ಮೋಘಾ (ಬಿ) : ಮೂರು ಕಣ್ಣುಳ್ಳ ಆಕಳು ಕರು ಜನನ

ಆಳಂದ,ಅ.16-ತಾಲೂಕಿನ ಮೊಘಾ (ಬಿ) ಗ್ರಾಮದಲ್ಲಿ ಬುಧವಾರ (ಅಕ್ಟೋಬರ್ 15, 2025) ಬೆಳಗಿನ ಜಾವ ಒಂದು ಅಪರೂಪದ ಘಟನೆ ನಡೆದಿದೆ.
ಗ್ರಾಮದ ಮಲ್ಕಣ್ಣ ಪರಿಟ್ ಎಂಬುವರಿಗೆ ಸೇರಿದ ಆಕಳು ವಿಶೇಷ ಲಕ್ಷಣಗಳನ್ನು ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಈ ಕರುವಿನ ಹಣೆಯ ಮೇಲೆ ಒಂದು ಕಣ್ಣಿನ ಗುಡ್ಡೆಯಂತಿರುವ ಮೂರನೇ ಕಣ್ಣು ಮತ್ತು ಒಂದೇ ಮುಖದಲ್ಲಿ ಎರಡು ಭಾಗಗಳಾಗಿ ಎರಡು ಮೂಗುಗಳನ್ನು ಹೊಂದಿರುವುದು ಗ್ರಾಮಸ್ಥರ ಗಮನ ಸೆಳೆದಿದೆ. ಈ ವಿಶೇಷ ಕರು ಹೊಲದಲ್ಲಿ ಜನಿಸಿದ್ದು, ಸ್ಥಳೀಯರು ಮತ್ತು ಸುತ್ತಮುತ್ತಲಿನ ಜನರಲ್ಲಿ ಕುತೂಹಲ ಮೂಡಿಸಿದೆ. ಜಿಡಗಾ ಪಶು ಆಸ್ಪತ್ರೆಯ ವೈದ್ಯರು ಕರುವಿನ ಆರೋಗ್ಯವನ್ನು ಪರಿಶೀಲಿಸಿದ್ದು, ಇದು ಶಕ್ತಿಯಿಂದ ಕೂಡಿದೆ ಎಂದು ತಿಳಿಸಿದ್ದಾರೆ. ಆದರೆ, ಕರುವು ಸ್ವಯಂಪ್ರೇರಿತವಾಗಿ ತಾಯಿಯ ಹಾಲು ಕುಡಿಯದಿರುವುದರಿಂದ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಕರುವಿನ ಪಾಲಕ ಮಲ್ಕಣ್ಣ ಪರಿಟ್ ಮಾತನಾಡಿ, “ಕರುವಿನ ಮುಖದ ವಿಶೇಷ ರಚನೆಯಿಂದಾಗಿ ಅದು ಸ್ವತಃ ಹಾಲು ಕುಡಿಯುತ್ತಿಲ್ಲ. ಆದರೆ, ತಾಯಿಯ ಕೆಚ್ಚಲಿಗೆ ಮುಖವನ್ನು ಒತ್ತಿದಾಗ ಹಾಲು ಕುಡಿಯುತ್ತಿದೆ. ಈ ಕುರಿತು ಪಶುವೈದ್ಯರನ್ನು ಭೇಟಿಯಾಗಲು ಮನವಿ ಮಾಡಿದ್ದೇವೆ. ನಾಳೆ ಎಡಿ ಭೇಟಿಯಾಗುವುದಾಗಿ ತಿಳಿಸಿದ್ದಾರೆ,” ಎಂದು ಹೇಳಿದ್ದಾರೆ. ಈ ಅಪರೂಪದ ಘಟನೆಯಿಂದಾಗಿ ಮೊಘಾ (ಬಿ) ಗ್ರಾಮವು ಸ್ಥಳೀಯವಾಗಿ ಚರ್ಚೆಯ ಕೇಂದ್ರಬಿಂದುವಾಗಿದ್ದು, ಈ ವಿಶೇಷ ಕರುವನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.