
ಕಲಬುರಗಿ,ಅ.10: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿದ ಆರೋಪ ಸಾಬೀತಾದ್ದರಿಂದ, ಕಾನೂನು ಸಂಘರ್ಷಕ್ಕೊಳಗಾದ ಬಾಲಕನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಕಠಿಣಶಿಕ್ಷೆ ವಿಧಿಸಿದೆ.
2022 ರ ನವೆಂಬರ್ 1 ರಂದು ಅಫಜಲಪುರ ತಾಲೂಕಿನ ಗ್ರಾಮವೊಂದರ ಕಬ್ಬಿನ ತೋಟದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಬಾಲಕನು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಎಸಗಿದ್ದನು.ಈ ಕುರಿತು ಆಗಿನ ತನಿಖಾಧಿಕಾರಿಗಳಾಗಿದ್ದ ಸಿಪಿಐ ಬಾಸು ಚವ್ಹಾಣ ಮತ್ತು ಪಿಎಸ್‍ಐ ತಿರುಮಲೇಶ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಸಾಕ್ಷಾಧಾರಗಳನ್ನು ಪರಿಶೀಲಿಸಿ ಎರಡೂ ಪಕ್ಷದವರ ವಾದವಿವಾದಗಳನ್ನು ಆಲಿಸಿದ ನಂತರ ನ್ಯಾಯಾಧೀಶ ಜಿ.ಎಲ್. ಲಕ್ಷ್ಮೀನಾರಾಯಣ ಅವರು ಶಿಕ್ಷೆಯ ಪ್ರಮಾಣ ಪ್ರಕಟಿಸಿ ಆದೇಶಿಸಿದ್ದಾರೆ.
ಸರಕಾರದ ಪರವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕ ಎಸ್.ಆರ್ ನರಸಿಂಹಲು ಅವರು ವಾದವನ್ನು ಮಂಡಿಸಿದ್ದರು.