Home ಮುಖಪುಟ ಸುದ್ದಿ ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಶಾಸಕರ ಮೊಕ್ಕಾಂ

ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಶಾಸಕರ ಮೊಕ್ಕಾಂ

ನವದೆಹಲಿ, ಏ. ೧೩- ಸಚಿವ ಸ್ಥಾನಕ್ಕಾಗಿ ಆಗ್ರಹಿಸಿಕಾಂಗ್ರೆಸ್‌ನ ಹಿರಿಯ ಶಾಸಕರುಗಳು ದೆಹಲಿಯಲ್ಲಿ ಪಕ್ಷದ ವರಿಷ್ಠರ ಭೇಟಿಗಾಗಿ ಕಾದು ಕುಳಿತಿದ್ದಾರೆ.


ರಾಜ್ಯ ಸಚಿವ ಸಂಪುಟವನ್ನು ಪುನಾರಚಿಸಿ ಹಿರಿಯ ಶಾಸಕರುಗಳಿಗೆ ಸಚಿವ ಪಟ್ಟ ನೀಡಬೇಕು ಎಂಬ ಬೇಡಿಕೆಯನ್ನಿಟ್ಟುಕೊಂಡು ಕಾಂಗ್ರೆಸ್‌ನ ೨೫ ಕ್ಕೂ ಹೆಚ್ಚು ಶಾಸಕರುಗಳು ನಿನ್ನೆ ದೆಹಲಿಗೆ ತೆರಳಿದ್ದರು. ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ಕೈ ಶಾಸಕರು, ಇಂದೂ ಮತ್ತು ನಾಳೆ ದೆಹಲಿಯಲ್ಲೇ ಉಳಿಯದಲಿದ್ದು, ಪಕ್ಷದ ವರಿಷ್ಠರನ್ನು ಭೇಟಿ ಮಾಡುವರು ಎಂದು ಹೇಳಲಾಗಿದೆ.


ದೆಹಲಿಯಲ್ಲಿರುವ ಕೈ ಶಾಸಕರುಗಳಿಗೆ ಇದುವರೆಗೂ ವರಿಷ್ಠರ ಭೇಟಿಗೆ ಸಮಯ ಅವಕಾಶ ಸಿಕ್ಕಿಲ್ಲ. ಇಂದು ಸಂಜೆಯೊಳಗೆ ಕೈ ಶಾಸಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುವರು ಎಂದು ಹೇಳಲಾಗಿದೆ.
ರಾಜ್ಯದ ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ್ದು, ಸಂಪುಟ ಪುನಾರಚಿಸಿ ಹಿರಿಯ ಶಾಸಕರಿಗೆ ಅವಕಾಶ ನೀಡಿ ಎಂದು ಸುಮಾರು ೪೦ ಕ್ಕೂ ಹೆಚ್ಚು ಶಾಸಕರು ಕಳೆದ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸಭೆ ಸೇರಿ ಒತ್ತಾಯಿಸಿದ್ದರು.


ಉಪಚುನಾವಣೆ ಕದನ ಮುಗಿಯುತ್ತಿದ್ದಂತೆಯೇ ಇವರೆಲ್ಲಾ ದೆಹಲಿ ಯಾತ್ರೆ ನಡೆಸಿ ವರಿಷ್ಠರ ಮೇಲೆ ಸಂಪುಟ ಪುನಾರಚಿಸುವ ಒತ್ತಡ ನಡೆಸಿದ್ದಾರೆ.
ಕೈ ಶಾಸಕರ ಈ ಒತ್ತಡಕ್ಕೆ ಹೈಕಮಾಂಡ್ ಮಣಿಯಲಿದೆಯೇ, ಇಲ್ಲ ನಾಯಕತ್ವ ಬದಲಾವಣೆ ವಿಚಾರ ಇತ್ಯರ್ಥವಾಗುವವರೆಗೂ ಸಂಪುಟ ಪುನಾರಚನೆಯನ್ನು ಮುಂದೂಡಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.


ಕಾಂಗ್ರೆಸ್‌ನ ಹಿರಿಯ ಶಾಸಕರುಗಳಾದ ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ, ಸಿ. ಪುಟ್ಟರಂಗಶೆಟ್ಟಿ, ಹಂಪನಗೌಡ ಬಾದರ್ಲಿ, ಬಸವರಾಜ್ ನೀಲಣ್ಣ ಶಿವಣ್ಣನವರ್, ಎ. ಆರ್. ಕೃಷ್ಣಮೂರ್ತಿ, ಯು.ಬಿ. ಬಣಕಾರ್, ಜಿ.ಎಸ್. ಪಾಟೀಲ್, ಎಸ್.ಎನ್.ಸುಬ್ಬಾರೆಡ್ಡಿ, ಡಿ.ಜಿ. ಶಾಂತನಗೌಡ, ಷಡಾಕ್ಷರಿ, ಎಸ್.ಎನ್. ನಾರಾಯಣಸ್ವಾಮಿ, ಲಕ್ಷ್ಮಣಸವದಿ, ಅಪ್ಪಾಜಿ ನಾಡಗೌಡ, ಪ್ರಿಯಾಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಆನೇಕಲ್ ಶಿವಣ್ಣ, ನರೇಂದ್ರಸ್ವಾಮಿ, ವಿನಯ್ ಕುಲಕರ್ಣಿ, ರಾಘವೇಂದ್ರ ಹೆತ್ನಾಳ್, ಬೇಳೂರು ಗೋಪಾಲಕೃಷ್ಣ, ಎ.ಆರ್. ಕೃಷ್ಣಮೂರ್ತಿ, ಯಶವಂತ್ ರಾಯ ಗೌಡ ಪಾಟೀಲ್, ಜಿ.ಟಿ. ಪಾಟೀಲ್, ಬಸವರಾಜ ಶಿವಣ್ಣ್ ನವರು, ಸುಬ್ಬರೆಡ್ಡಿ, ಸೇರಿದಂತೆ ೨೬ ಕ್ಕೂ ಹೆಚ್ಚು ಶಾಸಕರು ನಿನ್ನೆಯೆ ದೆಹಲಿಗೆ ತೆರಳಿದ್ದರು.