬಹುತರಬೇತಿ ರೈಲುಗಳನ್ನು ರದ್ದುಪಡಿಸಲಾಗಿದೆ. ಹಾಗೆಯೇ ಕೆಲವು ರೈಲುಗಳ ಸಂಚಾರವನ್ನು ಮರು ನಿಗದಿಮಾಡಿದೆ.
ವಿಮಾನಗಳ ಹಾರಾಟ ರದ್ದು
ವಿಶಾಖಪಟ್ಟಣ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ೩೨ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ಮತ್ತೊಂದೆಡೆ ವಿeಯವಾಡ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಸಬೇಕಾಗಿದ್ದ ೧೬ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ. ೩೭೭೮ ಗ್ರಾಮಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ತಿಳಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಆಧರಿಸಿ ಪ್ರಸ್ತುತ ಮಚಲಿಪಟ್ಟಣಂ ಮತ್ತು ವಿಶಾಖಪಟ್ಟಣದಲ್ಲಿರುವ ಡಾಪ್ಲರ್ ಹವಾಮಾನ ರಾಡರ್ ಜೊತೆಗೆ ಕರಾವಳಿ ವಿಕ್ಷಣಾಲಯಗಳು ಸ್ವಯಂಚಾಲಿತ ಹವಾಮಾನ ಕೇಂದ್ರಗಳು, ಹಡಗುಗಳು ಹಾಗೂ ಉಪಗ್ರಹಗಳು ನಿರಂತರವಾಗಿ ಮೇಲ್ವೀಚಾರಣೆ ನಡೆಸುತ್ತಿವೆ.
ಒಡಿಶಾದಲ್ಲೂ ಮಳೆ
ಒಡಿಶಾ ಮತ್ತು ಕರಾವಳಿ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಮೋಂಥಾ ಚಂಡಮಾರುತ ಪರಿಣಾಮ ಭಾರೀ ಮಳೆಯಾಗಿದೆ. ಭೂಕುಸಿತದಿಂದ ಮನೆಗಳಿಗೆ ಹಾನಿಯಾಗಿದ್ದು, ದಕ್ಷಿಣ ಒಡಿಶಾದ ಮಲ್ಕನ್ ಗಿರಿ, ಕೊರಾಪಟ್, ರಾಯಘಡ, ಗಜಪತಿ, ಗಂಜಾಂ, ಕಂಧಮಲ್, ಕಲಹಂಡಿ ಮತ್ತು ನಬಂರಂಗ್ ಜಿಲ್ಲೆಗಳಲ್ಲಿ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ೧೫ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಣ್ಣಿನ ಗೋಡೆ ಕುಸಿದು ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ. ಭಾರೀ ಗಾಳಿಯಿಂದಾಗಿ ಮನೆಯ ಮೇಲ್ಚಾವಣಿ ಹಾರಿಹೋಗಿದೆ.
ಮೋಂಥಾ ಚಂಡಮಾರುತ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪರಿಸ್ಥಿತಿ ಅವಲೋಕನ ನಡೆಸಿ, ಪರಿಹಾರ ಕಾರ್ಯಾಚರಣೆಗಾಗಿ ಎನ್‌ಡಿಆರ್‌ಎಫ್, ಒಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸೇವೆಯನ್ನು ನಿಯೋಜಿಸಲಾಗಿದೆ.
ಚಂಡಮಾರುತ ದುರ್ಬಲ
ಆಂಧ್ರ ಪ್ರದೇಶದ ಕರಾವಳಿ ತೀರಕ್ಕೆ ನಿನ್ನೆ ರಾತ್ರಿ ಮೋಂಥಾ ಅಪ್ಪಳಿಸಿದ ನಂತರ ಚಂಡಮಾರುತ ದುರ್ಬಲವಾಗಿದ್ದು ತೀವ್ರ ವಾಯುಭಾರ ಕುಸಿತಗೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ವಾಯುಭಾರ ಕುಸಿತದ ಪರಿಣಾಮವಾಗಿ ಭಾರೀ ಮಳೆ ಮತ್ತು ಬಲವಾದ ಗಾಳಿ ಕಡಿಮೆಯಾಗಿದ್ದು ಮೋಂಥಾ ಅಬ್ಬರ ಕಡಿಮೆಯಾಗಿದೆ. ನಿನ್ನೆ ಸಂಜೆ ಕರಾವಳಿ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸಿದ ಹಿನ್ನೆಲೆಯಲ್ಲಿ ತೀವ್ರ ಪರಿಣಾಮ ಎದುರಿಸಿದ ಜನತೆ ನಿಟ್ಟಿಸಿರು ಬಿಡುವಂತಾಗಿದೆ.
“ಆಂಧ್ರಪ್ರದೇಶದ ಕರಾವಳಿಯಲ್ಲಿ ಆರ್ಭಟಿಸಿದ್ದ ‘ಮೋಂಥಾ’ ಚಂಡಮಾರುತ ವಾಯುವ್ಯ ದಿಕ್ಕಿಗೆ ಸುಮಾರು ೧೦ ಕಿ.ಮೀ ವೇಗದಲ್ಲಿ ಚಲಿಸಿ ದುರ್ಬಲಗೊಂಡಿದೆ . ಸಂಜೆ ವೇಳೆಗೆ ಮತ್ತಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಂಡಮಾರುತದ ಕೇಂದ್ರ ನರಸಾಪುರದ ಪಶ್ಚಿಮ-ವಾಯುವ್ಯಕ್ಕೆ ಸುಮಾರು ೨೦ ಕಿಮೀ, ಮಚಲಿಪಟ್ಟಣಂನಿಂದ ೫೦ ಕಿಮೀ ಈಶಾನ್ಯಕ್ಕೆ ಮತ್ತು ಕಾಕಿನಾಡದಿಂದ ೯೦ ಕಿಮೀ ಪಶ್ಚಿಮ-ನೈಋತ್ಯದಲ್ಲಿದೆ. ಮಚಲಿಪಟ್ಟಣಂ ಮತ್ತು ವಿಶಾಖಪಟ್ಟಣಂನಲ್ಲಿರುವ ಡಾಪ್ಲರ್ ರಾಡಾರ್‌ಗಳ ಮೂಲಕ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.
ಒಳನಾಡಿನಲ್ಲಿ ಚಲಿಸಿ ಶಕ್ತಿ ಕಳೆದುಕೊಳ್ಳಲು ಪ್ರಾರಂಭಿಸಿದ ಕಾರಣ ಚಂಡಮಾರುತದ ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಗೋದಾವರಿ, ಕೃಷ್ಣ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ಬೀಸುತ್ತಲೇ ಇತ್ತು, ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಎಚ್ಚರಿಕೆ ನೀಡಲಾಗಿದೆ.

































